ನವದೆಹಲಿ: ಪೇಟಿಎಂನ (Paytm) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (PPBL) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧ ಹೇರಿದ್ದು, ಮಾರ್ಚ್ 15ರಿಂದ ಜಾರಿಗೆ ಬರಲಿದೆ. ಇದರಿಂದ ಗ್ರಾಹಕರ ಸಹಜವಾಗಿಯೇ ಚಿಂತಿತರಾಗಿದ್ದಾರೆ. ಆರ್‌ಬಿಐನ ನಿಷೇಧವು ಪಿಪಿಬಿಎಲ್‌ಗೆ ಸೀಮಿತವಾಗಿದ್ದರೂ ಯುಪಿಐ ಪಾವತಿ ಸೇವೆಯ ಮೇಲೂ ಪರಿಣಾಮ ಬೀರಿದೆ. ಆದರೆ, ಈ ಬಗ್ಗೆ ಬಳಕೆದಾರರು ತುಂಬ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ, ಪೇಟಿಎಂ ಯುಪಿಐ ಬಳಕೆಯ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂಚಿಗಳು (guidelines) ಪ್ರಕಟಿಸಲಾಗಿದೆ.
ಪಾವತಿ ಪರಿಸರ ವ್ಯವಸ್ಥೆಯಲ್ಲಿ ಯಾವುದೇ ಅಡೆತಡೆಗಳನ್ನು ನಿವಾರಿಸುವ ಸಲುವಾಗಿ ಯುಪಿಐ ಹ್ಯಾಂಡಲ್ ‘@paytm’ ಅನ್ನು ಬಳಸಿಕೊಂಡು 4-5 ಇತರ ಬ್ಯಾಂಕ್‌ಗಳಿಗೆ ಪೇಟಿಎಂ ಪಾವತಿಗಳ ಬ್ಯಾಂಕ್ ಗ್ರಾಹಕರನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಪರಿಶೀಲಿಸಲು ಆರ್‌ಬಿಐ, ಎನ್‌ಪಿಸಿಎಲ್ ಅನ್ನು ಕೇಳಿದೆ.
2024ರ ಮಾರ್ಚ್ ಶುಕ್ರವಾರ 15ರ ನಂತರ ಠೇವಣಿ ಮತ್ತು ಕ್ರೆಡಿಟ್‌ಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಲಾಗಿರುವ ಪೇಟಿಎಂ ಪಾವತಿಗಳ ಬ್ಯಾಂಕ್‌ನಿಂದ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುತ್ತಿರುವ ಗ್ರಾಹಕರು, ವ್ಯಾಲೆಟ್ ಹೊಂದಿರುವವರು ಮತ್ತು ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರ ಬ್ಯಾಂಕ್ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ.
ಎನ್‌ಸಿಪಿಐ ಅನುಮೋದಿಸಿದರೆ @paytm ಯುಪಿಐ ಹ್ಯಾಂಡಲ್‌ಗಳನ್ನು ಹೊಂದಿರುವ ಪೇಟಿಎಂ ಬಳಕೆದಾರರು ಹೊಸದಾಗಿ ಗುರುತಿಸಲಾದ ಬ್ಯಾಂಕ್‌ಗಳಿಗೆ ವಲಸೆ ಹೋಗಬಹುದು. ಇದರಿಂದ ಗ್ರಾಹಕರಿಗೆ ಎದುರಾಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್(ಪಿಪಿಬಿಎಲ್) ಜಾಲತಾಣದ ಪ್ರಕಾರ, ಅದು 30 ಕೋಟಿ ವಾಲೆಟ್ಸ್ ಮತ್ತು 3 ಕೋಟಿ ಬ್ಯಾಂಕ್ ಗ್ರಾಹಕರನ್ನು ಹೊಂದಿದೆ.
ಎನ್‌ಪಿಸಿಐ ಭಾರತದಲ್ಲಿನ ರಿಟೇಲ್ ಪೇಮೆಂಟ್ಸ್ ಮತ್ತು ಸೆಟಲ್‌ಮೆಂಟ್ ಸಿಸ್ಟಮ್ ಅನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯಾಗಿದ್ದು, ಆರ್‌ಬಿಐ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಶಿಯೇಷನ್ ಉಪಕ್ರಮವಾಗಿದೆ.
2014ರ ಮಾರ್ಚ್ 15, ನಂತರ ಪಿಪಿಬಿಎಲ್ ತನ್ನ ಗ್ರಾಹಕರ ಖಾತೆಗಳು ಮತ್ತು ವ್ಯಾಲೆಟ್‌ಗಳಿಗೆ ಹೆಚ್ಚಿನ ಕ್ರೆಡಿಟ್‌ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ, ಬ್ಯಾಂಕ್ ನಿರ್ವಹಿಸುವ ‘@ paytm’ ಹ್ಯಾಂಡಲ್ ಅನ್ನು ಬಳಸಿಕೊಂಡು ಯುಪಿಐ ಗ್ರಾಹಕರು ತಡೆರಹಿತ ಡಿಜಿಟಲ್ ಪಾವತಿಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅಪಾಯವನ್ನು ಕಡಿಮೆ ಮಾಡಲು ಕೆಲವು ಹೆಚ್ಚುವರಿ ಕ್ರಮಗಳು ಅಗತ್ಯವಾಗಿವೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Paytm FASTag: ನೀವು ಪೇಟಿಎಂ ಫಾಸ್ಟ್ಯಾಗ್ ಮೂಲಕ ಟೋಲ್ ಪಾವತಿ ಮಾಡ್ತಿದೀರಾ? ಹಾಗಿದ್ರೆ ಇಲ್ಲಿ ಗಮನಿಸಿ