Site icon Vistara News

ಮಿಸ್ ಮಾಡಬೇಡಿ, ವೇಶ್ಯೆಯರ ಬದುಕಿನ ಕಥಾನಕದ ಟಾಪ್ 5 ಸಿನಿಮಾ

ವೇಶ್ಯೆಯರ ಬದುಕಿನ ಕಥಾನಕದ ಟಾಪ್ 5 ಸಿನಿಮಾ

ಗಂಗೂಬಾಯಿ ಕಾಠಿಯಾವಾಡಿ

ಈ ಚಿತ್ರದಲ್ಲಿ ಅಲಿಯಾ ಭಟ್ ಅವಮಾನವನ್ನು ಸ್ವಾಭಿಮಾನವನ್ನಾಗಿ ಪರಿವರ್ತಿಸಿದ ಮತ್ತು ಮುಂಬೈನ ಕೆಂಪು ದೀಪದ ಪ್ರದೇಶವಾದ ಕಾಮಾಟಿಪುರದ ಸುಧಾರಣೆಗಾಗಿ ರಾಜಕೀಯ ಆಕಾಂಕ್ಷೆಗಳನ್ನು ಹೊಂದಿರುವ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ್ದಾರೆ. ಹುಸೇನ್ ಜೈದಿ ಅವರ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಈ ಐತಿಹಾಸಿಕ ಚಿತ್ರಕ್ಕೆ ಸ್ಫೂರ್ತಿಯಾಗಿದೆ. ಸ್ತ್ರೀವಾದಿ ದೃಷ್ಟಿಕೋನದಿಂದ ಲೈಂಗಿಕ ಕಾರ್ಯಕರ್ತರ ರಹಸ್ಯ ಪ್ರಪಂಚದ ಮುಂದೆ ತೆರೆದಿಡುವ ಹಾಗೂ ಲೈಂಗಿಕ ವ್ಯಾಪಾರವನ್ನು ಕಾನೂನುಬದ್ಧಗೊಳಿಸಬೇಕೇ ಅಥವಾ ಬೇಡವೇ ಎಂಬ ವಿವಾದಗಳಿಗೆ ಇನ್ನಷ್ಟು ಪುಷ್ಟಿ ನೀಡಿದ ಚಿತ್ರ ಇದಾಗಿದೆ.

ಚಮೇಲಿ

ಕರೀನಾ ಕಪೂರ್ ನಟಿಸಿದ ಈ ಚಿತ್ರವು ಚಮೇಲಿ ಎಂಬ ಲೈಂಗಿಕ ಕಾರ್ಯಕರ್ತೆಯ ಕಥಾನಕವನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ಅವಳು ಚಿಕ್ಕ ಬಾಲಕಿಯಾಗಿದ್ದಾಗ ಅವಳ ಚಿಕ್ಕಪ್ಪ ಅವಳನ್ನು ವೇಶ್ಯಾಗೃಹಕ್ಕೆ ಮಾರಿಬಿಟ್ಟ. ಅವಳು ಕಥಾ ನಾಯಕನ ಒಂಟಿತನ ಮತ್ತು ದುಃಖದ ಜೀವನವನ್ನು ಸುಧಾರಿಸಲು ಪೂರಕ ಸನ್ನಿವೇಶಗಳನ್ನು ನಿರ್ವಹಿಸುತ್ತಾಳೆ. ಈ ಚಿತ್ರವು ಮುಂಬೈನಲ್ಲಿ ಒಂದು ಮಳೆಯ ದಿನ ಒಬ್ಬರಿಗೊಬ್ಬರು ಪರಿಚಯವಾದ ಬ್ಯಾಂಕರ್ ಮತ್ತು ಲೈಂಗಿಕ ಕಾರ್ಯಕರ್ತೆಯ ವಿಷಾದದ ಕತೆಯ ನಿರೂಪಣೆಯಾಗಿದೆ. ಒಂದು ಕ್ಷಣದಲ್ಲಿ ಚಮೇಲಿ ಒರಟು ಸ್ವಭಾವದ ವೇಶ್ಯೆಯಾಗಿ, ಇನ್ನೊಂದು ಕ್ಷಣದಲ್ಲಿ, ನಿಜವಾದ ಪ್ರೀತಿಯನ್ನು ಹುಡುಕಲು ಇನ್ನೂ ಹಾತೊರೆಯುವ ಕೋಮಲ ಸ್ವಭಾವದ ಮಹಿಳೆಯಾಗಿ ಬಿಂಬಿತಳಾಗಿದ್ದಾಳೆ.

ದೇವ್ ಡಿ

ಈ ರೋಮ್ಯಾಂಟಿಕ್ ಡಾರ್ಕ್ ಕಾಮಿಡಿ ಚಲನಚಿತ್ರವು ಕಲ್ಕಿ ಕೊಚ್ಲಿನ್ ಅಮೋಘ ನಟನೆಯ ಕಾರಣದಿಂದಾಗಿ ವಿಮರ್ಶಕರ ಮೆಚ್ಚುಗೆ ಪಡೆದಿದೆ. ಅವರು ಎಂಎಂಎಸ್ ವಿವಾದದಲ್ಲಿ ಸಿಲುಕಿಕೊಂಡಿದ್ದ ಚಂದಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಹಸ್ಯವಾದ ಲೈಂಗಿಕ ಕಾರ್ಯಕರ್ತೆಯ ಜೀವನವನ್ನು ಕೊನೆಗೊಳಿಸಿ, ಸಾಮಾನ್ಯ ಜೀವನಕ್ಕೆ ಮರಳುವ ಕಥಾನಕವಿದೆ. ಕುಡುಕ ದೇವ್, ಚಂದಾ ಅವರನ್ನು ಪ್ರವಾಸಿಗರು ಮತ್ತು ವಿಟ ಪುರುಷರಿಂದ ತುಂಬಿರುವ ನಗರದ ಅನೇಕ ಹೋಟೆಲ್‌ಗಳಲ್ಲಿ ಭೇಟಿಯಾಗುತ್ತಿದ್ದಂತೆ, ಚಲನಚಿತ್ರವು ಪ್ರೇಕ್ಷಕರ ಕುತೂಹಲ ಕೆರಳಿಸುತ್ತದೆ.

ಬೇಗಂ ಜಾನ್

ವಿದ್ಯಾ ಬಾಲನ್ ವೇಶ್ಯೆ ಬೇಗಂ ಜಾನ್‌ಳ ಪಾತ್ರದಲ್ಲಿ ನಟಿಸಿದ ಚಿತ್ರವಿದು. ಇದರಲ್ಲಿ ಆಕೆ ವೇಶ್ಯಾಗೃಹವನ್ನು ನಡೆಸುತ್ತಾಳೆ. ಬೇಗಂ ಜಾನ್‌ಳ ವೇಶ್ಯಾಗೃಹದಲ್ಲಿ ತಮ್ಮ ಕುಟುಂಬದಿಂದ ಪರಿತ್ಯಕ್ತರಾದ ಅನೇಕ ಲೈಂಗಿಕ ಕಾರ್ಯಕರ್ತರು ಆಶ್ರಯ ಪಡೆದಿದ್ದರು. ಅಂಥವರನ್ನು ಬೇಗಂ ಸ್ವತಃ ಪೋಷಿಸುತ್ತಿದ್ದಳು. ಬೇಗಂ ಜಾನ್‌ಳ ಪಾತ್ರದಲ್ಲಿ ವಿದ್ಯಾ ಬಾಲನ್‌ ಸಿಟ್ಟಿನ ಸಿಡುಕಿಯಾಗಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನ-ಭಾರತ ವಿಭಜನೆಯ ಸಮಯದಲ್ಲಿ ಬೇಗಮ್ ಜಾನ್ ಮತ್ತು ಅವಳಲ್ಲಿ ಆಶ್ರಯ ಪಡೆದ ವೇಶ್ಯೆಯರು ಆ ಜಾಗವನ್ನು ಬಿಟ್ಟು ತೆರಳಲು ನಿರಾಕರಿಸುತ್ತಾರೆ. ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿಗಳಲ್ಲಿ ಆಕೆಗೆ ತನ್ನ ವ್ಯವಹಾರವನ್ನು ನಿರ್ವಹಿಸಲು ಕಷ್ಟವಾಗುತ್ತದೆ. ಇದು ಭಾರತ ಮತ್ತು ಪಾಕಿಸ್ತಾನದ ಇತಿಹಾಸವನ್ನು ವೇಶ್ಯೆಯರ ದೃಷ್ಟಿಯಲ್ಲಿ ಹೇಳುವ ಒಂದು ರೀತಿಯ ನಿರೂಪಣೆಯಾಗಿದೆ.

ಚಾಂದಿನಿ ಬಾರ್

ಈ ಚಲನಚಿತ್ರವು ಕಠೋರ ಮತ್ತು ದುರ್ಭರವಾದ ಜಗತ್ತಿನಲ್ಲಿ ಜೀವನ ನಿರ್ವಹಣೆಗಾಗಿ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡಲು ಮುಂಬೈಗೆ ಬರುವ ಯುವತಿಯ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಆ ಯುವತಿಯ ಪಾತ್ರವನ್ನು ಟಬು ನಿರ್ವಹಿಸಿದ್ದಾರೆ. ಚಾಂದಿನಿ ಬಾರ್ ಚಲನಚಿತ್ರವು ಹಿಂದುಳಿದ ಮಹಿಳೆ ಬಾರ್‌ನಲ್ಲಿ ನೃತ್ಯಗಾರ್ತಿಯಾಗಿ ದುಡಿಯುವ ಮತ್ತು ಒಬ್ಬ ಅಪರಾಧಿಯ ಮಗನ ತಾಯಿಯಾಗಿ ಸಮಾಜವನ್ನು ಎದುರಿಸುವ ಕಥಾನಕ ಹೊಂದಿದೆ. ಚಾಂದಿನಿ ಬಾರ್ ಚಿತ್ರದಲ್ಲಿನ ಅಭಿನಯಕ್ಕಾಗಿ ಟಬು ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

ಇದನ್ನೂ ಓದಿ | Gallery | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ

Exit mobile version