Site icon Vistara News

World Asthma Day: ಸರಾಗವಾಗಿರಲಿ ಸರ್ವರ ಉಸಿರು

World Asthma day Special Information In Kannada

#image_title

ಇಂದು ವಿಶ್ವ ಅಸ್ತಮಾ ದಿನ (World Asthma Day). ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ ತಿಂಗಳ ಮೊದಲ ಮಂಗಳ ವಾರವನ್ನು ಅಸ್ತಮಾ ಜಾಗೃತಿ ಮೂಡಿಸುವುದಕ್ಕೆ ಮೀಸಲಿರಿಸಲಾಗಿದೆ. ಶ್ವಾಸಕೋಶದಲ್ಲಿನ ಗಾಳಿ ಕೊಳವೆಗಳು ಮತ್ತದರ ಕೋಶಗಳು ಊದಿಕೊಂಡು ಉಸಿರಾಟಕ್ಕೆ ತೊಂದರೆಯಾಗುವ ಅವಸ್ಥೆಯಿದು. ಇದರಿಂದಾಗಿ ಉಬ್ಬಸ, ಉಸಿರಾಟದ ತೊಂದರೆ, ಎದೆ ಬಿಗಿಯುವುದು, ನೆಗಡಿ, ಕೆಮ್ಮು, ವಿಪರೀತ ಕಫ, ಅಲರ್ಜಿ ಇತ್ಯಾದಿ ಸಮಸ್ಯೆಗಳು ಕಾಡಿಸುತ್ತವೆ. ಹಗಲಿನಲ್ಲಿ ಕಡಿಮೆ ಇದ್ದು ರಾತ್ರಿ ಸಮಯದಲ್ಲಿ ಈ ಸಮಸ್ಯೆಯ ತೀವ್ರತೆ ಹೆಚ್ಚಬಹುದು. ಮಕ್ಕಳು, ವಯಸ್ಕರು, ವೃದ್ಧರೆನ್ನದೆ ಎಲ್ಲರನ್ನೂ ಸಮಾನವಾಗಿ ಕಾಡುವ ದೀರ್ಘಕಾಲೀನ ರೋಗವಿದು.

ಅಸ್ತಮಾ ಕುರಿತಾದ ಜಾಗೃತಿ ಮತ್ತು ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ದೊರೆಯುವ ಬಗ್ಗೆ ಹೆಚ್ಚಿನ ಒತ್ತು ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, “ಸರ್ವರಿಗೂ ಅಸ್ತಮಾ ಆರೈಕೆ” ನಮ್ಮ ಧ್ಯೇಯವಾಗಿರಬೇಕೆಂದು ಸಾರಿದೆ. 1993ರಲ್ಲಿ ಮೊದಲ ಬಾರಿಗೆ ವಿಶ್ವ ಅಸ್ತಮಾ ದಿನವನ್ನು (World Asthma Day) ಘೋಷಿಸುವ ಸಂದರ್ಭದಲ್ಲಿ 35 ದೇಶಗಳು ಭಾಗವಹಿಸಿದ್ದವು. ಸಾಮಾನ್ಯವಾಗಿ ಅಸ್ತಮಾ ಕಾಡುವುದು ಚಳಿಗಾಲದಲ್ಲಿ ಹೆಚ್ಚು ಎಂಬುದು ಹೌದಾದರೂ ವರ್ಷದ ಉಳಿದ ದಿನಗಳಲ್ಲಿ ತೊಂದರೆ ಕೊಡಬಾರದೆಂದೇನೂ ಇಲ್ಲ. ಮಳೆಗಾಲದಲ್ಲಿ ಮೋಡ ಕವಿದ ಸ್ಥಿತಿ ಇದ್ದಾಗ ಉಸಿರಾಡುವುದು ಕಷ್ಟವಾಗಬಹುದು. ಬೇಸಿಗೆಯಲ್ಲೂ ಇದರ ಬಾಧೆ ಇರುವ ಸಾಧ್ಯತೆ ಇಲ್ಲದಿಲ್ಲ.

ಅತಿಯಾದ ಸೆಕೆ: ಉಷ್ಣತೆ ಅತಿಯಾಗಿ ಹೆಚ್ಚಾದರೂ ಶ್ವಾಸಕೋಶಗಳಿಗೆ ತೊಂದರೆ ತಪ್ಪಿದ್ದಲ್ಲ. ಬಿಸಿಲಿನ ತಾಪ ಹೆಚ್ಚಿದಂತೆ ವಾತಾವರಣದಲ್ಲಿ ಸೂಕ್ಷ್ಮವಾದ ಧೂಳಿನ ಕಣಗಳು ಹೆಚ್ಚುತ್ತವೆ. ಮಾತ್ರವಲ್ಲ, ಬಿಸಿ ಗಾಳಿಯ ಹೊಡೆತಕ್ಕೆ ಶ್ವಾಸಕೋಶಗಳು ಹೆಚ್ಚಿಗೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಹೊರಗೆ ಹೋಗುವಾಗೆಲ್ಲ ಮುಖಕ್ಕೆ ಸರಿಯಾದ ಮಾಸ್ಕ್ ಹಾಕುವುದು ಒಳ್ಳೆಯದು. ಇದರಿಂದ ಸೂಕ್ಷ್ಮ ಕಣಗಳನ್ನು ದೂರ ಇರಿಸಬಹುದು.

ಇದನ್ನೂ ಓದಿ: Asthma Treatment | ಚಳಿಗಾಲದಲ್ಲಿ ಅಸ್ತಮಾ ಕಾಡದಂತೆ ತಡೆಯುವುದು ಹೇಗೆ?

ಬಟ್ಟೆಗಳು ಜಾಗ್ರತೆ: ಬಿಸಿಲಿನಲ್ಲಿ ಬಟ್ಟೆ ಒಣಗಿಸುವುದು ಸರಿಯಾದ ಕ್ರಮ ಎಂಬುದು ಹೌದು. ಆದರೆ ಧೂಳಿನ ಕಾಲದಲ್ಲಿ ಒದ್ದೆಯ ವಸ್ತ್ರಗಳು ಧೂಳನ್ನು ಹುದುಗಿಸಿಕೊಳ್ಳುತ್ತವೆ. ಇದರಿಂದ ಅಲರ್ಜಿ ಹೆಚ್ಚುತ್ತದೆ. ಹಾಗಾಗಿ ಘೋರ ಬಿಸಿಲಿನ ದಿನಗಳಲ್ಲಿ ಬಟ್ಟೆಗಳನ್ನು ಅಸ್ತಮಾ ಸಮಸ್ಯೆ ಇರುವವರು ಡ್ರೈಯರ್ ನಲ್ಲಿ ಒಣಗಿಸಿಕೊಳ್ಳುವುದು ಒಳ್ಳೆಯದು.

ಔಷಧ ಕಡ್ಡಾಯ: ಯಾವುದೇ ಕಾಲದಲ್ಲೂ ಅಸ್ತಮಾ ಕಾಣಿಸಿಕೊಳ್ಳಬಹುದು. ಹಾಗಾಗಿ ಅಗತ್ಯ ಔಷಧಗಳನ್ನು ತಪ್ಪದೆ ಇರಿಸಿಕೊಳ್ಳಬೇಕು. ಇನ್ಹೇಲರ್ ಮುಂತಾದವುಗಳನ್ನು ತಂಪಾದ ಸ್ಥಳದಲ್ಲಿ ಇರಿಸುವುದು ಅಗತ್ಯ. ಕಾಲಕಾಲಕ್ಕೆ ಪೀಕ್ ಪ್ಲೊ ಮೀಟರ್ ನಿಂದ ಶ್ವಾಸಕೋಶದ ಸ್ಥಿತಿಗತಿಯ ಬಗ್ಗೆ ತಪಾಸಣೆ ಮಾಡಿಕೊಳ್ಳಿ.

ತಡೆಯಬಹುದೇ?: ಸಂಪೂರ್ಣವಾಗಿ ಅಸ್ತಮಾ ತಡೆಯಲು ಆಗದಿದ್ದರೂ, ಪ್ರಯತ್ನವನ್ನು ಮಾಡುವುದರಲ್ಲಿ ಆರೋಗ್ಯಕ್ಕೆ ನಿಶ್ಚಿತವಾಗಿ ಲಾಭವಿದೆ. ಮನೆಯ ಒಳಗಿನ ಮತ್ತು ಹೊರಗಿನ ವಾತಾವರಣ ಆದಷ್ಟು ಶುಚಿಯಾಗಿ ಇರುವಂತೆ ನೋಡಿಕೊಳ್ಳಿ. ಇದರಿಂದ ಅಲರ್ಜಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಹೊಗೆ, ಧೂಳು, ಫಂಗಸ್, ಪರಾಗಗಳು ಇತ್ಯಾದಿಗಳು ಆದಷ್ಟು ದೂರವೇ ಇದ್ದಾರೆ ಕ್ಷೇಮ. ಹಾಸಿಗೆ ಬಟ್ಟೆಗಳನ್ನು ಆಗಾಗ ಬದಲಿಸಿ.

ಅಲರ್ಜಿ ತರುವಂಥ ಆಹಾರಗಳನ್ನು ಮುಟ್ಟದಿರುವುದು ಸುಖ. ಸೋಂಕುಗಳಿಂದ ದೂರ ಇರುವುದಕ್ಕೆ ಶಕ್ತಿಯುತ ಆಹಾರ ಸೇವನೆ ಅಗತ್ಯ. ಇಡೀ ದೇಹದ ಆರೋಗ್ಯ, ಅದರಲ್ಲೂ ಶ್ವಾಸಕೋಶಗಳು ಚೆನ್ನಾಗಿರಬೇಕೆಂದರೆ, ನಿಯಮಿತವಾದ ವ್ಯಾಯಾಮ ಬೇಕು.

Exit mobile version