ಮುಂಬೈ: ಗೃಹ ಸಚಿವರೂ ಆಗಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಸಿಎಂ ಏಕನಾಥ್ ಶಿಂಧೆ ಕ್ಯಾಂಪಿನ ಎಲ್ಲ 41 ಶಾಸಕರು ಮತ್ತು 10 ಲೋಕಸಭಾ ಸದಸ್ಯರಿಗೆ ವೈ ಪ್ಲಸ್ ಸೆಕ್ಯುರಿಟಿಯನ್ನು(MLA, MPs Security) ಒದಗಿಸಿದ್ದಾರೆ. ಮಹಾ ವಿಕಾಸ್ ಆಘಾಡಿ(ಎಂವಿಎ)ಯ ಕೆಲವು ನಾಯಕರಿಗೆ ನೀಡಲಾದ ಸೆಕ್ಯುರಿಟಿಯನ್ನು ವಾಪಸ್ ಪಡೆಯಲಾಗಿದೆ ಇಲ್ಲವೇ ಕಡಿಮೆ ಮಾಡಲಾಗಿದೆ. ಈ ಕ್ರಮ ಕೈಗೊಂಡ ಬೆನ್ನಲ್ಲೇ ಸರ್ಕಾರವು ಶಿಂಧೆ ಕ್ಯಾಂಪಿನ ಎಲ್ಲ ಶಾಸಕರು ಮತ್ತು ಸಂಸದರಿಗೆ ಭದ್ರತೆಯನ್ನು ಹೆಚ್ಚಿಸಿದೆ.
ಮುಖ್ಯಮಂತ್ರಿ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್, ರಾಜ್ಯಪಾಲ ಬಿ ಎಸ್ ಕೋಶ್ಯಾರಿ ಅವರಿಗೆ ಜೆಡ್ ಪ್ಲಸ್ ಭದ್ರತೆ ಹಾಗೆಯೇ ಮುಂದುವರಿದಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ ಠಾಕ್ರೆ, ಉದ್ಧವ್ ಅವರ ಪತ್ನಿ ರಶ್ಮಿ ಮತ್ತು ಪುತ್ರ ತೇಜಸ್ ಹಾಗೂ ಶಿಂಧೆ ಅವರ ಪುತ್ರ ಶ್ರೀಕಾಂತ್ ಅವರಿಗೆ ನೀಡಲಾದ ವೈ ಪ್ಲಸ್ ಭದ್ರತೆಯನ್ನು ಮುಂದವರಿಸಲಾಗಿದೆ. ಮತ್ತೊಂದೆಡೆ, ಫಡ್ನವಿಸ್ ಅವರ ಪತ್ನಿ ಅಮೃತಾ ಅವರಿಗೆ ಒದಗಿಸಲಾಗುತ್ತಿದ್ದ ಭದ್ರತೆಯನ್ನು ವೈನಿಂದ ಎಕ್ಸ್ ಪ್ಲಸ್‌ಗೆ ಹೆಚ್ಚಿಸಲಾಗಿದೆ.
ಮತ್ತೊಂದೆಡೆ, ಅಂಬಾನಿ ಕುಟುಂಬಕ್ಕೆ ಜೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗುತ್ತಿದೆ. ಸಲ್ಮಾನ್ ಖಾನ್ ಅವರಿಗೆ ಎಸ್ಕಾರ್ಟ್ ಜತೆಗೆ ವೈ ಪ್ಲಸ್ ಸೆಕ್ಯುರಿಟಿಯನ್ನು ಕೊಡಲಾಗುತ್ತಿದೆ. ಕಳೆದ ವರ್ಷವಷ್ಟೇ, ಏಕನಾಥ ಶಿಂಧೆ ಅವರು ಉದ್ಧವ್ ಠಾಕ್ರೆ ಅವರ ವಿರುದ್ಧ ಬಂಡೆದ್ದು, ಬಿಜೆಪಿ ಜತೆಗೂಡಿ ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಿದ್ದಾರೆ.
ಇದನ್ನೂ ಓದಿ | ಹೈದರಾಬಾದ್ನಲ್ಲಿ ಗೃಹ ಸಚಿವ ಅಮಿತ್ ಶಾ ಭದ್ರತೆಯಲ್ಲಿ ಲೋಪ; ಅಡ್ಡಬಂದು ನಿಂತ ಕೆಂಪು ಕಾರು