ನ್ಯೂಯಾರ್ಕ್: ಯೋಗದ ಮೂಲಕ ʼಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯʼ ಎಂಬ ಆದರ್ಶವನ್ನು ಪ್ರತಿಷ್ಠಾಪಿಸಬೇಕಾಗಿದೆ. ಅದಕ್ಕೆ ಈ ಯೋಗ ದಿನ (Yoga Day 2023) ಮುನ್ನುಡಿಯಾಗಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಅವರು ಅಲ್ಲಿಂದಲೇ ಯೋಗ ದಿನದ ಕುರಿತು ವಿಡಿಯೋ ಸಂದೇಶ ನೀಡಿದ್ದಾರೆ. ಯೋಗವು ಈಗ ವಿಶ್ವದ ಚೈತನ್ಯವಾಗಿದೆ, ವೈಶ್ವಿಕ ಆಂದೋಲನವಾಗಿದೆ ಎಂದವರು ನುಡಿದರು.
ನಾನು ಇಂದು ವಿಶ್ವಸಂಸ್ಥೆಯಲ್ಲಿ ಆಹ್ವನದ ಮೇರೆಗೆ ಯೋಗ ಮಾಡಲಿದ್ದೇನೆ. ಯೋಗ ದಿನಾಚರಣೆಗಾಗಿ ಭಾರತ ಕರೆ ನೀಡಿದಾಗ ಇಡೀ ವಿಶ್ವವೇ ಸ್ಪಂದಿಸಿತು. ಎಲ್ಲ ದೇಶಗಳೂ ಯೋಗವನ್ನು ಅಳವಡಿಸಿಕೊಂಡವು. ಇದೊಂದು ಐತಿಹಾಸಿಕ, ಮಹತ್ವದ ಸಂಗತಿಯಾಗಿತ್ತು. ಈ ಬಾರಿಯ ಯೋಗದ ಧ್ಯೇಯವಾಕ್ಯ ʼಯೋಗ ಫಾರ್ ವಸುದೈವ ಕುಟುಂಬಕಂʼ ಎಂಬುದಾಗಿದೆ. ಈ ಬಾರಿಯ ಜಿ20 ಸಮಾವೇಶದ ಧ್ಯೇಯವಾಕ್ಯವೂ ʼಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯʼ ಎಂಬುದಾಗಿದೆ. ʼಯೋಗʼ ಎಂಬುದರನ್ನು ಅರ್ಥವೇ ʼಜೋಡಿಸುʼ ಎಂಬುದಾಗಿದೆ. ನಾವೆಲ್ಲರೂ ಸೇರಿ ಯೋಗದ ಮೂಲಕ ಎಲ್ಲರನ್ನೂ ಜೋಡಿಸೋಣ ಎಂದು ಅವರು ಕರೆ ನೀಡಿದರು.
PM Shri @narendramodi's message on International Day of Yoga.#InternationalDayofYoga2023 https://t.co/VijfkFr3Iw
— BJP (@BJP4India) June 21, 2023
ಯೋಗದ ವಿಚಾರ ಹಾಗೂ ಸಮುದ್ರದ ವಿಸ್ತಾರಕ್ಕೆ ಪರಸ್ಪರ ಸಂಬಂಧವಿದೆ. ಇಂದು ನೌಕಾ ಯೋಧರ ಸಹಯೋಗದಲ್ಲಿ ʼಯೋಗ ಭಾರತಮಾಲಾʼ ಹಾಗೂ ʼಯೋಗ ಸಾಗರಮಾಲಾʼ ಅನ್ನು ರಚಿಸಲಾಗುತ್ತಿದೆ. ಭೂಮಿಯ ಎರಡು ಧ್ರುವಗಳನ್ನು ಯೋಗದ ಮೂಲಕ ಜೋಡಿಸಲಾಗುತ್ತಿದೆ. ಆರ್ಕ್‌ಟಿಕ್ ಹಾಗೂ ಅಂಟಾರ್ಕ್‌ಟಿಕ್‌ಗಳಲ್ಲಿ ಭಾರತದ ಯೋಗದ ಎರಡು ಸಂಶೋಧನ ಕೇಂದ್ರಗಳಿವೆ. ಇದು ಯೋಗದ ಮಹಾತ್ಮೆಯನ್ನು ಜಗತ್ತಿಗೆ ಇನ್ನಷ್ಟು ದೃಢಪಡಿಸಲಿದೆ ಎಂದು ಮೋದಿ ವಿವರಿಸಿದರು.
ಆತ್ಮನಿರ್ಭರ ಭಾರತ, ಸ್ವಚ್ಛ ಭಾರತದ ಕನಸಿಗೆ ನೀವೆಲ್ಲರೂ ಕೈ ಜೋಡಿಸಿದ್ದೀರಿ. ಹಾಗೆಯೇ ಯೋಗವನ್ನೂ ಎಲ್ಲೆಡೆ ಪಸರಿಸಬೇಕು. ಯೋಗ ಇಡೀ ವಿಶ್ವಕ್ಕೆ ಸ್ಫೂರ್ತಿಯನ್ನು ತುಂಬಿದೆ. ನಾವೆಲ್ಲರೂ ಆರೋಗ್ಯವಂತರಾಗಿರಲು ಯೋಗ ಸಹಕಾರಿಯಾಗಲಿದೆ. ಯೋಗದ ಮೂಲಕ ಧೈರ್ಯ, ಸ್ಥೈರ್ಯಗಳನ್ನು ಭಾವಿ ಪ್ರಜೆಗಳಲ್ಲಿ ತುಂಬಬೇಕು. ಆಗ ಭಾರತ ವಿಶ್ವಗುರುವಾಗಲು ಸಹಕಾರಿಯಾಗುತ್ತದೆ. ಸದೃಢ ಭಾರತದ ಕನಸು ಆಗ ನನಸಾಗಲಿದೆ.
ಇದನ್ನೂ ಓದಿ: Yoga Day 2023: ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಇಂದು ಯೋಗ ಪ್ರದರ್ಶನ