Site icon Vistara News

ಬಿಜೆಪಿ ಜತೆ ಹೋಗೋದಕ್ಕಿಂತ ಸಾಯೋದೇ ಮೇಲು; ನಿತೀಶ್‌ ಕುಮಾರ್‌ ಹಳೇ ವಿಡಿಯೊ ವೈರಲ್

Nitish kumar

Would rather die than go to NDA: Old Nitish Kumar video goes viral‌

ಪಟನಾ: ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ ಎಂಬ ಮಾತಿದೆ. ಈ ಮಾತಿಗೆ ನಿಜ ಎಂಬಂತೆ, ಬಿಹಾರದಲ್ಲಿ ಸಮಯ ಬಂದಾಗ ಆರ್‌ಜೆಡಿ ಹಾಗೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಿತೀಶ್‌ ಕುಮಾರ್‌ (Nitish Kumar) ಅವರು ಅಧಿಕಾರ (Bihar Politics) ಅನುಭವಿಸಿದ್ದಾರೆ. ಈಗ ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು, ಭಾನುವಾರ ರಾಜೀನಾಮೆ ನೀಡಿ, ಬಿಜೆಪಿ ಜತೆಗೂಡಿ ಸರ್ಕಾರ ರಚಿಸಲು ನಿತೀಶ್‌ ಕುಮಾರ್‌ ಅವರು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ, “ಬಿಜೆಪಿ ಜತೆ ಕೈಜೋಡಿಸುವುದಕ್ಕಿಂತ ಸಾಯೋದೇ ಮೇಲು” ಎಂದು ನಿತೀಶ್‌ ಕುಮಾರ್‌ ಅವರು ಇದಕ್ಕೂ ಮೊದಲು ನೀಡಿದ ಹೇಳಿಕೆಯ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು, ಆಗಷ್ಟೇ ಆರ್‌ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್‌ ಕುಮಾರ್‌ ಅವರು 2023ರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದರು. ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತೀರಾ ಎಂಬ ಪ್ರಶ್ನೆಗೆ ಅವರ, “ನಾನು ಬಿಜೆಪಿ ಜತೆ ಹೋಗುವುದಕ್ಕಿಂತ ಸಾಯೋದೇ ಮೇಲು ಎಂದು ಭಾವಿಸಿದ್ದೇನೆ. ಬಿಜೆಪಿಯವರು ಹೇಳುವುದೆಲ್ಲ ಸುಳ್ಳು. ಅವರು ತೇಜಸ್ವಿ ಯಾದವ್‌ ಹಾಗೂ ಅವರ ತಂದೆ ಮೇಲೆ ಯಾವುದೇ ಕಾರಣ ಇಲ್ಲದೆ ಪ್ರಕರಣ ದಾಖಲಿಸಿದ್ದಾರೆ” ಎಂದಿದ್ದರು. ಆದರೆ, ಈಗ ನಿತೀಶ್‌ ಕುಮಾರ್‌ ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸುತ್ತಿರುವ ಕಾರಣ ಹಳೆಯ ವಿಡಿಯೊ ಈಗ ವೈರಲ್‌ ಆಗಿದೆ.

ನಿತೀಶ್‌ ಕುಮಾರ್‌ ಅವರು ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಆರ್‌ಜೆಡಿ ಶಾಸಕರ ಜತೆ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರು ಸಭೆ ನಡೆಸಿ, ಅವರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. “ಆರ್‌ಜೆಡಿಯ ಯಾವ ಶಾಸಕರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಅಧಿಕಾರ ಹೋಯ್ತು ಎಂದು ಹತಾಶರಾಗುವುದೂ ಬೇಡ. ತೇಜಸ್ವಿ ಯಾದವ್‌ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ” ಎಂಬುದಾಗಿ ಲಾಲು ಪ್ರಸಾದ್‌ ಯಾದವ್‌ ಅವರು ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಿಜೆಪಿಯು ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಕಾರಣ ಜೆಡಿಯು ಶಾಸಕರ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bihar Politics: ನಿತೀಶ್‌ ಕುಮಾರ್ ರಾಜೀನಾಮೆಗೆ ಕ್ಷಣಗಣನೆ; ಪಕ್ಷವಾರು ಬಲಾಬಲ ಹೇಗಿದೆ?

ಬಿಹಾರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ರಚಿಸದಿದ್ದರೂ ನಿತೀಶ್‌ ಕುಮಾರ್‌ ಅವರು 2005ರಿಂದಲೂ (8 ತಿಂಗಳು ಹೊರತುಪಡಿಸಿ) ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ಬಿಜೆಪಿ ಜತೆಗೂಡಿ 20 ವರ್ಷ ಸಿಎಂ ಹುದ್ದೆಯಲ್ಲಿದ್ದರು. ಹಾಗೆಯೇ, ಮಹಾಘಟಬಂಧನ್‌ ಎಂಬ ಮೈತ್ರಿ ರಚಿಸಿ 4 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಿತೀಶ್‌ ಕುಮಾರ್‌ ಅವರು ಮೈತ್ರಿಪಕ್ಷಗಳನ್ನು ಆಗಾಗ ಬದಲಾಯಿಸಿದರೂ, ಅವರೇ ಸಿಎಂ ಆದರೂ, ಬೇರೆ ಪಕ್ಷಗಳು ಮಾತ್ರ ಅವರಿಗೆ ಆಫರ್‌ ನೀಡುತ್ತಲೇ ಇರುತ್ತವೆ. ಈಗ ಬಿಜೆಪಿಯು ಅವರ ಜತೆ ಮತ್ತೆ ಜೋಡಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version