Site icon Vistara News

Video | ಭಾರತ್​ ಜೋಡೋ ಯಾತ್ರೆಯಲ್ಲಿ ಮೊಳಗಿದ ನೇಪಾಳ ರಾಷ್ಟ್ರಗೀತೆ; ಮುಖಮುಖ ನೋಡಿಕೊಂಡ ಕಾಂಗ್ರೆಸ್ ನಾಯಕರು!

Wrong National Anthem In Bharat Jodo Yatra In Maharashtra

ವಾಶಿಮ್​: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಮಹಾರಾಷ್ಟ್ರದಲ್ಲಿದೆ. ಇಲ್ಲಿನ ವಾಶಿಮ್​ ಜಿಲ್ಲೆಯಲ್ಲಿ ಭಾರತ್​ ಜೋಡೋ ಯಾತ್ರೆಯ ಸಭಾ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಕಾಂಗ್ರೆಸ್​ ಒಂದು ಎಡವಟ್ಟು ಮಾಡಿಕೊಂಡಿದ್ದು, ಬಿಜೆಪಿಯವರು ಮತ್ತು ಜನಸಾಮಾನ್ಯರು ರಾಹುಲ್ ಗಾಂಧಿಯರನ್ನು ಟೀಕಿಸುತ್ತಿದ್ದಾರೆ. ‘ನಿಮಗೆ ಜವಾಬ್ದಾರಿಯೇ ಇಲ್ಲವಾ’ ಎಂದು ಪ್ರಶ್ನಿಸುತ್ತಿದ್ದಾರೆ.

ಭಾರತ್​ ಜೋಡೋ ಯಾತ್ರೆ ಮಹಾರಾಷ್ಟ್ರ ಪ್ರವೇಶ ಮಾಡಿ ವಾರದ ಮೇಲಾಯಿತು. ಬುಧವಾರ ವಾಶಿಮ್​ ಜಿಲ್ಲೆಯಲ್ಲಿ ಒಂದು ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಿದರು. ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳ್ಳುತ್ತಿದ್ದಂತೆ ನಿರೂಪಕರು, ಈಗ ರಾಷ್ಟ್ರಗೀತೆ ಪ್ರಸಾರವಾಗುತ್ತದೆ ಎಂದು ಮೈಕ್​​ನಲ್ಲಿ ಪ್ರಕಟಿಸಿದರು. ರಾಹುಲ್​ ಗಾಂಧಿ ಕೂಡ ಮೈಕ್​ ಬಳಿ ಬಂದು ಅಬ್​ ರಾಷ್ಟ್ರಗೀತ್​ (ಈಗ ರಾಷ್ಟ್ರಗೀತೆ) ಎಂದು ಹೇಳಿದರು. ವೇದಿಕೆ ಮೇಲೆ ಆಸೀನರಾಗಿದ್ದವರು, ನೆರೆದಿದ್ದ ಜನರೆಲ್ಲ ಎದ್ದುನಿಂತು, ಸಾವಧಾನ್​ ಸ್ಥಿತಿಯಲ್ಲಿ ನಿಂತಿದ್ದಾರೆ. ಆದರೆ ಭಾರತದ ರಾಷ್ಟ್ರಗೀತೆ ಪ್ರಸಾರವಾಗದೆ, ನೇಪಾಳ ರಾಷ್ಟ್ರಗೀತೆ ಪ್ರಸಾರವಾಯಿತು. ನೇಪಾಳ ರಾಷ್ಟ್ರಗೀತೆ ಪ್ರಸಾರಕ್ಕೂ ಮೊದಲು ಒಂದು ಮ್ಯೂಸಿಕ್​ ಪ್ರಸಾರವಾಗುತ್ತದೆ. ಆ ಮ್ಯೂಸಿಕ್​ ಬಂದಾಗಲೂ ಅಲ್ಲಿದ್ದವರಿಗೆ ಅದು ಜನಗಣಮನ ಅಲ್ಲ ಎಂದು ಗೊತ್ತಾಗಲಿಲ್ಲ. ಹಾಡು ಬಂದಾಗಲೇ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ರಾಹುಲ್ ಗಾಂಧಿ ಕೂಡ ನಿರೂಪಕನ ಬಳಿ, ‘ಏನಿದು?’ ಎಂದು ಕೇಳಿದ್ದಾರೆ. ತಕ್ಷಣವೇ ಆ ಹಾಡು ನಿಲ್ಲಿಸಿ, ಭಾರತದ ರಾಷ್ಟ್ರಗೀತೆ ಹಾಕಲಾಗಿದೆ.

ವಿಡಿಯೊ ಸಿಕ್ಕಾಪಟೆ ವೈರಲ್​ ಆಗಿದೆ. ತಮಿಳುನಾಡು ಬಿಜೆಪಿ ನಾಯಕ ಅಮರ್​ ಪ್ರಸಾದ್​ ರೆಡ್ಡಿ ಈ ವಿಡಿಯೊವನ್ನು ಶೇರ್​ ಮಾಡಿಕೊಂಡು ‘ರಾಹುಲ್​ ಗಾಂಧಿಯವರೇ ಏನಿದು?’ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೇ, ವಿಡಿಯೊ ಶೇರ್ ಮಾಡಿಕೊಂಡ ಮಹಾರಾಷ್ಟ್ರ ಬಿಜೆಪಿ ನಾಯಕ ನಿತೇಶ್​ ರಾಣೆ, ‘ಇದು ಪಪ್ಪುವಿನ ಕಾಮಿಡಿ ಸರ್ಕಸ್​’ ಎಂದು ವ್ಯಂಗ್ಯವಾಡಿದ್ದಾರೆ. ವಿಡಿಯೊ ನೋಡಿದ ಜನರೂ ಆಕ್ಷೇಪ ಎತ್ತಿದ್ದಾರೆ. ಪ್ರಾರಂಭದಲ್ಲಿ ಹಾಡಿಗಿಂತಲೂ ಮುಂಚೆ ಅದ್ಯಾವುದೋ ಮ್ಯೂಸಿಕ್​ ಪ್ರಸಾರವಾದಾಗಲೇ ಗೊತ್ತಾಗುತ್ತದೆ, ಅದು ರಾಷ್ಟ್ರಗೀತೆ ಅಲ್ಲ ಎಂದು. ಹಾಗಿದ್ದಾಗ್ಯೂ ಕಾಂಗ್ರೆಸ್​ ನಾಯಕರು ತುಂಬ ಹೊತ್ತಿನ ನಂತರ ಅದು ರಾಷ್ಟ್ರಗೀತೆ ಅಲ್ಲ ಎಂದು ಅರಿತುಕೊಂಡರು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್​ ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆಯಲ್ಲಿ ನಟಿ ಪೂನಮ್​ ಕೈ ಹಿಡಿದು ಸಾಗಿದ ರಾಹುಲ್​ ಗಾಂಧಿ; ವ್ಯಂಗ್ಯ ಮಾಡಿದ ಪ್ರೀತಿ ಗಾಂಧಿ ಟ್ರೋಲ್​

Exit mobile version