ಖಾವ್ಡಾ, ಗುಜರಾತ್: ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್‌ಗಿಂತ (Paris) ಐದು ಪಟ್ಟು ದೊಡ್ಡದಾದ ನವೀಕರಿಸಬಹುದಾದ ಪವರ್ ಪ್ಲಾಂಟ್ (Renewable Energy) ಇದೀಗ ಭಾರತದಲ್ಲೇ ಇದೆ! ಪಾಕಿಸ್ತಾನದ ಗಡಿಯಲ್ಲಿರುವ ಮೈಲುಗಟ್ಟಲೆ ಬಂಜರು ಭೂಮಿಯ ಮಧ್ಯೆ ಇದನ್ನು ಸ್ಥಾಪಿಸಲಾಗಿದೆ. ವಿಶೇಷ ಎಂದರೆ ಈ ಜಾಗವನ್ನು ತಲುಪಲು ಇರುವ ವಾಯುಮಾರ್ಗ ಎಂದರೆ ಒಳಬರುವ ವಿಮಾನಗಳಿಗೆ ಮಾರ್ಗದರ್ಶನ ನೀಡಲು ಏರ್ ಟ್ರಾಫಿಕ್ ಕಂಟ್ರೋಲರ್ ಅನ್ನು ಸಹ ಹೊಂದಿರದ ಒಂದು ಕಿರಿದಾದ ಏರ್‌ಸ್ಟ್ರಿಪ್ ಮಾತ್ರ. ಇಲ್ಲಿರುವ ಮೂಲಸೌಕರ್ಯವೆಂದರೆ ಕಂಟೈನರ್‌ನಲ್ಲಿ ರಚಿಸಲಾದ ತಾತ್ಕಾಲಿಕ ಕಚೇರಿ, ಟೆಂಟ್ ಶೌಚಾಲಯ ಮಾತ್ರ! ಇದು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್‌ಗೆ ಇರುವ ಗೇಟ್‌ವೇ!
ಗುಜರಾತ್‌ನ (Gujarat) ಕಛ್‌ನ (Kutch) ಖಾವ್ಡಾ ಎಂಬಲ್ಲಿರುವ ಈ ಏರ್‌ಸ್ಟ್ರಿಪ್ 2022ರ ಡಿಸೆಂಬರ್‌ನಲ್ಲಿ ಇನ್ನೂ ಚಿಕ್ಕದಾಗಿತ್ತು, ಆಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ (Gautam Adani) ಅವರು ಈ ಬಂಜರು ಪ್ರದೇಶವನ್ನು ತಲುಪಲು ಒಂದು ಸಣ್ಣ ವಿಮಾನವನ್ನು ಬಳಸಿದರು. ಅದಾನಿ ಅವರು ಮೊದಲು ಖಾವ್ಡಾದಲ್ಲಿ ಬಂದಿಳಿದಾಗ, “ಈ ಪ್ರದೇಶದಲ್ಲಿ ಒಂದು ಸೊಳ್ಳೆಯಾದರೂ ಕಾಣಬಹುದೇ?” ಎಂದು ತಮಾಷೆ ಮಾಡಿದರಂತೆ.
80 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯಿಂದ ಮಾತ್ರ ಇಲ್ಲಿಗೆ ಈ ಹೆಸರು. ಇಲ್ಲಿಗೆ ಪಿನ್‌ಕೋಡ್ ಸಹ ಇಲ್ಲ. ಏರ್‌ಸ್ಟ್ರಿಪ್‌ನಿಂದ ಧೂಳುಯುಕ್ತ ಶುಷ್ಕ ಭೂಮಿಯ ಮೂಲಕ 18 ಕಿಮೀ ಚಾಲನೆ ಮಾಡಿದ ಬಳಿಕ, 538 ಚದರ ಕಿಲೋಮೀಟರ್‌ಗಳಲ್ಲಿ ಹರಡಿರುವ ಈ ಖಾವ್ಡಾ ನವೀಕರಿಸಬಹುದಾದ ಇಂಧನ ಪಾರ್ಕ್‌ಗೆ ತಲುಪಬಹುದು. ಇದರ ಒಟ್ಟಾರೆ ವಿಸ್ತೀರ್ಣ ಪ್ಯಾರಿಸ್‌ನ ಸರಿಸುಮಾರು ಐದು ಪಟ್ಟು ಹೆಚ್ಚು.
ಇಲ್ಲಿನ ಭೂಮಿಯು ಹೆಚ್ಚು ಉಪ್ಪಿನಂಶ ಇರುವ ಮಣ್ಣು ಹೊಂದಿದೆ. ಹೀಗಾಗಿ ಯಾವುದೇ ಸಸ್ಯವರ್ಗವನ್ನು ಹೊಂದಿಲ್ಲ. ಇನ್ನು ಜನವಸತಿ ವಿಷಯ ಬಿಟ್ಟುಬಿಡಿ. ಆದರೆ ಲಡಾಖ್‌ನ ನಂತರ ದೇಶದಲ್ಲಿ ಎರಡನೇ ಅತ್ಯುತ್ತಮ ಸೌರ ಶಕ್ತಿಯನ್ನು ಹೊಂದಿರುವ ಪ್ರದೇಶವಿದು. ಇಲ್ಲಿ ಬಯಲು ಪ್ರದೇಶವಾದ್ದರಿಂದ ಗಾಳಿಯ ವೇಗ ಐದು ಪಟ್ಟು. ಹೀಗಾಗಿ ಇದು ನವೀಕರಿಸಬಹುದಾದ ಇಂಧನ ಪಾರ್ಗ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
2022ರ ಬಳಿಕ ಇಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಅದಾನಿ ಗ್ರೂಪ್ ಇಲ್ಲಿ ಸೆಕೆಂಡಿಗೆ 8 ಮೀಟರ್ ವೇಗದಲ್ಲಿ ಬೀಸುವ ಗಾಳಿಯನ್ನು ಬಳಸಿಕೊಳ್ಳಲು ವಿಂಡ್ ಮಿಲ್‌ಗಳನ್ನು ಹಾಕಿದೆ. ಸೂರ್ಯನ ಕಿರಣಗಳನ್ನು ವಿದ್ಯುತ್ ಆಗಿ ಪರಿವರ್ತಿಸುವ ಸೌರ ಫಲಕಗಳನ್ನು ಹಾಕಿದೆ. ಕಾರ್ಮಿಕರಿಗಾಗಿ ಕಾಲನಿಗಳನ್ನು ನಿರ್ಮಿಸಿದೆ. ಭೂತಳದ 700 ಮೀಟರ್ ಅಡಿಯಿಂದ ಪಡೆಯುವ ಲವಣಯುಕ್ತ ನೀರನ್ನು ಪಂಪ್ ಮಾಡಿ ಕುಡಿಯುವ ನೀರನ್ನಾಗಿಸುವ ಡಸಲೀಕರಣ ಘಟಕಗಳನ್ನು ಸ್ಥಾಪಿಸಿದೆ. ಮೊಬೈಲ್ ಫೋನ್ ರಿಪೇರಿ ಅಂಗಡಿಗಳು ಬಂದಿವೆ.
ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಕಂಪನಿಯಾದ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಗುಜರಾತ್‌ನ ಕಚ್‌ನ ಖಾವ್ಡಾದಲ್ಲಿ 30 ಮೆಗಾವ್ಯಾಟ್ ಶುದ್ಧ ವಿದ್ಯುತ್ ಉತ್ಪಾದಿಸಲು ಸುಮಾರು ₹1.5 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಹೇಳಿದ್ದಾರೆ. “ನಾವು ಇದೀಗ ಖಾವ್ಡಾದಲ್ಲಿ 2,000 MW (2 GW) ಸಾಮರ್ಥ್ಯದ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಜಿಸಿದ್ದೇವೆ. ಈ ಹಣಕಾಸು ವರ್ಷದಲ್ಲಿ (ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷ) 4 GW ಮತ್ತು ನಂತರ ಪ್ರತಿ ವರ್ಷ 5 GW ಅನ್ನು ಸೃಷ್ಟಿಸಲು ಯೋಜಿಸಿದ್ದೇವೆ” ಎಂದು ಅವರು ಹೇಳಿದರು.
ಇಲ್ಲಿನ ಏರ್‌ಸ್ಟ್ರಿಪ್ ಅನ್ನು ವಾರಕ್ಕೆ ಕೆಲವು ಬಾರಿ ಮುಂದ್ರಾ ಅಥವಾ ಅಹಮದಾಬಾದ್‌ನಿಂದ ಗ್ರೂಪ್‌ನ ಕೆಲಸಗಾರರನ್ನು ಸಾಗಿಸಲು ಬಳಸಲಾಗುತ್ತದೆ. 160 ಕಿಮೀ ದೂರದಲ್ಲಿರುವ ಭುಜ್‌ನಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲರ್ ಅಥವಾ ATC, ಖಾವ್ಡಾಗೆ ಹೋಗುವ ವಿಮಾನಗಳಿಗೆ ಕೊನೆಯ ಮಾರ್ಗದರ್ಶಿ ಪೋಸ್ಟ್ ಆಗಿದೆ. ಆದರೆ ಇದರ ವ್ಯಾಪ್ತಿಯು ʼಟೆಂಟ್ ಸಿಟಿ’ ವರೆಗೆ ಮಾತ್ರ. ಇದು ದಾಟಿದ ಬಳಿಕ ಪೈಲಟ್‌ಗಳು ಲ್ಯಾಂಡಿಂಗ್ ಸೇರಿದಂತೆ 80 ಕಿಮೀವರೆಗೆ ತಮ್ಮ ಸ್ವಂತ ನಿರ್ಣಯದ ಮೇಲೆಯೇ ಹಾರಿಸಬೇಕು.
ಎನರ್ಜಿ ಪಾರ್ಕ್‌ನ ಹೊರ ಅಂಚು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿದೆ. ಈ ಒಂದು ಕಿಮೀ ಬಫರ್ ಜೋನ್ ಅನ್ನು ಬಿಎಸ್ಎಫ್ ನಿರ್ವಹಿಸುತ್ತದೆ. ಟ್ರಾಕ್ಟರ್‌ಗಳನ್ನು ಸಹ ಮಾರ್ಪಡಿಸಬೇಕಾದ ಪ್ರದೇಶದಲ್ಲಿ ಕೇವಲ 35 ದಿನಗಳಲ್ಲಿ ಏರ್‌ಸ್ಟ್ರಿಪ್ ನಿರ್ಮಿಸಲಾಗಿದೆ. ಇವು ಸುಲಭವಾಗಿ ನೀರನ್ನು ಹೀರಿಕೊಳ್ಳದ ಭೂಮಿಯ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶವು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಮಾರ್ಚ್‌ನಿಂದ ಜೂನ್‌ವರೆಗೆ ಭಾರೀ ಧೂಳಿನ ಬಿರುಗಾಳಿಗಳು ಬೀಸುತ್ತವೆ. ಸಂವಹನ ಮತ್ತು ಸಾರಿಗೆ ಮೂಲಸೌಕರ್ಯಗಳಿಲ್ಲ. ಹತ್ತಿರದ ವಾಸಯೋಗ್ಯ ಪ್ರದೇಶವು 80 ಕಿಮೀ ದೂರದಲ್ಲಿದೆ. ಮಳೆಗಾಲದಲ್ಲಿ ಮಣ್ಣಿನಲ್ಲಿ ನೀರು ಇಂಗುವುದಿಲ್ಲ. ಅಂತರ್ಜಲವೂ ಲವಣಯುಕ್ತವಾಗಿರುತ್ತದೆ. ಇದು ನಿರ್ಬಂಧಿತ ವಲಯ.
ಇದಿಗ ಖಾವ್ಡಾ ಗ್ರಾಮದಲ್ಲಿ ಸುಮಾರು 8,000 ಕಾರ್ಮಿಕರಿಗೆ ವಸತಿ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಅದಾನಿ ಸಮೂಹದ ನವೀಕರಿಸಬಹುದಾದ ಇಂಧನ ಯೋಜನೆಗಳು ಅತ್ಯಂತ ಮಹತ್ವಾಕಾಂಕ್ಷೆಯಾಗಿದ್ದು, 2030ರ ವೇಳೆಗೆ ಶೂನ್ಯ ಪರಿಸರ ಮಾಲಿನ್ಯ ಹಾಗೂ ಪಳೆಯುಳಿಕೆ ರಹಿತ ಮೂಲಗಳಿಂದ 500 GW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಖಾವ್ಡಾದಲ್ಲಿ 81 ಶತಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸಬಹುದು. ಇದು ಬೆಲ್ಜಿಯಂ, ಚಿಲಿ ಮತ್ತು ಸ್ವಿಟ್ಜರ್ಲೆಂಡ್‌ನಂತಹ ಇಡೀ ರಾಷ್ಟ್ರಗಳಿಗೆ ಶಕ್ತಿಯನ್ನು ಒದಗಿಸಲು ಸಾಕು. ಇಲ್ಲಿ ಯೋಜಿಸಲಾದ 30 GW ಸೋಲಾರ್, 26 GW ಮತ್ತು 4 GW ಪವನ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎಂದು ಜೈನ್ ಹೇಳಿದರು. ಖಾವ್ಡಾ ಜಮೀನು ಸರ್ಕಾರಕ್ಕೆ ಸೇರಿದ್ದು, ಆ ನಿವೇಶನವನ್ನು 40 ವರ್ಷಗಳ ಕಾಲ ಅದಾನಿ ಸಮೂಹಕ್ಕೆ ಗುತ್ತಿಗೆ ನೀಡಿದೆ.
ಇದನ್ನೂ ಓದಿ: Gautam Adani: ಮಕ್ಕಳು ಜಗತ್ತಿನ ಅತಿ ದೊಡ್ಡ ಸಂಪತ್ತು ಎಂದ ಅದಾನಿ!