Site icon Vistara News

Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Namma Metro

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ತಿಳಿಸಿದೆ.

ನಾಗಸಂದ್ರದಿಂದ ಮಾದಾವರ (BIEC)ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದ್ದು, ಇದರ ವಿವರ ಈ ಕೆಳಕಂಡಂತಿವೆ.

  1. ಆ. 13ರಂದು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.
  2. ಆ. 14ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.
  3. ಆ. 15ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ

ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.
ಆದಾಗ್ಯೂ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆ.13 ಮತ್ತು 14ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆ.14 ಮತ್ತು 15ರಂದು ಬೆಳಗ್ಗೆ 5ಕ್ಕೆ ಪ್ರಾರಂಭವಾಗುತ್ತದೆ. ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇದನ್ನೂ ಓದಿ | Namma Metro Ticket Price Hike: ಮೆಟ್ರೋ ಟಿಕೆಟ್‌ ದರದ ಮೇಲೆ ಕೈ ಇಟ್ರೋ! ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ?

ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ನಮ್ಮ ಮೆಟ್ರೋ ಸಾಥ್

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ನಮ್ಮ ಮೆಟ್ರೋ ಸಾಥ್ ನೀಡಿದೆ. ಆಗಸ್ಟ್ 15,17 ಹಾಗೂ 18ರಂದು ಟೋಕನ್ ಬದಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್ ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. 30 ರೂ. ರಿಟರ್ನ್ ಟಿಕೆಟ್ ಮೂಲಕ ಯಾವುದೇ ನಿಲ್ದಾಣಕ್ಕೂ ಪ್ರಯಾಣದ ಅನುಕೂಲವಾಗಲಿದೆ. ಪ್ರಯಾಣಿಕರು ಟೋಕನ್ ಬದಲಿಗೆ ಪರ್ಯಾಯ ವ್ಯವಸ್ಥೆ ಬಳಸಲು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಲಾಲ್‌ಬಾಗ್ ನಲ್ಲಿ ಆಯೋಜಿಸಲಾಗಿರುವ ತೋಟಗಾರಿಕಾ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ, ನಮ್ಮ ಮೆಟ್ರೋದಿಂದ ಆ. 15, 17 ಮತ್ತು 18ರಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ತ್ವರಿತ ಪ್ರಯಾಣಕ್ಕಾಗಿ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಟೋಕನ್‌ಗಳ ಬದಲಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 30 ರೂ.ಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ | HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ. ಸಾರ್ವಜನಿಕರು ಟೋಕನ್, ಕಾರ್ಡ್, ಕ್ಯೂಆರ್ ಟಿಕೆಟ್‌ಗಳ ಮೂಲಕ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್‌ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು. ಮೇಲಿನ ದಿನಾಂಕಗಳಲ್ಲಿ ಮತ್ತು ಅವಧಿಯಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ಟಿಕೆಟ್‌ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬೇಕು ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

    Exit mobile version