ನ್ಯೂಯಾರ್ಕ್: ಜನಸಂಖ್ಯೆ ಸ್ಫೋಟದ, ಅದು ಅಭಿವೃದ್ಧಿಗೆ ಅಡ್ಡಿಯಾಗಿರುವ ಪರಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಮೇಲೆ ಬೀಳುವ ಪರಿಣಾಮದ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಜಗತ್ತಿನ ಜನಸಂಖ್ಯೆ (World Population) ಕೆಲವೇ ದಿನದಲ್ಲಿ 800 ಕೋಟಿ ದಾಟಲಿದೆ. ಹೌದು, ಜಾಗತಿಕ ಜನಸಂಖ್ಯೆ ಕುರಿತು ವಿಶ್ವಸಂಸ್ಥೆ ವರದಿಯೊಂದು ಬಿಡುಗಡೆ ಮಾಡಿದ್ದು, ನವೆಂಬರ್ 15ರಂದು ವಿಶ್ವದ ಜನಸಂಖ್ಯೆ 800 ಕೋಟಿ ದಾಟಲಿದೆ ಎಂದು ತಿಳಿಸಿದೆ.
ಹೀಗೆಯೇ ಜನಸಂಖ್ಯೆ ಬೆಳೆಯುತ್ತ ಹೋದರೆ, ವಿಶ್ವದ ಜನಸಂಖ್ಯೆ 2030ರ ವೇಳೆಗೆ 850 ಕೋಟಿ, 2050ರ ವೇಳೆಗೆ 970 ಕೋಟಿ ಹಾಗೂ 2100ರ ವೇಳೆಗೆ 1120 ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ, ಜಾಗತಿಕವಾಗಿ ಜನಸಂಖ್ಯೆ ನಿಯಂತ್ರಣದ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಿದೆ.
ಚೀನಾವನ್ನೇ ಮೀರಿಸಲಿದೆ ಭಾರತ
ಜಗತ್ತಿನಲ್ಲಿಯೇ ಜನಸಂಖ್ಯೆ ಬೆಳವಣಿಗೆಯಲ್ಲಿ ಚೀನಾ ಹಾಗೂ ಭಾರತ ಮುಂದಿವೆ. ಆದರೆ, 2030ರ ವೇಳೆಗೆ ಭಾರತ ಚೀನಾವನ್ನೇ ಮೀರಿಸಲಿದೆ. ಆ ಮೂಲಕ ಪ್ರಪಂಚದಲ್ಲಿಯೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಖ್ಯಾತಿ ಭಾರತದ್ದಾಗಲಿದೆ ಎಂದು ತಿಳಿಸಿದೆ. 2050ರ ವೇಳೆಗೆ ಭಾರತ, ಚೀನಾ ನಂತರದ ಸ್ಥಾನದಲ್ಲಿ ಕ್ರಮವಾಗಿ ಅಮೆರಿಕ, ನೈಜೀರಿಯಾ, ಪಾಕಿಸ್ತಾನ, ಇಂಡೋನೇಷ್ಯಾ, ಬ್ರೆಜಿಲ್, ಕಾಂಗೋ, ಎಥೋಪಿಯಾ ಹಾಗೂ ಬಾಂಗ್ಲಾದೇಶ ಇರಲಿವೆ. ಸದ್ಯ, ವಿಶ್ವದ ಜನಸಂಖ್ಯೆಯಲ್ಲಿ ಶೇ.61ರಷ್ಟು ಅಂದರೆ 470 ಕೋಟಿ ಜನ ಏಷ್ಯಾ ಖಂಡದಲ್ಲಿಯೇ ಇದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಹಿತಿ ನೀಡಿದೆ.
ಇದನ್ನೂ ಓದಿ | ಮತಾಂತರದಿಂದಲೇ ಜನಸಂಖ್ಯೆ ಅಸಮತೋಲನ, ಹೊಸಬಾಳೆ ಹೇಳಿಕೆಗೆ ಪ್ರತಿಪಕ್ಷಗಳಿಂದ ಆಕ್ರೋಶ