Site icon Vistara News

World Record: ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡ ನೆಟ್ಟು ವಿಶ್ವ ದಾಖಲೆ ಬರೆದ ಇಂದೋರ್‌; ದೇಶದ ಸ್ವಚ್ಛ ನಗರಕ್ಕೆ ಇನ್ನೊಂದು ಗರಿ

World Record

World Record

ಭೋಪಾಲ್‌: ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ ಏರುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಕಾಡುಗಳ ನಾಶ. ಗಿಡಗಳನ್ನು ನೆಡುವುದೊಂದೇ ಪರಿಹಾರ ಎಂದು ತಜ್ಞರು ಎಚ್ಚರಿಸುತ್ತಲೇ ಇರುತ್ತಾರೆ. ಇದನ್ನು ಪಾಲಿಸುವವರು ಮಾತ್ರ ವಿರಳ. ಆದರೆ ಅದಕ್ಕೆ ಅಪವಾದ ಎಂಬಂತೆ ಮಧ್ಯಪ್ರದೇಶದ ಇಂದೋರ್‌ (Indore)ನಲ್ಲಿ ಒಂದೇ ದಿನ ಬರೋಬ್ಬರಿ 11 ಲಕ್ಷ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ವಿನೂತನ ವಿಶ್ವ ದಾಖಲೆ (World Record) ಸೃಷ್ಟಿಯಾಗಿದೆ. ಈ ಸಾಧನೆಯು ದೇಶದ ಸ್ವಚ್ಛ ನಗರ ಎಂಬ ಖ್ಯಾತಿಯ ಇಂದೋರ್‌ನ ಮುಕುಟಕ್ಕೆ ದೊರೆತ ಇನ್ನೊಂದು ಗರಿ ಎನಿಸಿಕೊಂಡಿದೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಈ ದಾಖಲೆಗಾಗಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ.

ʼʼಇಂದೋರ್ ಈಗ ವಿಶ್ವದ ನಂಬರ್ ಒನ್ ಸ್ಥಾನದಲ್ಲಿದೆ. ಸ್ವಚ್ಛತೆ ವಿಚಾರದಲ್ಲಿ ಮಾದರಿಯಾದ ಇಲ್ಲಿನ ಜನತೆ ಇನ್ನೊಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಇಂದೋರ್‌ನ ನನ್ನ ಸಹೋದರ- ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಮಧ್ಯಪ್ರದೇಶದ ಆರ್ಥಿಕ ರಾಜಧಾನಿ ಮತ್ತು ನಮ್ಮ ದೇಶದ ಸ್ವಚ್ಛ ನಗರವಾದ ಇಂದೋರ್ ಒಂದೇ ದಿನದಲ್ಲಿ 11 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದೆ” ಎಂದು ಮೋಹನ್ ಯಾದವ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ಫೂರ್ತಿಗೊಂಡು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯೊಂದಿಗೆ ಮಧ್ಯಪ್ರದೇಶವು ಈ ಗಮನಾರ್ಹ ಸಾಧನೆಯನ್ನು ಮಾಡಿದೆ. ಇದು ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ದೇಶದ ಜನತೆಗೆ ನೀಡಲಿದೆ” ಎಂದು ಅವರು ಹೇಳಿದ್ದಾರೆ.

ಹಿಂದಿನ ದಾಖಲೆ

ಗಿನ್ನಿಸ್ ವಿಶ್ವ ದಾಖಲೆಯ ಸಲಹೆಗಾರ ನಿಶ್ಚಲ್ ಬರೋಟ್ ಮಾಹಿತಿ ನೀಡಿ, ಈ ಹಿಂದೆ (2023ರಲ್ಲಿ) ಅಸ್ಸಾಂನಲ್ಲಿ ಒಂದೇ ದಿನ 9,26000 ಸಸಿಗಳನ್ನು ನಾಟಿ ಮಾಡಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಮಧ್ಯಪ್ರದೇಶ ಮುರಿದಿದೆ ಎಂದಿದ್ದಾರೆ.

“ತಂಡವೊಂದು 24 ಗಂಟೆಗಳಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಟ್ಟ ಅಪರೂಪದ ದಾಖಲೆಗೆ ಇಂದೋರ್‌ ಪಾತ್ರವಾಗಿದೆ. ಜುಲೈ 13ರ ಸಂಜೆ 7:03ಕ್ಕೆ ಆರಂಭವಾದ ಗಿಡ ನೆಡುವ ಕಾರ್ಯ ಜುಲೈ 14ರ ಸಂಜೆ 7:03ಕ್ಕೆ ಮುಕ್ತಾಯವಾಯಿತು. ವಿಶೇಷ ಎಂದರೆ ಇಂದೋರ್ ಸಂಜೆ 5 ಗಂಟೆಯ ವೇಳೆಗೆ ಹಳೆಯ ದಾಖಲೆಯನ್ನು ಮುರಿದಿದೆ. ಅಸ್ಸಾಂ 24 ಗಂಟೆಗಳಲ್ಲಿ 9,26,000 ಸಸಿಗಳನ್ನು ನೆಡುವ ಮೂಲಕ ಈ ಹಿಂದೆ ದಾಖಲೆ ನಿರ್ಮಿಸಿತ್ತು. ಅಷ್ಟು ಗಿಡಗಳನ್ನು ಸಂಜೆ 5 ಗಂಟೆ ವೇಳೆಗೇ ನೆಡಲಾಗಿತ್ತು. ಮುಂದಿನ 2 ಗಂಟೆ ವೇಳೆಯಲ್ಲಿ ಸುಮಾರು 2 ಲಕ್ಷ ಗಿಡ ನಾಟಿ ಮಾಡಲಾಯಿತು. ನಿಖರ ಸಂಖ್ಯೆಗಳನ್ನು ನಂತರ ಬಿಡುಗಡೆ ಮಾಡಲಾಗುವುದು. ನಾವು ಹೊಸ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ಸಿಎಂ ಮೋಹನ್ ಯಾದವ್ ಅವರಿಗೆ ಹಸ್ತಾಂತರಿಸಿದ್ದೇವೆ” ಎಂದು ನಿಶ್ಚಲ್ ಬರೋಟ್ ಹೇಳಿದ್ದಾರೆ.

ಈ ಅಭಿಯಾನಕ್ಕಾಗಿ ಮೊದಲು ನೆಡುತೋಪು ತಾಣವಾದ ರೇವತಿ ರೇಂಜ್‌ ಅನ್ನು 9 ವಲಯಗಳು ಮತ್ತು 100 ಉಪ-ವಲಯಗಳಾಗಿ ವಿಂಗಡಿಸಲಾಗಿತ್ತು. 100 ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಯಿತು. ಈ ಅಭಿಯಾನದ ಯಶಸ್ಸಿಗಾಗಿ ರಾಜ್ಯ ಸರ್ಕಾರ ಸುಮಾರು 46 ದಿನಗಳ ತಯಾರಿ ನಡೆಸಿದೆ.

ಇದನ್ನೂ ಓದಿ: Mohan Yadav: ಯಾರಿವರು ಮಧ್ಯ ಪ್ರದೇಶದ ನೂತನ ಸಿಎಂ ಡಾ. ಮೋಹನ್ ಯಾದವ್?

2,000 ಬಿಎಸ್‌ಎಫ್ ಜವಾನರಲ್ಲದೆ, 100ಕ್ಕೂ ಹೆಚ್ಚು ಎನ್‌ಆರ್‌ಐಗಳು, 50 ಶಾಲೆಗಳ ಎನ್‌ಸಿಸಿ ಕೆಡೆಟ್‌ಗಳು, ನೂರಾರು ಸಾರ್ವಜನಿಕರು, ವಿವಿಧ ಸಾಮಾಜಿಕ ಸಂಘಟನೆಗಳ ಸದಸ್ಯರು ಈ ನೆಡುತೋಪು ಅಭಿಯಾನದಲ್ಲಿ ಭಾಗವಹಿಸಿದ್ದರು.

Exit mobile version