ನ್ಯೂಯಾರ್ಕ್: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ (PM Modi US Visit) ಮಹತ್ವ ಸಾರಿದ್ದಾರೆ. “ಯೋಗ ಎಂದರೆ ಬರೀ ವ್ಯಾಯಾಮ ಪದ್ಧತಿ ಅಲ್ಲ, ಅದೊಂದು ಜೀವನ ವಿಧಾನ. ಯೋಗವು ಜನರನ್ನು ಒಗ್ಗೂಡಿಸುವ ಜತೆಗೆ ಆರೋಗ್ಯವಾಗಿಡುವಂತೆ ಮಾಡುತ್ತದೆ” ಎಂದು ನರೇಂದ್ರ ಮೋದಿ ಭಾಷಣ ಮಾಡಿದರು.
ಯೋಗಕ್ಕೆ ಪೇಟೆಂಟ್ ಇಲ್ಲ, ಎಲ್ಲರಿಗೂ ಉಚಿತ
“ಯೋಗವು ಆರೋಗ್ಯದ ಗುಟ್ಟಾಗಿದ್ದು, ಯೋಗವು ಎಲ್ಲರಿಗೂ ಮುಕ್ತವಾಗದೆ. ಯೋಗಕ್ಕೆ ಯಾವುದೇ ಪೇಟೆಂಟ್ ಇಲ್ಲ. ಯೋಗವನ್ನು ಯಾರು ಬೇಕಾದರೂ ಮಾಡಬಹುದು. ಇದರಿಂದ ದೇಹವು ಆರೋಗ್ಯದಿಂದ ಇರುವ ಜತೆಗೆ ಮನಸ್ಸು ಯಾವಾಗಲೂ ಉಲ್ಲಾಸದಿಂದ ಇರುತ್ತದೆ. ಹಾಗಾಗಿ, ಯೋಗ ಎಂದರೆ ಒಗ್ಗಟ್ಟು, ಯೋಗ ಎಂದರೆ ಜೀವನ ಶೈಲಿ, ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ಶಾಂತಿ” ಎಂದು ಯೋಗದ ಮಹತ್ವ ಸಾರಿದರು.
ಇದನ್ನೂ ಓದಿ: Yoga Day 2023: ಯೋಗ ಇಂದು ವಿಶ್ವದ ಚೈತನ್ಯ: ಯೋಗ ದಿನಕ್ಕೆ ನರೇಂದ್ರ ಮೋದಿ ಸಂದೇಶ
ಒಂಬತ್ತು ವರ್ಷಗಳ ಹಿಂದೆ ನಾವು ಯೋಗದ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪ ಮಾಡಿದ್ದೆವು. ಯೋಗದ ಮಹತ್ವ ತಿಳಿಸಿ, ಎಲ್ಲರೂ ಯೋಗವನ್ನು ಅಳವಡಿಸಿಕೊಳ್ಳೋಣ, ಯೋಗ ದಿನ ಆಚರಣೆ ಮಾಡೋಣ ಎಂದು ಹೇಳಿದೆವು. ಇದಕ್ಕೆ ಜಗತ್ತೇ ಒಗ್ಗೂಡಿ ಭಾರತವನ್ನು ಬೆಂಬಲಿಸಿತು. ಬಹುತೇಕ ರಾಷ್ಟ್ರಗಳು ಯೋಗವನ್ನು ಬೆಂಬಲಿಸಿದೆವು. ಇದರಿಂದಾಗಿ ಯೋಗ ಇಂದು ಜಗತ್ತನ್ನು ಆವರಿಸಿದೆ. ಇದಕ್ಕಾಗಿ ನಾವು ಜಗತ್ತಿನ ರಾಷ್ಟ್ರಗಳಿಗೆ ಆಭಾರಿಯಾಗಿದ್ದೇವೆ” ಎಂದು ಹೇಳಿದರು.
ಇದಕ್ಕೂ ಮೊದಲು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರ‍್ರೆಸ್ ಅವರು ಮಾತನಾಡಿ, “ಯೋಗವು ವಿಶ್ವಮಟ್ಟದಲ್ಲಿ ಪಸರಿಸಲು ಮೋದಿ ಅವರ ಕೊಡುಗೆ ಅಪಾರವಾಗಿದೆ. ಇಂದು ಜಗತ್ತೇ ಯೋಗವನ್ನು ಅಳವಡಿಸಿಕೊಂಡಿದೆ. ಸದೃಢ ಸಮಾಜದ ನಿರ್ಮಾಣಕ್ಕಾಗಿ ಯೋಗವನ್ನು ಎಲ್ಲರೂ ಅಳವಡಿಸಿಕೊಳ್ಳೋಣ” ಎಂದು ಕರೆ ನೀಡಿದರು.