ಬೆಂಗಳೂರು: ಜೀವನ ಎಲ್ಲರಿಗೂ ಒಂದೇ ರೀತಿಯಲ್ಲಿ ಇರುವುದಿಲ್ಲ, ಭೂಮಿಯ ಮೇಲಿನ ಪ್ರತಿಯೊಬ್ಬರು ವಿವಿಧ ರೀತಿಯಲ್ಲಿ ಸಂತೋಷ ಕಂಡುಕೊಳ್ಳುತ್ತಾರೆ. ದುಬಾರಿ ಕಾರು, ಬೈಕು, ಬಂಗಲೆ, ಆಳು-ಕಾಳು, ಕರಗದಷ್ಟು ಆಸ್ತಿ ಇದ್ದರೂ ಹಣವಂತರಿಗೆ ಅದರಲ್ಲಿ ನೆಮ್ಮದಿ ಇರುವುದಿಲ್ಲ, ಏನೋ ಕಡಿಮೆ ಇದೆ ಯಾಕೋ ಜೀವನವೇ ಬೋರಿಂಗ್ ಅನ್ನುತ್ತಾರೆ. ಇನ್ನೂ ಕೆಲವರಿಗೆ ಎಷ್ಟೇ ಹಣ ಗಳಿಸಿದರೂ ಇನ್ನೂ ಗಳಿಸಬೇಕು ಅನ್ನೋ ಅತಿ ಆಸೆ. ನಮ್ಮ ನಡುವಿನಲ್ಲೇ ಇರುವ ಹಲವರಿಗೆ ಹೊಟ್ಟೆ ತುಂಬ ಊಟ ಇದ್ದರೆ ಸಾಕು ಭೂಮಿಯೆ ಹಾಸಿಗೆ… ಗಗನವೆ ಹೊದಿಕೆ.. ಕಣ್ತುಂಬ ನಿದ್ದೆ ಬರುತ್ತದೆ. ಸಣ್ಣ ಸಣ್ಣ ವಿಷಯಗಳಲ್ಲಿ ಅಪಾರ ಖುಷಿ ಕಾಣುವ ನೆಮ್ಮದಿಯ ಬದುಕು ಅವರದಾಗಿರುತ್ತದೆ.
ಇಲ್ಲೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ತಂದೆ ಸೆಕೆಂಡ್ ಹ್ಯಾಂಡ್ ಬೈಸಿಕಲ್ ಮನೆಗೆ ತಂದಿದ್ದನ್ನು ಕಂಡು ಬಾಲಕನೊಬ್ಬ ಕುಣಿದು ಕುಪ್ಪಳಿಸಿ ಸಂತೋಷ ಪಟ್ಟಿದ್ದಾನೆ, ಅವನ ಸಂತೋಷಕ್ಕೆ ಪಾರವೇ ಇಲ್ಲವೆನ್ನುವಂತೆ ಸಂಭ್ರಮಿಸಿದ್ದಾನೆ.
ಬೈಸಿಕಲ್ ಅನ್ನು ಸಡಗರದಿಂದ ಮನೆಗೆ ಸ್ವಾಗತಿಸಿದ್ದಾನೆ. ಅದನ್ನು ಮುಟ್ಟಿ ನೋಡಿ ಖುಷಿ ಪಟ್ಟಿದ್ದಾನೆ, “ನನ್ನ ಅಪ್ಪನ ಅಂಬಾರಿಯಲ್ಲಿ ಕುಳಿತು ಶಾಲೆಗೆ ಹೋಗಬಹುದು, ಸಂತೆಗೆ ಇನ್ಮುಂದೆ ನಾನು ಸಹ ಹೋಗಬಹುದು, ಅಂತೂ ನಮ್ಮ ಮನೆಗೂ ಬಂತು ಸೈಕಲ್” ಎಂದು ಮನದಲ್ಲಿ ಸಂಭ್ರಮಿಸಿದ್ದಾನೆ ಮುಗ್ಧ ಹುಡುಗ.
ಈ ವಿಡಿಯೊವನ್ನು ಐಎಎಸ್ ಅದಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಇದು ಸೆಕೆಂಡ್ ಹ್ಯಾಂಡ್ ಬೈಸಿಕಲ್. ಆದರೆ ಬಾಲಕನ ಮುಖದಲ್ಲಿನ ಸಂತೋಷವನ್ನು ನೋಡಿದರೆ ಅಪ್ಪ ಹೊಸ ಮರ್ಸಿಡಿಸ್ ಬೆಂಜ್ ಅನ್ನು ಖರೀದಿಸಿದ್ದಾರೆ ಎನ್ನುವಂತಿದೆ, ”ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೊ ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿಲ್ಲ. ಆದರೆ ಈ ವಿಡಿಯೊ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು 33 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ವಿಡಿಯೊ ನೋಡಿದ ಬಹುತೇಕರು ಖುಷಿ ಪಟ್ಟಿದ್ದಾರೆ ಹಾಗೂ ಕೆಲವರು ಭಾವುಕರಾಗಿದ್ದಾರೆ. ತಮ್ಮ ಮೊದಲ ಸೈಕಲ್, ಮೊದಲ ಕಾರಿನ ಅನುಭವ ಹಂಚಿಕೊಂಡಿದ್ದಾರೆ. ಒಂದು ಸೈಕಲ್‌ಗಾಗಿ ಹೇಗೆಲ್ಲ ಕಾದಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ. ಬೇರೆಯವರ ಜೀವನ ನೋಡಿ ನನಗೆ ಅದು ಇಲ್ಲ ,ಇದು ಇಲ್ಲ ಅಂತ ಕೊರಗುವವರು ಒಮ್ಮೆ ಈ ಬಾಲಕನನ್ನು ನೋಡಬೇಕು. ಇರುವುದರಲ್ಲೇ ನಮ್ಮೆದಿ ಕಂಡುಕೊಂಡರೆ ಸ್ವರ್ಗವನ್ನು ಕಾಣಲು ಬೇರೆಲ್ಲೂ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದೆಲ್ಲ ಬರೆದಿದ್ದಾರೆ.
ಇದನ್ನೂ ಓದಿ: ಪುಟ್ಟ ಮಗನಿಗೆ ಈಜು ಕಲಿಸಲು ಯತ್ನಿಸಿದ ತಾಯಿಗೆ ಏನಾಯ್ತು?-ಫನ್ನಿ ವಿಡಿಯೋ ವೈರಲ್