ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಈಗ ನಮ್ಮ ಬೆರಳ ತುದಿಯಲ್ಲೇ ಜಗತ್ತಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಜಗತ್ತಿನ ಆಗು ಹೋಗುಗಳನ್ನು ಕ್ಷಣಮಾತ್ರದಲ್ಲೇ ತಿಳಿದುಕೊಂಡು ಬಿಡುತ್ತಿದ್ದೇವೆ. ಹೀಗಾಗಿ ರೇಡಿಯೋ ಎಂಬ ಸಂವಹನ ಸಾಧನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಭಾವಿಸುತ್ತಿರುವ ಹೊತ್ತಿನಲ್ಲೇ ಅದು ಮತ್ತೆ ಚಿಗುರಿ ನಿಂತಿದೆ. ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಂಡು ತನ್ನ ಅಸ್ತಿತ್ವವನ್ನು ಇಂದಿಗೂ ಅದರದೇ ಆದ ರೀತಿಯಲ್ಲಿ ಉಳಿಸಿಕೊಂಡು ಸಾಗುತ್ತಿದೆ. ಅದೇನೆ ಇದ್ದರೂ ರೇಡಿಯೋವನ್ನು ಕೇಳುವದರಲ್ಲಿ ಸಿಗುವ ಸಂತೋಷ ಬೇರೆ ಯಾವ ಆಧುನಿಕ ತಂತ್ರಜ್ಞಾನದ ಉಪಕರಣಗಳಿಂದ ಸಿಗಲು ಸಾಧ್ಯವಿಲ್ಲವೇನೋ!
ಇಂದು ವಿಶ್ವ ರೇಡಿಯೋ ದಿನ (World Radio Day). ಈ ದಿನವನ್ನು 2012 ರಲ್ಲಿ ಮೊದಲ ಬಾರಿ ಆಚರಿಸಲಾಯಿತು. 3 ನೇ ನವೆಂಬರ್ 2011 ರಂದು ಯುನೆಸ್ಕೋದ ಎಲ್ಲಾ ಸದಸ್ಯ ರಾಷ್ಟ್ರಗಳು ಸರ್ವಾನುಮತದ ಘೋಷಣೆಯ ಮೂಲಕ ಪ್ರತಿ ವರ್ಷ ವಿಶ್ವ ರೇಡಿಯೋ ಆಚರಿಸಲು ನಿರ್ಧರಿಸಲಾಯಿತು. ಹೀಗೆ ಪ್ರತಿ ವರ್ಷ ವಿಶ್ವ ರೇಡಿಯೋ ದಿನವನ್ನು ಆಚರಿಸುವಂತೆ ಯುನೆಸ್ಕೋಗೆ ವಿನಂತಿಸಿಕೊಂಡಿದ್ದು ಸ್ಪ್ಯಾನಿಷ್ ರೇಡಿಯೊ ಅಕಾಡೆಮಿ. 1946 ರಲ್ಲಿ ಯುನೈಟೆಡ್ ನೇಷನ್ಸ್ ರೇಡಿಯೋವನ್ನು ಸ್ಥಾಪಿಸಿದ ದಿನದ ವಾರ್ಷಿಕೋತ್ಸವವನ್ನು ಪರಿಗಣಿಸಿ ಫೆಬ್ರವರಿ 13 ನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು. ರೇಡಿಯೋ ಅತ್ಯಂತ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪುವ ಕಡಿಮೆ ವೆಚ್ಚದ ಪ್ರಬಲ ಸಂವಹನ ಮಾಧ್ಯಮವಾಗಿದೆ.
ರೇಡಿಯೋ ಸಮಾಜದ ವೈವಿಧ್ಯತೆಯ ಅನುಭವವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು, ಜನರಿಗೆ ಶಿಕ್ಷಣ, ಕೃಷಿ, ವಿಜ್ಞಾನ, ಮನರಂಜನೆ ಮತ್ತಿತರ ಕ್ಷೇತ್ರಗಳ ಮಾಹಿತಿ ಮತ್ತು ಸುದ್ದಿಗಳನ್ನು ಒದಗಿಸುವ ಮಾಹಿತಿ, ಮನೋರಂಜನೆ, ಮಾರ್ಗದರ್ಶಿ ಎಂಬ ಮೂರು ಸೂತ್ರಗಳನ್ನು ಇಟ್ಟುಕೊಂಡು ʻʻಬಹುಜನ ಹಿತಾಯ; ಬಹುಜನ ಸುಖಾಯʼʼ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡು ಉಳ್ಳವರಿಂದ ಹಿಡಿದು ಸಾಮನ್ಯ ಜನರ ಅಭಿರುಚಿಯ ಮಾಧ್ಯಮವಾಗಿದೆ. ಮಾತ್ರವಲ್ಲದೆ, ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯೂ ಸಹ ಆಗಿದೆ.
ಇಟಲಿಯ ಮಾರ್ಕೊನಿ ಅವರನ್ನು ರೇಡಿಯೋದ ಪಿತಾಮಹ ಎಂದು ಕರೆಯಲಾಗುತ್ತಿದೆ. ಆರಂಭದಲ್ಲಿ ರೇಡಿಯೋವನ್ನು ವೈರ್‌ಲೆಸ್ ಟೆಲಿಗ್ರಾಫ್ ಎಂದು ಕರೆಯಲಾಗುತ್ತಿತ್ತು. ವಿಶ್ವ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 44 ಸಹಸ್ರ ರೇಡಿಯೋ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭಾರತದಲ್ಲಿ, 1,097 ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಾರ ಭಾರತಿ ಉಸ್ತುವಾರಿಯ ಸರಕಾರಿ ಸ್ವಾಮ್ಯದ ರೇಡಿಯೋ ಕೇಂದ್ರಗಳು, ಖಾಸಗೀ ಮಾಲಿಕತ್ವದ ಕೇಂದ್ರಗಳು ಹಾಗೂ ಸ್ವಯಂಸೇವಾ ಅಥವಾ ಶೈಕ್ಷಣಿಕ ರೇಡಿಯೋ ಕೇಂದ್ರಗಳೆಂಬುದಾಗಿ 3 ಬಗೆಯಲ್ಲಿ ಪ್ರಸಾರ ಕೇಂದ್ರಗಳನ್ನು ವಿಭಾಗಿಸಲಾಗಿದೆ.
ಪ್ರಸಾರ ಭಾರತಿಯ ಆಕಾಶವಾಣಿ, 23 ಭಾಷೆಗಳಲ್ಲಿ 479 ರೇಡಿಯೋ ಕೇಂದ್ರಗಳನ್ನು ನಡೆಸುತ್ತಿದೆ. ಖಾಸಗೀ ಸಂಸ್ಥೆಗಳು ದೇಶದ 111 ಪ್ರಮುಖ ನಗರಗಳಲ್ಲಿ 385 ಎಫ್.ಎಮ್ ರೇಡಿಯೋ ಕೇಂದ್ರಗಳನ್ನು ಮತ್ತು 251 ಸಮುದಾಯ ಹಾಗೂ ಶೈಕ್ಷಣಿಕ ರೇಡಿಯೋ ಕೇಂದ್ರಗಳು ಚಾಲನೆಯಲ್ಲಿವೆ. ಸದ್ಯ, ಬಾನುಲಿ ಕೇಂದ್ರಗಳು ಬಿತ್ತರಿಸುವ ಕಾರ್ಯಕ್ರಮಗಳನ್ನು ನಾವು ಫೇಸ್ಬುಕ್, ಯುಟ್ಯೂಬ್, ಟೆಲೆಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಕೇಳಬಹುದು, ಸಂಗ್ರಹಿಸಿಡಬಹುದು.
ಪ್ರಸಾರ ಭಾರತಿ, ಇನ್ಸ್ಟಾಗ್ರಾಮ್ ನಲ್ಲಿ 12.1 ಸಾವಿರಕ್ಕೂ ಹೆಚ್ಚು ಹಿಂಬಾಲಕರು, ಫೇಸ್ಬುಕ್ ನಲ್ಲಿ 13ಸಾವಿರಕ್ಕೂ ಅಧಿಕ ಹಾಗೂ ಯುಟ್ಯೂಬ್ ನಲ್ಲಿ 728ಸಾವಿರಕ್ಕೂ ಅತ್ಯಧಿಕ ಹಿಂಬಾಲಕರನ್ನು ಹೊಂದಿದೆ. ಜಾಗತಿಕವಾಗಿ ಆವರಿಸಿದೆ ಕೋವಿಡ್ – 19 ಮಹಾಮಾರಿಯಿಂದಾಗಿ ರೇಡಿಯೋ ಕೇಂದ್ರಗಳು ಆರ್ಥಿಕ ಸಂಕಷ್ಟ ಎದುರಿಸಿತು. 2019 ರಲ್ಲಿ ರೂ.3,100 ಕೋಟಿ ಇದ್ದ ಬಾನುಲಿ ಕೇಂದ್ರಗಳ ಆದಾಯ, 2020 ರಲ್ಲಿ ಶೇ.54 ರಷ್ಟು ಇಳಿಕೆ ಕಂಡಿತು. 2021-22 ,2022-23 ರಿಂದ ಈಚೆಗೆ ಮತ್ತೆ ಕೊಂಚ ಚೇತರಿಕೆ ಹಾದಿಯಲ್ಲಿ ಸಾಗುತ್ತಿದೆ.
ಶತಮಾನಕ್ಕೂ ಹೆಚ್ಚು ಕಾಲ, ರೇಡಿಯೊವು ಸಂವಹನ ಮತ್ತು ಸೂಚನೆಯ ವಿಧಾನವಾಗಿ ಅನೇಕ ಸಂಸ್ಕೃತಿಗಳಲ್ಲಿ ದೃಢವಾಗಿ ಸ್ಥಾಪಿಸಲ್ಪಟ್ಟಿದೆ. ವಿಪತ್ತು ಪರಿಹಾರ ಮತ್ತು ತುರ್ತು ಪ್ರತಿಕ್ರಿಯೆಯು ಇನ್ನೂ ಎರಡು ಕ್ಷೇತ್ರಗಳಾಗಿವೆ, ಅಲ್ಲಿ ಇದು ದೀರ್ಘಕಾಲ ಮಹತ್ವದ ಪಾತ್ರವನ್ನು ವಹಿಸಿದೆ.
ಬಾನುಲಿ ಮತ್ತು ಶಾಂತಿ ಥೀಮ್
ಪ್ರತೀ ವರ್ಷ ವಿಶ್ವ ರೇಡಿಯೋ ದಿನವನ್ನು ಒಂದು ಥೀಮ್ ನೊಂದಿಗೆ ಆಚರಿಸುವುದು ವಾಡಿಕೆ. ಅದರಂತೆ 2023 ರ ವಿಶ್ವ ರೇಡಿಯೋ ದಿನದ ಘೋಷವಾಕ್ಯ ; ʻರೇಡಿಯೋ ಆ್ಯಂಡ್ ಪೀಸ್’ (ಬಾನುಲಿ ಮತ್ತು ಶಾಂತಿ) ಎಂಬ ಥೀಮ್‌ನಡಿಯಲ್ಲಿ ಆಚರಿಸಲಾಗುತ್ತಿದೆ.
ಸ್ವತಂತ್ರ ಮತ್ತು ಉತ್ತಮ ಗುಣಮಟ್ಟದ ಕಾರ್ಯಕ್ರಮಗಳ ಪ್ರಸಾರಮಾಡುವುದು, ಶೋತೃಗಳ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುವುದು, ಸ್ಪರ್ಧಾತ್ಮಕತೆಯ ಸವಾಲುಗಳನ್ನು ಖಚಿತ ಪಡಿಸಿಕೊಳ್ಳುವುದು ಎಂಬ ಮೂರು ಪ್ರಧಾನ ಆಶೋತ್ತರಗಳ ಮೇಲೆ ಬಾನುಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಭಾರತ ದೇಶದ ಜನಸಂಖ್ಯೆಯ ಶೇ.92 ಕ್ಕಿಂತಲೂ ಹೆಚ್ಚಿನ ಜನರಿಗೆ ಈ ರೇಡಿಯೋ ಕಾರ್ಯಕ್ರಮಗಳು ತಲುಪುತ್ತಿವೆ.
ಇತ್ತಿಚಿಗೆ News on Air App ಮೂಲಕ ಪ್ರಪಂಚದಾದ್ಯಂತ ಯಾವುದೇ ಮೂಲೆಯಿಂದಲೂ ಸಹ ಇಂಟರ್‌ನೆಟ್ ಮೂಲಕ ನಮ್ಮ ನೆಚ್ಚಿನ ಕೇಂದ್ರಗಳ ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ಒಟ್ಟಾರೆ ರೇಡಿಯೋ ಆಧುನಿಕತೆಗೆ ಹೊಂದಿಕೊಂಡು ಅದರೊಟ್ಟಿಗೆ ಹೆಜ್ಜೆಗಳನ್ನು ಇಟ್ಟು ಜೊತೆಯಾಗಿ ಸಾಗುತ್ತಿದೆ.
ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
ಇದನ್ನೂ ಓದಿ : ವೈಷ್ಣವ ಜನತೋ ಹಾಡು ಗಾಂಧೀಜಿಗೆ ಅಚ್ಚುಮೆಚ್ಚು, ಆದರೆ…; ಆಡಿಯೊ ಶೇರ್ ಮಾಡಿ, ವಿಶೇಷ ವಿಚಾರ ತಿಳಿಸಿದ ಪ್ರಧಾನಿ ಮೋದಿ!