ನವ ದೆಹಲಿ: ಅಮೇರಿಕಾದ ಬ್ಯುಸಿನೆಸ್ ನಿಯತಕಾಲಿಕ ಫೋರ್ಬ್ಸ್ ಶತಕೋಟ್ಯಧಿಪತಿಗಳ ಶ್ರೇಯಾಂಕದ 37ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಜೀನ್ ಎಟಿಯೆನ್ ಅರ್ನಾಲ್ಟ್ 211 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಬ್ರ್ಯಾಂಡ್- LVMH Moët Hennessy Louis Vuitton’ನ ಸ್ಥಾಪಕ ಮತ್ತು ಸಿಇಒ ಆಗಿರುವ ಅರ್ನಾಲ್ಟ್ 200 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಹೊಂದಿರುವ ಏಕೈಕ ಬಿಲಿಯನೇರ್ ಎನ್ನುವುದು ವಿಶೇಷ.
9ನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ
ಇನ್ನು ಎರಡನೇ ಸ್ಥಾನದಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಇದ್ದಾರೆ. ಅವರ ಆಸ್ತಿಯ ಮೌಲ್ಯ 180 ಬಿಲಿಯನ್ ಡಾಲರ್. ಭಾರತದ ಉದ್ಯಮಿ ಮುಕೇಶ್ ಅಂಬಾನಿ ಈ ಪಟ್ಟಿಯ 9ನೇ ಸ್ಥಾನದಲ್ಲಿದ್ದಾರೆ. 83.4 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಅವರು ಟಾಪ್ 10ರೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆಜಾನ್‌ನ ಜೆಫ್ ಬೆಜೋಜ್, ಒರಾಕಲ್‌ನ ಲ್ಯಾರಿ ಎಲಿಸನ್, ವಾರೆನ್ ಬಫೆಟ್, ಬಿಲ್ ಗೇಟ್ಸ್ ಕೂಡ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಪಟ್ಟಿಯು ಎಲ್ಲಾ ಶತಕೋಟ್ಯಧಿಪತಿಗಳಲ್ಲಿ ಅರ್ಧದಷ್ಟು ಜನರು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಷೇರುಗಳ ಕುಸಿತ ಮತ್ತು ಹೆಚ್ಚುತ್ತಿರುವ ಬಡ್ಡಿದರಗಳು ಇದಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಲೂಯಿ ವಿಟಾನ್ ಮತ್ತು ಸೆಫೊರಾ ಸೇರಿದಂತೆ 75 ಫ್ಯಾಷನ್ ಮತ್ತು ಸೌಂದರ್ಯವರ್ಧಕ ಬ್ರ್ಯಾಂಡ್‌ಗಳ LVMH ಎಂಬ ಸಾಮ್ರಾಜ್ಯದ ಜಾವಾಬ್ದಾರಿಯನ್ನು ಅರ್ನಾಲ್ಟ್ ಹೊತ್ತುಕೊಂಡಿದ್ದಾರೆ. 74 ವರ್ಷದ ಅವರು 2022ರಲ್ಲಿ 158 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದರು.
2022ರಲ್ಲಿ ಎಲಾನ್ ಮಸ್ಕ್ ಮೊದಲ ಬಾರಿಗೆ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಈ ವರ್ಷ ಒಂದು ಸ್ಥಾನ ಕುಸಿತ ಕಂಡಿದ್ದಾರೆ. ಟ್ವಿಟರ್ ಅನ್ನು ಈಗ ಎಕ್ಸ್ ಎಂದು ರೀ ಬ್ರ್ಯಾಂಡ್ ಮಾಡಲಾಗಿದೆ.
ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಈ ವರ್ಷ ಮೂರನೇ ಸ್ಥಾನದಲ್ಲಿದ್ದರೆ, ಉಳಿದ ಸ್ಥಾನಗಳಲ್ಲಿ ಲ್ಯಾರಿ ಎಲಿಸನ್, ಯಶಸ್ವಿ ಹೂಡಿಕೆದಾರ ವಾರೆನ್ ಬಫೆಟ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಧ್ಯಮ ಕಂಪನಿ ಬ್ಲೂಮ್ಬರ್ಗ್ ಎಲ್‌ಪಿಯ ಸಹ ಸಂಸ್ಥಾಪಕ ಮೈಕೆಲ್ ಬ್ಲೂಮ್ಬರ್ಗ್ ಇದ್ದಾರೆ.
ಇದನ್ನೂ ಓದಿ: Khalistan Row: ಭಾರತದ ಬಿಗಿಪಟ್ಟಿಗೆ ಮಣಿದು ಕೊನೆಗೂ ಕ್ರಮಕ್ಕೆ ಮುಂದಾದ ಕೆನಡಾ, ಒಬ್ಬನ ಬಂಧನ
ಏಕೈಕ ಭಾರತೀಯ
ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್‌ಮನ್ ಮುಕೇಶ್ ಅಂಬಾನಿ ಈ ಪಟ್ಟಿಯ ಟಾಪ್ ಟೆನ್‌ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ ರಿಲಯನ್ಸ್ ಅನ್ನು 1966ರಲ್ಲಿ ಮುಕೇಶ್ ಅವರ ತಂದೆ ಧೀರೂಭಾಯಿ ಅಂಬಾನಿ ಸ್ಥಾಪಿಸಿದ್ದರು.
ಟಾಪ್ ಟೆನ್ ಪಟ್ಟಿ
- ಬರ್ನಾರ್ಡ್ ಅರ್ನಾಲ್ಟ್
- ಎಲಾನ್ ಮಸ್ಕ್
- ಜೆಫ್ ಬೆಜೋಸ್
- ಲ್ಯಾರಿ ಎಲಿಸನ್
- ವಾರೆನ್ ಬಫೆಟ್
- ಬಿಲ್ ಗೇಟ್ಸ್
- ಮೈಕೆಲ್ ಬ್ಲೂಮ್ಬರ್ಗ್
- ಕಾರ್ಲೋಸ್ ಸ್ಲಿಮ್ ಹೆಲು & ಕುಟುಂಬ
- ಮುಕೇಶ್ ಅಂಬಾನಿ
- ಸ್ಟೀವ್ ಬಾಲ್ಮರ್