Site icon Vistara News

‘ನ್ಯೂಯಾರ್ಕ್‌ ಸಿಟಿ’ಯನ್ನೂ ಬಿಡದ ಯೋಗಿ ಆದಿತ್ಯನಾಥ್‌ ಬುಲ್ಡೋಜರ್‌ಗಳು; ಅಕ್ರಮ ಕಟ್ಟಡ ಧ್ವಂಸ

Yogi Adityanath

Yogi Adityanath Govt Bulldozers Reach 'New York City'; What Happened Next?

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ಮುಖ್ಯಮಂತ್ರಿಯಾದ ಬಳಿಕ ಅಪರಾಧಿಗಳನ್ನು ಮಟ್ಟಹಾಕಲು ಹತ್ತಾರು ಕ್ರಮ ತೆಗೆದುಕೊಳ್ಳಲಾಗಿದೆ. ಅದರಲ್ಲೂ, ಅತ್ಯಾಚಾರ ಆರೋಪಿಗಳು, ಕೊಲೆ-ಸುಲಿಗೆ ಮಾಡಿದವರು, ಸರ್ಕಾರದ ಆಸ್ತಿಗೆ ಹಾನಿ ಮಾಡಿದವರ ಮನೆಗಳನ್ನು (ಅಕ್ರಮವಾಗಿ ನಿರ್ಮಿಸಿದರು ಎಂಬ ಕಾರಣಕ್ಕಾಗಿ) ಧ್ವಂಸಗೊಳಿಸಲಾಗುತ್ತಿದೆ. ಹಾಗಾಗಿ, ಯೋಗಿ ಆದಿತ್ಯನಾಥ್‌ ಅವರನ್ನು ಬುಲ್ಡೋಜರ್‌ ಬಾಬಾ (Bulldozer Baba) ಎಂದೇ ಕರೆಯಲಾಗುತ್ತದೆ. ಯೋಗಿ ಆದಿತ್ಯನಾಥ್‌ ಸರ್ಕಾರದ ಈ ಬುಲ್ಡೋಜರ್‌ಗಳು ಈಗ ‘ನ್ಯೂಯಾರ್ಕ್‌ ಸಿಟಿ’ಯನ್ನೂ ತಲುಪಿವೆ. ನೀವು ಓದಿದ್ದು ನಿಜ, ಯೋಗಿ ಬುಲ್ಡೋಜರ್‌ಗಳು ಈಗ ನ್ಯೂಯಾರ್ಕ್‌ ಸಿಟಿಯನ್ನೂ ತಲುಪಿವೆ.

ಹೌದು, ಉತ್ತರ ಪ್ರದೇಶದ ಲಖನೌ ವ್ಯಾಪ್ತಿಯಲ್ಲಿ ‘ನ್ಯೂಯಾರ್ಕ್‌ ಸಿಟಿ’ ಎಂಬ ಕಾಲೋನಿ ಇದೆ. ಲಖನೌ ಹೊರವಲಯದಲ್ಲಿರುವ ಮೌದಾ ಗ್ರಾಮದಲ್ಲಿರುವ ಕಾಲೋನಿಯಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಲಖನೌ ಅಭಿವೃದ್ಧಿ ಪ್ರಾಧಿಕಾರವು (LDA) ಧ್ವಂಸಗೊಳಿಸಿದೆ. ಏಕಾಏಕಿ ಕಾಲೋನಿಗೆ ನುಗ್ಗಿದ ಬುಲ್ಡೋಜರ್‌ಗಳು, ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ಧರೆಗುರುಳಿಸಿವೆ. ಕೋರ್ಟ್‌ ಆದೇಶದ ಪ್ರತಿ ಹಿಡಿದೇ ಕಾಲೋನಿಗೆ ತೆರಳಿದ ಅಧಿಕಾರಿಗಳು, ಧ್ವಂಸಗೊಳಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

“ಗ್ರಾಮದ ಬಳಿ ಅಕ್ರಮವಾಗಿ ಲೇಔಟ್‌ ನಿರ್ಮಾಣ ಮಾಡಲಾಗುತ್ತಿದೆ. ಎಲ್‌ಡಿಎ ಅನುಮತಿ ಪಡೆಯದೆಯೇ ಲೇಔಟ್‌ ನಿರ್ಮಾಣ ಕಾರ್ಯವು ಸಾಗುತ್ತಿದೆ. ಇದಕ್ಕೂ ಮೊದಲು ಕೂಡ ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮನೆ ನಿರ್ಮಿಸಬೇಡಿ ಎಂದು ಎಚ್ಚರಿಸಲಾಗಿತ್ತು. ಆದರೂ, ಪರವಾನಗಿ ಇಲ್ಲದೆಯೇ ಲೇಔಟ್‌ ನಿರ್ಮಾಣ ಮಾಡಲಾಗುತ್ತಿದೆ. ಇನ್ನು, ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಎಲ್‌ಡಿಎ ಕೋರ್ಟ್‌ ಆದೇಶಿಸಿದೆ. ಅದರಂತೆ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ” ಎಂದು ಎಲ್‌ಡಿಎ ವಲಯ ಅಧಿಕಾರಿ ದೇವಾಂಶ್‌ ತ್ರಿವೇದಿ ತಿಳಿಸಿದ್ದಾರೆ.

ಇದನ್ನೂ ಓದಿ: Halal Products: ಸಿಎಂ ಯೋಗಿ ದಿಟ್ಟ ನಿರ್ಧಾರ ‌’ಹಲಾಲ್‌’ ಉತ್ಪನ್ನಗಳ ಮಾರಾಟ ನಿಷೇಧ!

ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ನೆಲಸಮದ ಜತೆಗೆ ವಿರಾಜ್‌ ಖಂಡ್‌ನಲ್ಲಿ ನಿರ್ಮಿಸಲಾಗಿದ್ದ ಬಯಲು ರೆಸ್ಟೋರೆಂಟ್‌ಅನ್ನು ಜಪ್ತಿ ಮಾಡಲಾಗಿದೆ. ಅನುಮತಿ ಇಲ್ಲದೆ ರೆಸ್ಟೋರೆಂಟ್‌ ತೆರೆದ ಕಾರಣ ಜಪ್ತಿ ಮಾಡಲಾಗಿದೆ. ಇನ್ನು ಅಲಾಮ್‌ಬಾಘ್‌, ಕಾಕೋರಿ ಹಾಗೂ ಕೃಷ್ಣನಗರದಲ್ಲಿದ್ದ ಅಕ್ರಮ ಕಟ್ಟಡಗಳನ್ನು ಕೂಡ ಜಪ್ತಿ ಮಾಡಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರವು ಗ್ಯಾಂಗ್‌ಸ್ಟರ್‌, ಬಿಎಸ್‌ಪಿ ಮುಖಂಡ ಅನುಪಮ್‌ ಪಾಂಡೆ ಅವರ ಹೋಟೆಲ್‌ಅನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಿತ್ತು. ಅಕ್ರಮವಾಗಿ ನಿರ್ಮಿಸಿದ ಕಾರಣ ಐಷಾರಾಮಿ ಹೋಟೆಲ್‌ಅನ್ನು ಬುಲ್ಡೋಜರ್‌ಗಳು ಧರೆಗುರುಳಿಸಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version