ಲಖನೌ: ನೂರು ದಿನ. ೫೨೫ ಎನ್ ಕೌಂಟರ್, ೧೦೩೪ ಮಂದಿ ಅರೆಸ್ಟ್.. ಇದು ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರಕಾರದ ನೂರು ದಿನದ ಸಾಧನೆ!
ಹೌದು, ಯೋಗಿ ಅವರು ತಮ್ಮ ಎರಡನೇ ಇನಿಂಗ್ಸ್‌ನಲ್ಲಿ ಜುಲೈ ೫ಕ್ಕೆ ಶತದಿನ ಪೂರೈಸಿದ್ದಾರೆ. ಅನ್ನ, ಆಹಾರ, ಆಡಳಿತ ಸುಧಾರಣೆಯ ಜತೆಗೇ ಕ್ರಿಮಿನಲ್‌ಗಳು, ಮಾಫಿಯಾಗಳನ್ನು ಮಟ್ಟ ಹಾಕುವ ಅವರ ಸಂಕಲ್ಪ ಎಲ್ಲ ಕಡೆ ಭಾರಿ ಪ್ರಶಂಸೆಯನ್ನು ಪಡೆದಿದೆ. ಯೋಗಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಸಮಾಜವಿರೋಧಿ ಶಕ್ತಿಗಳನ್ನು ಮಟ್ಟ ಹಾಕಲು ಸಕಲ ಕ್ರಮಗಳನ್ನು ಕೈಗೊಂಡಿತ್ತು. ಮೊದಲ ಐದು ವರ್ಷಗಳ ಅವಧಿಯಲ್ಲಿ ಅಪರಾಧಿಗಳ ಜೊತೆ ಕಠಿಣವಾಗಿ ವರ್ತಿಸಿದ್ದ ಸರಕಾರ, ಅಕ್ರಮ ಆಸ್ತಿ ಪೇರಿಸುವ ಮಾಫಿಯಾ ಮೇಲೂ ಪ್ರಹಾರ ನಡೆಸಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಇದು ಮುಂದುವರಿದೆ. ಮಾಫಿಯಾಗಳು, ಸಮಾಜ ವಿರೋಧಿಗಳು, ಸಮಾಜದಲ್ಲಿ ಶಾಂತಿ ಕದಡುವವರ ಮನೆ, ಕಟ್ಟಡಳನ್ನು ನಾಶ ಮಾಡುವ ಯೋಗಿ ಅವರ ಬುಲ್ಡೋಜರ್ ಕಾರ್ಯಾಚರಣೆ ಎಲ್ಲ ಕಡೆ ಫೇಮಸ್ ಆಗಿದೆ.
ಹಾಗಿದ್ದರೆ ಮಾರ್ಚ್ ೨೫ರಿಂದ ಜುಲೈ೧ರವರೆಗಿನ ಪೊಲೀಸ್ ಕಾರ್ಯಾಚರಣೆಗಳ ಅಂಕಿ ಅಂಶಗಳನ್ನು ನೋಡಿಕೊಂಡು ಬರೋಣ.
ಒಟ್ಟು ೫೨೫ ಎನ್‌ಕೌಂಟರ್‌ಗಳು ನಡೆದರೆ, ೧೦೩೪ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ೪೨೫ ಕಿಡಿಗೇಡಿಗಳು ಗಾಯಗೊಂಡರೆ, ಐವರು ಮೃತಪಟ್ಟಿದ್ದಾರೆ. ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಗಾಯಗೊಂಡ ಪೊಲೀಸರ ಸಂಖ್ಯೆ ೬೮.
ಎನ್ಕೌಂಟರ್‌ಗಳ ವಿಷಯಕ್ಕೆ ಬಂದರೆ, ಅತಿಹೆಚ್ಚು ನಡೆದಿದ್ದು ಮೀರತ್ ವಲಯದಲ್ಲಿ. ಇಲ್ಲಿ ೧೯೩ ಎನ್‌ಕೌಂಟರ್ ನಡೆದಿದೆ. ನಂತರದ ಸ್ಥಾನ ಬರೇಲಿ ವಲಯಕ್ಕೆ. ಇಲ್ಲಿ ೬೨ ಮಂದಿ ಮೃತಪಟ್ಟಿದ್ದಾರೆ. ೫೫ ಮಂದಿ ಆಗ್ರಾ ವಲಯದಲ್ಲಿ ಮೃತಪಟ್ಟರೆ, ಲಖನೌ ವಲಯದಲ್ಲಿ ೪೮ ಮಂದಿ ಸತ್ತಿದ್ದಾರೆ. ಹಾಗೆಯೇ, ನೋಯ್ಡಾದಲ್ಲಿ ೪೪, ಗೋರಖ್‌ಪುರದಲ್ಲಿ ೩೭ ಮತ್ತು ವಾರಾಣಸಿಯಲ್ಲಿ ೩೬ ಮಂದಿ ಈ ಕಾರ್ಯಾಚರಣೆಗಳಲ್ಲಿ ಮೃತಪಟ್ಟಿದ್ದಾರೆ.
ಮಾಫಿಯಾಗಳ ಮೇಲೆ ಮೊದಲ ಅವಧಿಯಲ್ಲೂ ಪ್ರಹಾರ ನಡೆಸಿದ್ದ ಈ ಸರಕಾರ, ಅದನ್ನು ಎರಡನೇ ಅವಧಿಗೂ ಕಾಯ್ದುಕೊಂಡಿದೆ. ಸುಮಾರು ೫೦ ಅಧಿಕ ಮಾಫಿಯಾಗಳನ್ನು ಗುರುತಿಸಲಾಗಿದ್ದು, ಸುಮಾರು ೩೦೦ ಕೋಟಿ ರೂ. ಮೌಲ್ಯದ ೬೦೦ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ದಾಖಲಾದ ಪ್ರಕರಣಗಳು: ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಅಂಕಿ-ಅಂಶಗಳ ಪ್ರಕಾರ, ೨೪೩೩ ಮಂದಿಯನ್ನು ಅಪರಾಧ ಹಿನ್ನೆಲೆಯವರೆಂದು ಗುರುತಿಸಲಾಗಿದೆ. ೧೭,೧೬೯ ಪ್ರಕರಣಗಳನ್ನು ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ದಾಖಲಿಸಲಾಗಿದೆ. ೧,೬೪೫ ಮಂದಿ ಬಂಧಿಸಲ್ಪಟ್ಟಿದ್ದರೆ, ೧೩೪ ಅಪರಾಧಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ೩೬ ಜನರ ಮೇಲೆ ಹೊರಿಸಲಾಗಿದೆ.
ಪ್ರತಿಭಟನೆ ಮತ್ತು ಹಿಂಸೆ: ಮೇಲ್ನೋಟಕ್ಕೆ ಬಹಳಷ್ಟು ಕ್ರಮಗಳನ್ನು ಕಾನೂನು ಪಾಲನೆಯ ನಿಟ್ಟಿನಲ್ಲಿ ಸರಕಾರ ತೆಗೆದುಕೊಂಡಿದೆ ಎನಿಸಿದರೂ, ಕಾನೂನು-ಸುವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಏಳುವಂಥ ಘಟನೆಗಳು ನಡೆದಿದ್ದು ಸುಳ್ಳಲ್ಲ. ಲಲಿತ್‌ಪುರದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಶುಕ್ರವಾರದ ಪ್ರಾರ್ಥನೆಯ ನಂತರ ಕಾನ್ಪುರ, ಪ್ರಯಾಗ್‌ರಾಜ್ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಗಲಭೆಯ ಪ್ರಕರಣಗಳು ಇದಕ್ಕೆ ಉದಾಹರಣೆ. ಇದಲ್ಲದೆ, ಕೇಂದ್ರ ಸರಕಾರದ ʻಅಗ್ನಿಪಥʼ ಯೋಜನೆ ಘೋಷಣೆಯಾದ ಬೆನ್ನಿಗೆ ಭುಗಿಲೆದ್ದ ಗಲಭೆಯಲ್ಲಂತೂ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.
ಪ್ರತಿಪಕ್ಷಗಳ ಟೀಕಾಸ್ತ್ರ: ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಬದೌರಿಯಾ ಪ್ರಕಾರ, ಈ ಸರಕಾರ ಕೇವಲ ಪ್ರಚಾರಪ್ರಿಯ. ಹೂಡಿಕೆದಾರರ ಶೃಂಗ ನಡೆಸಿದ್ದು ಹೌದಾದರೂ, ಎಲ್ಲಿ ಯಾರಿಂದ ಹೂಡಿಕೆಯಾಯಿತು ಎಂಬ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಇಲ್ಲಿ ನಡೆಯುತ್ತಿರುವುದು ದ್ವೇಷದ ರಾಜಕೀಯವೇ ಹೊರತು ಅಭಿವೃದ್ಧಿಪರ ರಾಜಕೀಯವಲ್ಲ.
ಇನ್ನು ಕಾಂಗ್ರೆಸ್ ವಕ್ತಾರ ಸುರೇಂದ್ರ ರಾಜ್‌ಪೂತ್ ಹೇಳಿಕೆಯಂತೆ, ಹಳೆಯ ಸರಕಾರವೇ ಹೊಸ ವೇಷದಲ್ಲಿ ಬಂದಿದೆ. ಸರಕಾರ ಮತ್ತು ಅದರ ಸಚಿವರು ಮಾತ್ರವೇ ಅಭಿವೃದ್ಧಿಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆಯೇ ಹೊರತು, ಜನತೆಗೆ ಅಂಥದ್ದೇನೂ ಕಾಣುತ್ತಿಲ್ಲ.
ಇದನ್ನೂ ಓದಿ| By election results: ಅಖಿಲೇಶ್ ಯಾದವ್ ಅತಿ ಆತ್ಮವಿಶ್ವಾಸವನ್ನು ಕುಟ್ಟಿ ಪುಡಿ ಮಾಡಿದ ಯೋಗಿ ಬುಲ್ಡೋಜರ್!