ಜೈಪುರ: ಕೊರೊನಾ ಮೊದಲ ಹಾಗೂ ಎರಡನೇ ಅಲೆಯ ವೇಳೆ ಲಾಕ್‌ಡೌನ್ ಜಾರಿಯಾದ ಕಾರಣ ಜನ ಮನೆಯಲ್ಲೇ ಕಾಲ ಕಳೆಯುವಂತಾಯಿತು. ವರ್ಕ್ ಫ್ರಂ ಹೋಮ್‌ನಿಂದಾಗಿ ವರ್ಷಾನುಗಟ್ಟಲೆ ಜನ ಆಫೀಸನ್ನೇ ನೋಡಲಿಲ್ಲ. ಇನ್ನೂ ಒಂದಷ್ಟು ಜನ ಕೊರೊನಾ ಬಿಕ್ಕಟ್ಟಿನಲ್ಲಿ ಓದುವುದು, ಪೇಂಟಿಂಗ್, ಹಾಡು, ರೀಲ್ಸ್, ಯುಟ್ಯೂಬ್ ಸೇರಿ ಹಲವು ಹವ್ಯಾಸಗಳಿಗೆ ಇಂಬು ಕೊಟ್ಟರು. ನಿತ್ಯ ಕೆಲಸದ ಒತ್ತಡದ ಮಧ್ಯೆ ಹವ್ಯಾಸವನ್ನೇ ಮರೆತವರು ಮತ್ತೆ ಹವ್ಯಾಸಗಳ ಮೊರೆ ಹೋದರು. ಹೀಗೆ, ಕೊರೊನಾ ಬಿಕ್ಕಟ್ಟಿನ ವೇಳೆ ಚಾಕೊಲೇಟ್ ತಯಾರಿಸುವ ಹವ್ಯಾಸ ರೂಢಿಸಿಕೊಂಡ ರಾಜಸ್ಥಾನದ ಉದಯಪುರದ (Udaipur) 19 ವರ್ಷದ ಯುವಕನೀಗ ಕೋಟಿ ರೂ. ಮೌಲ್ಯದ ಬ್ಯುಸಿನೆಸ್ (Business) ಹೊಂದಿದ್ದಾನೆ. ಆ ಮೂಲಕ ನಮ್ಮ ಒಳ್ಳೆಯ ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬುದನ್ನು ತೋರಿಸಿದ್ದಾನೆ.
ಹೌದು, ಕೊರೊನಾ ಬಿಕ್ಕಟ್ಟಿನ ವೇಳೆ 16 ವರ್ಷದವನಾಗಿದ್ದ ದಿಗ್ವಿಜಯ್ ಸಿಂಗ್, ಮನೆಯಲ್ಲಿ ಖಾಲಿಯೇಕೆ ಕುಳಿತುಕೊಳ್ಳಬೇಕು ಎಂದು ಚಾಕೊಲೇಟ್ ತಯಾರಿಸಲು ಆರಂಭಿಸಿದ್ದು ಈಗ ಯಶಸ್ಸು ನೀಡಿದೆ. ಮನೆಯಲ್ಲಿ ದಿಗ್ವಿಜಯ್ ಸಿಂಗ್ ಯುಟ್ಯೂಬ್ ನೋಡಿಕೊಂಡು ಚಾಕೊಲೇಟ್ ತಯಾರಿಸುವುದನ್ನು ಕಲಿತ. ಆತ ಮಾಡಿದ ಚಾಕೊಲೇಟ್‌ಗಳು ಮನೆಯವರಿಗೆಲ್ಲ ಇಷ್ಟವಾದವು. ಇದಾದ ಬಳಿಕ ಆತ ಮಾರಾಟ ಮಾಡಲು ಕೂಡ ಶುರು ಮಾಡಿದ. ಈಗ ದಿಗ್ವಿಜಯ್ ಸಿಂಗ್ ಸರಾಮ್ ಎಂಬ ಚಾಕೊಲೇಟ್ ಬ್ರ್ಯಾಂಡ್ ಓನರ್ ಆಗಿದ್ದಾನೆ.
ಬೆಂಗಳೂರಿನಲ್ಲೂ ಇದೆ ಮಳಿಗೆ
2021ರಲ್ಲಿ ದಿಗ್ವಿಜಯ್ ಸಿಂಗ್ ಚಾಕೊಲೇಟ್‌ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು. ಕಾರ್ ಶೋರೂಮ್ ಒಂದು ಒಂದು ಸಾವಿರ ಚಾಕೊಲೇಟ್ ಬೇಕು ಎಂದು ಆರ್ಡರ್ ಮಾಡಿತು. ಇದರಿಂದ ಉತ್ತೇಜನಗೊಂಡ ದಿಗ್ವಿಜಯ್ ಸಿಂಗ್ ಹೆಚ್ಚು ಉತ್ಪಾದನೆ ಶುರು ಮಾಡಿದ. ಈಗ ದೆಹಲಿ, ಬೆಂಗಳೂರು, ಉದಯಪುರ ಹಾಗೂ ಜೈಪುರದಲ್ಲಿ ಮಳಿಗೆಗಳನ್ನು ಹೊಂದಿದ್ದಾನೆ. ಒಂದು ಕೋಟಿ ರೂ. ಮೌಲ್ಯದ ಬ್ಯುಸಿನೆಸ್ ಹೊಂದಿದ್ದಾನೆ. ಇದುವರೆಗೆ ಎರಡು ಟನ್ ಚಾಕೊಲೇಟ್‌ಗಳನ್ನು ಈತ ದೇಶಾದ್ಯಂತ ಮಾರಾಟ ಮಾಡಿದ್ದಾನೆ.
ಇದನ್ನೂ ಓದಿ: Neha Singh: ಐಐಟಿಯಲ್ಲಿ ಓದಿ, ಐದಂಕಿ ಸಂಬಳದ ಕೆಲಸ ಬಿಟ್ಟು ಉದ್ಯಮಿಯಾದ ಯುವತಿ; ಈಕೆಗೆ ರತನ್ ಟಾಟಾ ಫಿದಾ
ದಿಗ್ವಿಜಯ್ ಯಶಸ್ಸಿನ ಗುಟ್ಟೇನು?
ದೇಶೀಯ ಉತ್ಪನ್ನಗಳನ್ನು ಬಳಸಿಕೊಂಡು ಚಾಕೊಲೇಟ್‌ಗಳನ್ನು ತಯಾರಿಸುವುದೇ ದಿಗ್ವಿಜಯ್ ಸಿಂಗ್ ಯಶಸ್ಸಿನ ಗುಟ್ಟಾಗಿದೆ. ಜಾಮೂನು, ಕೇಸರಿ, ಹಣ್ಣುಗಳನ್ನು ಬಳಸಿ ವಿಶಿಷ್ಟವಾದ ಚಾಕೊಲೇಟ್‌ಗಳನ್ನು ತಯಾರಿಸುವುದರಿಂದ ಅವರು ಆರೋಗ್ಯಕ್ಕೆ ತುಂಬ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ಒಟ್ಟಿನಲ್ಲಿ, ಉತ್ತಮ ಹವ್ಯಾಸವು ಮನಸ್ಸಿಗೆ ಉಲ್ಲಾಸ ನೀಡುವ ಜತೆಗೆ ಜೀವನದಲ್ಲಿ ದೊಡ್ಡ ಯಶಸ್ಸು ಕೂಡ ಸಿಗುವಂತೆ ಮಾಡುತ್ತದೆ ಎಂಬುದಕ್ಕೆ ದಿಗ್ವಿಜಯ್ ಸಿಂಗ್ ನಿದರ್ಶನ ಎನಿಸಿದ್ದಾನೆ.