ದಾರ್ಜಿಲಿಂಗ್: ವಯಸ್ಸೆಂದರೆ ಒಂದು ಸಂಖ್ಯೆಯಷ್ಟೆ, ಅದಕ್ಕಿಂತ ವಿಶೇಷವಾದ ಅರ್ಥವಿಲ್ಲ ಎಂಬುದನ್ನು ಕೆಲವು ನಿದರ್ಶನಗಳು ಮತ್ತೆ ಮತ್ತೆ ನಿರೂಪಿಸುತ್ತವೆ. ಹಾಗಿಲ್ಲದಿದ್ದರೆ, ದಾರ್ಜಿಲಿಂಗ್‌ನ ಕಲಿಂಪಾಂಗ್ ಬೆಟ್ಟಗಳಲ್ಲಿ ಆಯೋಜಿಸಲಾಗಿದ್ದ ಮ್ಯಾರಥಾನ್‌ನಲ್ಲಿ ೮೭ ವರ್ಷದವರೊಬ್ಬರು ಭಾಗವಹಿಸುವುದೆಂದರೆ ಹುಡುಗಾಟವೇ?
ಯಾರಿಗಾದರೂ ಸವಾಲೆನಿಸುವ ಈ ಮ್ಯಾರಥಾನ್‌ನಲ್ಲಿ ೮೭ ವರ್ಷದ ಪರಮ್‌ನಂದಾ ಸಿಂಗ್ ಅವರು ೮ ಕಿ.ಮೀ. ದೂರ ನಡೆದಿದ್ದು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಹುಬ್ಬೇರುವಂತೆ ಮಾಡಿತು. ಉತ್ತರ ಬಂಗಾಳದ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ಡಿ.ಪಿ ಸಿಂಗ್ ಅವರ ತಂದೆ ಪರಮ್‌ನಂದಾ ಅವರು ಬಿಳಿ ಉಡುಗೆಯಲ್ಲಿ ಶಿಸ್ತಿನ ಸಿಪಾಯಿಯಂತೆ ಸರಿಯಾದ ಸಮಯಕ್ಕೆ ಹಾಜರಾದರು. ʻನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರು ಸ್ಫೂರ್ತಿಯಾಗಿದ್ದರುʼ ಎಂದು ಡಿಪಿ ಸಿಂಗ್ ತಮ್ಮ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ʻಈ ಪ್ರಾಯದಲ್ಲಿ, ಅದೂ ಬೆಟ್ಟಗಳ ಹಾದಿಯಲ್ಲಿ ಮ್ಯಾರಾಥಾನ್‌ನಲ್ಲಿ ಭಾಗವಹಿಸುವುದೇ ಅದ್ಭುತʼ ಎಂದು ಕಲಿಂಪಾಂಗ್‌ನ ಎಸ್‌ಪಿ ಅಪರಾಜಿತಾ ರೈ ಹೇಳಿದ್ದಾರೆ. ಸ್ಥಳದಲ್ಲಿದ್ದ ಸ್ಪರ್ಧಿಗಳು, ಆಯೋಜಕರಿಗೆಲ್ಲಾ ಪರಮ್‌ನಂದಾ ಅವರ ಸಾಮರ್ಥ್ಯ ಮತ್ತು ಬದ್ಧತೆ ಅಚ್ಚರಿ ತಂದಿತ್ತು. ಮಾತ್ರವಲ್ಲ, ಅವರನ್ನೇ ಅನುಸರಿಸಿದ ಕುತೂಹಲಿಗಳೂ ಇದ್ದರು. ಸರಿ, ಆದರೆ ಈ ವಯಸ್ಸಿನಲ್ಲಿ ಅವರು ಕಡಿದಾದ ಹಾದಿಯಲ್ಲಿ ಮ್ಯಾರಾಥಾನ್‌ಗೆ ಬಂದಿದ್ದೇಕೆ? ದಾರ್ಜಿಲಿಂಗ್‌ನ ನಾಳೆಗಳು ಉತ್ತಮವಾಗಿರಲಿ ಎಂಬ ಘನಹಾರೈಕೆಯನ್ನು ಹೊತ್ತು, ಸಾಮಾಜಿಕ ಜಾಗೃತಿ ಮೂಡಿಸುವ ಸಲುವಾಗಿ ಪರಮ್‌ನಂದಾ ಭಾಗವಹಿಸಿದ್ದರು.
ವಿಷಯವೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ದಾರ್ಜಿಲಿಂಗ್ ಮತ್ತು ಕಲಿಂಪಾಂಗ್ ಪ್ರದೇಶ ನಾನಾ ಕಾರಣಗಳಿಗಾಗಿ ಪ್ರಕ್ಷುಬ್ಧ ಮತ್ತು ಅಸ್ಥಿರ ದಿನಗಳಲ್ಲಿ ನರಳುತ್ತಿದೆ. ಆದರೆ ಇಲ್ಲಿನ ಜನಗಳಿಗೆ ತಮ್ಮ ಪ್ರದೇಶದಲ್ಲಿ ಶಾಂತಿ ನೆಲೆಸುವುದರಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂಬುದು ಅರಿವಾಗಿದೆ. ಈ ಬಗ್ಗೆ ಜನರ ಗಮನ ಸೆಳೆಯುವ ಉದ್ದೇಶದಿಂದ ಕಲಿಂಪಾಂಗ್ ಜಿಲ್ಲಾ ಪೊಲೀಸ್, ʻಸ್ವಾತಂತ್ರ್ಯದ ಓಟʼ ಎನ್ನುವ ೧೦ ಕಿ.ಮೀ. ಮ್ಯಾರಥಾನನ್ನು ಇದೇ ಮೊದಲ ಬಾರಿಗೆ ಆಯೋಜಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಈ ಓಟದಲ್ಲಿ ಭಾಗವಹಿಸಿದ್ದರು. ಕ್ರೀಡೆ ಮತ್ತು ಪ್ರವಾಸೋದ್ಯಮ ಹೆಚ್ಚಿದಂತೆ ಈ ಪ್ರಾಂತ್ಯಕ್ಕೆ ಹೆಚ್ಚಿನ ಅಭಿವೃದ್ಧಿ ಒದಗಬಹುದು ಎಂಬುದು ಇದರ ಹಿಂದಿನ ನಿರೀಕ್ಷೆ.
ʻಗಿರಿ ಪ್ರದೇಶವನ್ನು ಪ್ಲಾಸ್ಟಿಕ್ ಮತ್ತು ಡ್ರಗ್ಸ್ ಮುಕ್ತ ಮಾಡಬೇಕು ಮತ್ತು ಜನ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಈ ಓಟ ಆಯೋಜಿಸಲಾಗಿತ್ತುʼ ಎಂದು ಐಜಿ ಸಿಂಗ್ ಹೇಳಿದ್ದಾರೆ. ಸ್ಥಳೀಯರಿಗಾಗಿಯೇ ಆಯೋಜಿಸಲಾಗಿದ್ದ ಈ ಓಟ ಸಂಪೂರ್ಣ ಪರಿಸರ ಸ್ನೇಹಿಯಾಗಿತ್ತು. ಇಡೀ ಕಾರ್ಯಕ್ರಮದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಬಳಕೆಯಾಗಲಿಲ್ಲ. ಫ್ಲೆಕ್ಸ್ ಮತ್ತಿತರ ಪ್ರಚಾರ ಸಾಮಗ್ರಿಗಳನ್ನೂ ಕೊಳೆತು ಮಣ್ಣಾಗುವಂಥ ವಸ್ತುಗಳಿಂದಲೇ ತಯಾರಿಸಲಾಗಿತ್ತು. ಪಾಲ್ಗೊಂಡವರಿಗೆ ನೀಡಿದ್ದ ಪಾನಕ, ಉಪಾಹಾರ, ಲಾಡು ಮತ್ತು ಮೊಟ್ಟೆಗಳನ್ನೂ ಸಹ ಸ್ಥಳೀಯ ಸ್ವಸಹಾಯ ಸಂಘಗಳೇ ಒದಗಿಸಿದ್ದವು.
ಇದನ್ನೂ ಓದಿ | ಮ್ಯಾರಥಾನ್‌ಗಾಗಿ ನೇಪಾಳಕ್ಕೆ ಹಾರಿದ ಹಾವೇರಿ ಪೋರ: ಮುಮ್ಮದ್ ಜೈದ್ ಸಾಧನೆ