Site icon Vistara News

Gautam Adani | 26/11ರ ಉಗ್ರರ ದಾಳಿಯಲ್ಲಿ ಬಹುಶಃ ಹತ್ಯೆಗೀಡಾಗುತ್ತಿದ್ದೆ: ಗೌತಮ್‌ ಅದಾನಿ ಬಹಿರಂಗ

adani

ನವ ದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರು ಜನಪ್ರಿಯ ಟಿವಿ ಶೋ ಆಪ್‌ ಕಿ ಅದಾಲತ್‌ನಲ್ಲಿ ಮಾತನಾಡುತ್ತಾ, ಮುಂಬಯಿ ಮೇಲೆ 2008ರ ನವೆಂಬರ್‌ 26ರಂದು ನಡೆದ ಉಗ್ರರ ದಾಳಿಯ ವೇಳೆ ಬಹುಶಃ (Gautam Adani) ನಾನು ಹತ್ಯೆಗೀಡಾಗುತ್ತಿದ್ದೆ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಇಂಡಿಯಾ ಟಿವಿಯ ಪ್ರಧಾನ ಸಂಪಾದಕ ಮತ್ತು ಅಧ್ಯಕ್ಷ ರಜತ್‌ ಶರ್ಮಾ ಅವರು ನಡೆಸಿಕೊಡುವ ಆಪ್‌ ಕಿ ಅದಾಲತ್‌ ಸಂದರ್ಶನದಲ್ಲಿ ಮಾತನಾಡಿದ ಅದಾನಿ ಅವರು ಈ ಪ್ರಸಂಗವನ್ನು ವಿವರಿಸಿದರು.

ಉಗ್ರರ ದಾಳಿಗೆ ಗುರಿಯಾಗಿದ್ದ ತಾಜ್ ಹೋಟೆಲ್‌ನಲ್ಲಿ ಗೌತಮ್‌ ಅದಾನಿ ಕೂಡ ದುಬೈ ಮೂಲದ ಸ್ನೇಹಿತರೊಡನೆ ಮಾತುಕತೆ ನಡೆಸುತ್ತಿದ್ದರು. ಆ ಭಯಾನಕ ಘಟನೆಯನ್ನು ಅದಾನಿ ಸ್ಮರಿಸಿಕೊಂಡರು.

ತಾಜ್‌ ಹೋಟೆಲ್‌ ಮೇಲೆ ಸುಮಾರು 10 ಗಂಟೆಗಳ ಕಾಲ ಉಗ್ರರ ದಾಳಿ ನಡೆದಿತ್ತು. ಪಾಕಿಸ್ತಾನ ಮೂಲದ ಲಷ್ಕರೆ ತೈಬಾದ ಕನಿಷ್ಠ ಹತ್ತು ಉಗ್ರರು ಸರಣಿ ಬಾಂಬ್‌ ದಾಳಿ ನಡೆಸಿದ್ದರು. ಗುಂಡಿನ ಮಳೆಗೆರೆದಿದ್ದರು. ನಾಲ್ಕು ದಿನಗಳ ಕಾಲ ದಾಳಿ ಮುಂದುವರಿದಿತ್ತು.

ಉಗ್ರರು ದಾಳಿ ನಡೆಸಿದ್ದ ತಾಜ್‌ ಹೋಟೆಲ್‌ನಲ್ಲಿ ಅದಾನಿ

ನಾನು ದುಬೈನಿಂದ ಬಂದಿದ್ದ ಸ್ನೇಹಿತರೊಡನೆ ತಾಜ್‌ ಹೋಟೆಲ್‌ನಲ್ಲಿ ಮಾತುಕತೆ ನಡೆಸುತ್ತಿದ್ದೆ. ಬಿಲ್‌ ಪಾವತಿಸಿದ ಬಳಿಕ ಹೋಟೆಲ್‌ನಿಂದ ಹೊರ ಬರಬೇಕಿತ್ತು. ಆಗ ಸ್ನೇಹಿತರಲ್ಲಿ ಕೆಲವರು ಮತ್ತೊಂದು ಸುತ್ತಿನ ಸಭೆ ನಡೆಸಲು ಕೋರಿದರು. ಹೀಗಾಗಿ ಅಲ್ಲಿಯೇ ಉಳಿದಿದ್ದೆ. ಮತ್ತೊಂದು ಸುತ್ತಿನ ಚಹಾ ಕೂಟ ಮತ್ತು ಸಭೆ ನಡೆಯಿತು. ಆಗ ಅನಿರೀಕ್ಷಿತವಾಗಿ ಹೋಟೆಲ್‌ ಮೇಲೆ ಉಗ್ರರ ದಾಳಿಯಾಗಿರುವ ಬಗ್ಗೆ ತಿಳಿದು ಬಂತು. ಕೆಲ ನಿಮಿಷಗಳಲ್ಲಿ ಹೋಟೆಲ್‌ ಸಿಬ್ಬಂದಿ ನನ್ನನ್ನು ಹಿಂಬಾಗಿಲಿನ ಮೂಲಕ ಅಡುಗೆ ಕೋಣೆಗೆ ಕರೆದೊಯ್ದರು. ಹೋಟೆಲ್‌ ಸಿಬ್ಬಂದಿಯಲ್ಲಿ ಅಂಥ ಬದ್ಧತೆ ಇತ್ತು. ಇದು ಅಪರೂಪ ಎಂದು ಅದಾನಿ ವಿವರಿಸಿದರು. ಬೆಳಗ್ಗೆ 7.30ರ ವೇಳೆಗೆ (2008, ನವೆಂಬರ್‌ 27) ಕಮಾಂಡೋಗಳು ಪೂರ್ಣ ಭದ್ರತೆಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಕಾಪಾಡಿ ಕರೆದುಕೊಂಡು ಹೋದರು.

ಒಂದು ವೇಳೆ ಸ್ನೇಹಿತರೊಡನೆ ಮುಂದಿನ ಸುತ್ತಿನ ಮಾತುಕತೆ ನಡೆಸದಿರುತ್ತಿದ್ದರೆ, ನಾನು ಬಹುಶಃ ಹೋಟೆಲ್‌ನ ಬಾಲ್ಕನಿಯಲ್ಲೋ, ಹೊರ ಭಾಗದಲ್ಲಿ ಎಲ್ಲೋ ಅಡ್ಡಾಡಿಕೊಂಡು ಇರುತ್ತಿದ್ದೆ. ಆಗ ಉಗ್ರರ ಕಣ್ಣಿಗೆ ಬಿದ್ದು ಹತ್ಯೆಗೀಡಾಗುವ ಸಾಧ್ಯತೆ ಇರುತ್ತಿತ್ತು. ಉಗ್ರರ ಕೈಯಲ್ಲಿ ಭಯಾನಕ ಶಸ್ತ್ರಾಸ್ತ್ರಗಳು ಇದ್ದವು ಎಂದು ಅದಾನಿ ವಿವರಿಸಿದರು.

2008ರ ಉಗ್ರರ ದಾಳಿಯ ಸಂದರ್ಭ 166 ನಾಗರಿಕರು ಮತ್ತು 18 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು. ನವೆಂಬರ್‌ 26ರಂದು ನಡೆದ ದಾಳಿ ನವೆಂಬರ್ 29ರ ತನಕ ನಡೆದಿತ್ತು.‌ ಅಜ್ಮಲ್‌ ಕಸಬ್‌ ಮಾತ್ರ ಜೀವಂತ ಸೆರೆ ಸಿಕ್ಕ ಉಗ್ರನಾಗಿದ್ದ. ಆತನನ್ನು 2012ರ ನವೆಂಬರ್‌ 21ರಂದು ನೇಣಿಗೇರಿಸಲಾಯಿತು. ಉಳಿದವರನ್ನು ಭದ್ರತಾ ಪಡೆ ಗುಂಡಿಕ್ಕಿ ಹತ್ಯೆ ಮಾಡಿತ್ತು.

Exit mobile version