ಬೆಂಗಳೂರು: ಶಾಲಾ ಪಠ್ಯಪುಸ್ತಕ ಸಮಿತಿ ಹಾಗೂ ಪಿಯು ಪಠ್ಯಪುಸ್ತಕ ಸಮಿತಿ ವಿಸರ್ಜನೆ ನಂತರ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಒಬ್ಬ ಸಂಶೋಧಕನಾಗಿ ಸತ್ಯದ ದಾರಿಯನ್ನು ಆಯ್ದುಕೊಂಡರೆ ಸರ್ಕಾರ ಮತಗಳ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರೋಹಿತ್ ಚಕ್ರತೀರ್ಥ ಫೇಸ್‌ಬುಕ್‌ನಲ್ಲಿ ವಿದಾಯದ ಮಾತನ್ನು ಬರೆದುಕೊಂಡಿದ್ದಾರೆ. ” ಓರ್ವ ಸಂಶೋಧಕನ ದಾರಿ, ಒಂದು ರಾಜಕೀಯ ಪಕ್ಷ ಅಥವಾ ಸರಕಾರದ ದಾರಿಯೂ ಆಗಿರಬೇಕಿಲ್ಲ. ಸಂಶೋಧಕನಿಗೆ ಸತ್ಯವೇ ಮುಖ್ಯವಾಗುತ್ತದೆ. ಅದಕ್ಕಾಗಿ ಆತ ಜಗತ್ತನ್ನೇ ಎದುರುಹಾಕಿಕೊಳ್ಳುವುದಕ್ಕೂ ಸಿದ್ಧನಿರುತ್ತಾನೆ. ಆದರೆ ರಾಜಕೀಯ ಪಕ್ಷ ಅಥವಾ ಸರ್ಕಾರಗಳಿಗೆ ಅಂತಿಮವಾಗಿ ಮುಖ್ಯವಾಗುವುದು ಮತಗಳು. ಸತ್ಯ ಮತ್ತು ಮತ ಎಂಬೆರಡು ದಾರಿಗಳ ನಡುವೆ ಸಂಶೋಧಕ ಮೊದಲನೆಯದನ್ನು ಆಯ್ದುಕೊಂಡರೆ ರಾಜಕೀಯ ಶಕ್ತಿ ಎರಡನೆಯದನ್ನು ಆರಿಸಿಕೊಳ್ಳುತ್ತದೆʼ ಎಂದಿದ್ದಾರೆ. ಅಂದರೆ, ಸರ್ಕಾರವು ಮತಗಳಿಗಾಗಿ ಸತ್ಯವನ್ನು ಕೈಬಿಟ್ಟಿದೆ ಎಂದು ಅರ್ಥೈಸಿದ್ದಾರೆ.
ಇದನ್ನೂ ಓದಿ | ಬ್ರಾಹ್ಮಣರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಕಾಂಗ್ರೆಸ್ ವಿರುದ್ಧ ರೋಹಿತ್ ಚಕ್ರತೀರ್ಥ ಆರೋಪ
ಪಿಯು ಪಠ್ಯಪುಸ್ತಕಕ್ಕೆ ರಚಿಸಿದ್ದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ ನಂತರ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡ ಕುರಿತು ಚಕ್ರತೀರ್ಥ ಅಸಮಾಧಾನ ಹೊರಹಾಕಿದ್ದಾರೆ. “(ಪಠ್ಯಪುಸ್ತಕ ಸಮಿತಿಗೆ) ಆರಿಸಿದ್ದೇವೆ ಎಂದಾಗ ನಾನು ಉಬ್ಬಿಲ್ಲ; (ಪಠ್ಯಪುಸ್ತಕ ಸಮಿತಿಯಿಂದ) ತೆಗೆದುಹಾಕಿದ್ದೇವೆ ಎಂದಾಗ ಕುಗ್ಗಿಯೂ ಇಲ್ಲ. ʼಚಕ್ರತೀರ್ಥನಿಗೆ ಗೇಟ್ ಪಾಸ್ʼ ಎಂಬ ಮಾತನ್ನು ಮಾಧ್ಯಮದಲ್ಲಿ ಓದಿದಾಗ ನಗು ಬರುತ್ತದೆ. ಗೇಟ್ ಪಾಸ್ ಕೊಡಲು ನಾನು ಯಾವ ಕಂಪೌಂಡಿನೊಳಗೂ ನಿಂತಿಲ್ಲ” ಎಂದಿದ್ದಾರೆ.
ಇತಿಹಾಸವನ್ನು ಯಾರಿಗೆ ಬೇಕೊ ಹಾಗೆ ಬರೆಯಬಾರದು ಎಂದಿರುವ ಚಕ್ರತೀರ್ಥ, ಒಟ್ಟಾರೆ ಈ ವಿವಾದಗಳಿಂದ ಹೊರನಡೆಯುವ ಮಾತನ್ನಾಡಿದ್ದಾರೆ. “ತನಗೆ ಬೇಕಾದಂತೆ ಇತಿಹಾಸ ಬರೆಯುವುದು ಎಷ್ಟು ಅರ್ಥಹೀನವೋ ಅಷ್ಟೇ ಅರ್ಥಹೀನವಾದದ್ದು ಬೇರೆಯವರಿಗೆ ಬೇಕಾದಂತೆ ಇತಿಹಾಸ ಬರೆಯುತ್ತೇನೆ ಎಂಬುದು ಕೂಡ. ಇತಿಹಾಸಕ್ಕೆ ನಿಷ್ಠವಾಗಿ ಇತಿಹಾಸವನ್ನು ಬರೆಯಬೇಕೆಂಬ ನನ್ನದು ಎರಡು ಕಡೆಗೂ ಒಪ್ಪಿಗೆಯಾಗದ ಪಂಥವಿರಬಹುದು. ʼವಿಸರ್ಜನೆʼ ಆದ ಮೇಲೂ ಉಳಿಯುವುದು ನನ್ನ ಜಾಯಮಾನಕ್ಕೆ ಒಗ್ಗುವಂಥಾದ್ದಲ್ಲ. ನನ್ನ ಕೆಲಸಗಳಿಗೆ ಮರಳಿದ್ದೇನೆ” ಎಂದಿದ್ದಾರೆ.
ರೋಹಿತ್ ಚಕ್ರತೀರ್ಥ ಲೇಖಕರಾಗಿದ್ದು, ಅನೇಕ ಕೃತಿಗಳನ್ನು ರಚಿಸಿದ್ದಾರೆ. ವಿವಿಧೆಡೆ ಉಪನ್ಯಾಸಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಮುಖ್ಯವಾಗಿ ಗಣಿತ ಹಾಗೂ ವಿಜ್ಞಾನ ಬೋಧಿಸುತ್ತಾರೆ. ಸೂತ್ರ ಎಂಬ ಮಕ್ಕಳ ವಿಜ್ಞಾನ ಮಾಸಿಕವನ್ನು ಸಂಪಾದಿಸುತ್ತಾರೆ.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥ ಸಮಿತಿ ಒಳ್ಳೆಯ ಕೆಲಸ ಮಾಡಿದೆ, ಸಮಿತಿಯನ್ನು ವಿಸರ್ಜಿಸಲಾಗಿದೆ !: CM ಆದೇಶ