ಆನೆ ಇದ್ದರೂ ಸಾವಿರ ಸತ್ತರೂ ಸಾವಿರ ಎಂಬುದೊಂದು ಗಾದೆಯಿದೆ. ಅಂಥದ್ದೇ ಗಾದೆಯನ್ನೀಗ ತಿಮಿಂಗಿಲಕ್ಕೂ ಹೇಳಬೇಕು. ಯಾಕೆಂದರೆ ಸ್ಪರ್ಮ್ ವೇಲ್ಸ್ ಎಂಬ ಅಪರೂಪದ ಜಾತಿಯ ತಿಮಿಂಗಿಲದ ಹೊಟ್ಟೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುತ್ತದೆ. ಇಂಥ ಜಾತಿಯ ತಿಮಿಂಗಿಲದ ಹೊಟ್ಟೆಯಲ್ಲಿ ಬೆಲೆಬಾಳುವ ಪದಾರ್ಥವೊಂದು (ambergris) ಸಿಗುವುದರಿಂದಲೇ ಈ ತಿಮಿಂಗಿಲವೀಗ ಅಳಿವಿನಂಚಿನಲ್ಲಿದೆ.
ಇತ್ತೀಚೆಗೆ, ಕೇರಳದ ವಿಳಿಂಜಂನ ಸಮುದ್ರದಲ್ಲಿ ದೊರಕಿದ ಗಟ್ಟಿಯಾದ ಆಂಬರ್ಗ್ರಿಸ್ ಎಂಬ ದೊಡ್ಡ ಕಲ್ಲಿನಂತಹ ಪದಾರ್ಥವನ್ನು ಇಲ್ಲಿನ ಮೀನುಗಾರರು ತಂದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ತಂದ ಪದಾರ್ಥದ ಮೌಲ್ಯ ಸುಮಾರು ೨೮ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ವಿಳಿಂಜಂ ಊರಿನ ಕಡಲಿನಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ಒಂದು ಗುಂಪು ಬರುವಾಗ ದೊಡ್ಡ ಕಲ್ಲಿನ ಥರದ ಪದಾರ್ಥವೊಂದನ್ನು ತಮ್ಮ ಜೊತೆ ಹೊತ್ತು ತಂದಿದ್ದಾರೆ. ಆಂಬರ್ಗ್ರಿಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಪದಾರ್ಥ ಮೇಣದಂತಹದ್ದಾಗಿದ್ದು, ನಿರ್ಧಿಷ್ಟ ಆಕಾರವಿಲ್ಲದ ಒಂದು ಗಟ್ಟಿ ಉಂಡೆಯಂತಿರುತ್ತದೆ. ʻತಿಮಿಂಗಿಲದ ವಾಂತಿʼ ಎಂದು ಸಾಮಾನ್ಯ ಭಾಷೆಯಲ್ಲಿ ಹೇಳಲಾಗುತ್ತದೆ. ಸುಮಾರು ೨೮ ಕೆಜಿ ತೂಗುತ್ತಿದ್ದ ಇಂತಹ ಒಂದು ಆಂಬರ್ಗ್ರಿಸ್ ಅನ್ನು ತಮ್ಮ ಮೀನುಗಾರಿಕೆಯ ದೋಣಿಯಲ್ಲಿ ಹೊತ್ತು ತಂದ ಮೀನುಗಾರರು ಇದನ್ನು ಕರಾವಳಿಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಕರಾವಳಿ ಪೊಲೀಸರು ಇದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು, ಸುಮಾರು ೨೮ ಕೆಜಿ ತೂಗುವ ಇದರ ಮೌಲ್ಯ ಒಟ್ಟು ೨೮ ಕೋಟಿ ಎಂದು ಅಂದಾಜಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಇದನ್ನು ರಾಜೀವ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಗೆ ಹೆಚ್ಚಿನ ಪರೀಕ್ಷೆಗೆ ಕಳುಹಿಸಿದೆ.
ಇದನ್ನೂ ಓದಿ: ಬೇಹುಗಾರಿಕೆಗೆ ಡಾಲ್ಫಿನ್ ಬಳಸುತ್ತಿರುವ ರಷ್ಯಾ!
ಹಾಗಾದರೆ ಈ ಆಂಬರ್ಗ್ರಿಸ್‌ಗೆ ಯಾಕಿಷ್ಟು ಬೆಲೆ ಅಂತೀರಾ? ಇದನ್ನು ಬೆಲೆ ಬಾಳುವ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರಂತೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕಿಲೋ ಆಂಬರ್ಗ್ರಿಸ್‌ಗೆ ಒಂದು ಕೋಟಿಯವರೆಗೂ ಬೆಲೆಯಿದೆ ಎನ್ನಲಾಗುತ್ತಿದೆ. ಆದರೆ, ಭಾರತದಲ್ಲಿ ಇದನ್ನು ಮಾರುವುದು ಕೊಳ್ಳುವುದಕ್ಕೆ ನಿಷೇಧವಿದ್ದು ವನ್ಯಜೀವಿ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಜೊತೆಗೆ, ಸ್ಪರ್ಮ್ ವೇಲ್ ಹಲ್ಲಿರುವ ತಿಮಿಂಗಿಲಗಳ ಪೈಕಿ ಅತೀ ದೊಡ್ಡದಾಗಿದ್ದು, ಇದನ್ನು ಸದ್ಯ ಅಳಿವಿನಂಚಿನಲ್ಲಿರುವ ಜೀವಜಂತುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗಾಗಿ, ಇದರ ಆಂಬರ್ಗ್ರಿಸ್‌ಗಾಗಿ ತಿಮಿಂಗಿಲಕ್ಕೆ ಯಾವುದೇ ರೀತಿಯ ತೊಂದರೆ ನೀಡಿದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಆಂಬರ್ಗ್ರಿಸ್ ಇತಿಹಾಸ: ೧೮, ೧೯ ಹಾಗೂ ೨೦ನೇ ಶತಮಾನಗಳಲ್ಲಿ ಈ ಸ್ಪರ್ಮ್ ವೇಲನ್ನು ವ್ಯಾಪಕವಾಗಿ ಬೇಟೆಯಾಡಲಾಗುತ್ತಿತ್ತಂತೆ. ಈ ತಿಮಿಂಗಿಲದ ದೇಹದ ಸ್ಪರ್ಮಾಸೆಟಿ (ಇದರ ತಲೆಯ ಭಾಗದಲ್ಲಿ ಸಿಗುವ ಮೇಣದಂತಹ ಪದಾರ್ಥ) ಎಂಬ ವಸ್ತು ಹಾಗೂ ಎಣ್ಣೆಯನ್ನು ತೆಗೆಯಲು ಈ ತಿಮಿಂಗಿಲವನ್ನು ಕಡಲ್ಗಳ್ಳರು ಕೊಲ್ಲುತ್ತಿದ್ದರಂತೆ. ಸ್ಪರ್ಮಾಸೆಟಿಯನ್ನು ವಿವಿಧ ಬಗೆಯ ಅತ್ಯಾಕರ್ಷಕ ಲಕ್ಷುರಿ ಸೋಪು, ಕ್ಯಾಂಡಲ್ ಹಾಗೂ ಸೌಂದರ್ಯ ಪ್ರಸಾಧನಗಳಲ್ಲಿ ಬಳಲಾಗುತ್ತದೆ. ಜೊತೆಗೆ ಸ್ಪರ್ಮ್ ಎಣ್ಣೆಯನ್ನು ಲ್ಯಾಂಪ್ ಎಣ್ಣೆ, ಪೆನ್ಸಿಲ್, ಕ್ರೆಯಾನ್, ಲೆದರ್ ವಾಟರ್ ಪ್ರೂಫಿಂಗ್ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಜೊತೆಗೆ ಕೆಲವು ಬಗೆಯ ವಿಶೇಷ ಔಷಧಿಗಳ ತಯಾರಿಕೆಯಲ್ಲೂ ಇವುಗಳ ಬಳಕೆಯಿದೆ. ಜೊತೆಗೆ ಇದರ ಸ್ಪರ್ಮ್ ವೇಲ್ ಕರುಳಿನಲ್ಲಿ ಸ್ರವಿಸುವ ಗ್ರಂಥಿಗಳಿಂದ ಉತ್ಪತ್ತಿಯಾಗುವ ಆಂಬರ್ಗ್ರಿಸ್ ಅತ್ಯಂತ ದುಬಾರಿ ವಸ್ತು. ಇದು ಅರಗಿನಂತೆ ಬೇಗನೆ ಬೆಂಕಿ ಹತ್ತಿಕೊಳ್ಳುವಂಥ ಪದಾರ್ಥವಾಗಿದ್ದು, ಇದನ್ನು ಅಮೂಲ್ಯ ಸುಗಂಧ ದ್ವವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ತಿಮಿಂಗಿಲದ ಹಲ್ಲೂಗಳೂ ಕೂಡಾ ಆನೆಯ ದಂತದಂತೆ ಬಹಳ ಬೆಲೆಬಾಳುತ್ತದೆ.
ಈ ಎಲ್ಲ ಉಪಯೋಗಗಳಿಂದಾಗಿ ಈ ತಿಮಿಂಗಿಲದ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು ಸದ್ಯ ವಿಶ್ವದಲ್ಲಿ ಹಲವು ಸಾವಿರಗಳಷ್ಟು ಸಂಖ್ಯೆಯಲ್ಲಿ ಇವು ಇರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿದ ಮಾಲಿನ್ಯ, ಕೆಲವು ಮಾದರಿಯ ಮೀನುಗಾರಿಕೆ ಕೂಡಾ ಇವುಗಳ ಪ್ರಾಣಕ್ಕೆ ಸಂಚಕಾರ ತಂದಿದೆ.
ಇದನ್ನೂ ಓದಿ: ವಿಸ್ತಾರ Explainer | Smrithi Irani daughter ಝೋಯಿಶ್ ಹಾಗೂ ಗೋವಾ ರೆಸ್ಟೋರೆಂಟ್, ಏನಿದು ವಿವಾದ?