ಬೆಂಗಳೂರು: ದೇಶಾದ್ಯಂತ ಲೋಕಸಭಾ ಚುನಾವಣೆ (Lok Sabha Election 2024) ಕಾವು ಜೋರಾಗಿಯೇ ಇದೆ. ಈ ನಡುವೆ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ (Karnataka Congress Government) ಒಂದು ವರ್ಷ ಪೂರ್ಣವಾಗುತ್ತಿದೆ. ಮೇ 20ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್ ರೆಡಿ ಮಾಡಲು ಸಿದ್ಧತೆ ನಡೆಸಿದೆ. ಇದಕ್ಕೆ ಕೌಂಟರ್ ಕೊಡಲು ಸಿಎಂ ಮತ್ತವರ ಮಂತ್ರಿ ಮಂಡಲದ ಸದಸ್ಯರು ಪ್ಲ್ಯಾನ್ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಈಗಾಗಲೇ ಮುಗಿ ಬೀಳುತ್ತಿರುವ ಬಿಜೆಪಿಗರು ಕಾನೂನು ಸುವ್ಯವಸ್ಥೆ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಇನ್ನು ಒಂದು ವರ್ಷ ಸರ್ಕಾರ ಏನೆಲ್ಲ ವೈಫಲ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡು, ಇದು ಸರ್ಕಾರದ ಸಾಧನೆ ಎಂದು ನೆಗೆಟಿವ್ ರೋಲ್‌ನಲ್ಲಿ ಬಿಂಬಿಸಲು ಮುಂದಾಗಿದೆ.
ರಾಜ್ಯದಲ್ಲಿ ಎಂದೂ ಕಂಡರಿಯದ ಭೀಕರ ಬರಗಾಲ ಬಂದಿದೆ. ಆದರೆ, ಬರ ನಿರ್ವಹಣೆಯಲ್ಲಿ ವಿಫಲವಾಗಿದೆ. ರೈತರಿಗೆ ಪರಿಹಾರವನ್ನು ನೀಡಿಲ್ಲ. ರೈತರ ಬದುಕು ದುಸ್ತರವಾಗಿದೆ. ಕೇಂದ್ರ ಸರ್ಕಾರ ನೀಡಿದ ಬರ ಪರಿಹಾರದ ಹಣವೂ ರೈತರಿಗೆ ತಲುಪುತ್ತಿಲ್ಲ. ಅದನ್ನು ಬ್ಯಾಂಕ್‌ಗಳು ಸಾಲಕ್ಕೆ ಬಳಸಿಕೊಳ್ಳುತ್ತಿವೆ. ಇನ್ನು ಸರ್ಕಾರವು ಒಂದು ವರ್ಷದಲ್ಲಿ ಹೊಸ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನೂ ಮಾಡಿಲ್ಲ.
ಇಷ್ಟಲ್ಲದೆ ಶಾಸಕರ ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಶಾಸಕರಿಗೆ ಅನುದಾನ ಕೊಡಲು ಹಣವಿಲ್ಲ. ರಾಜ್ಯದಲ್ಲಿ ಸರಣಿ ಕೊಲೆ, ಅತ್ಯಾಚಾರಗಳಾದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಅನುದಾನ ಕೊಡುತ್ತೇವೆ, ಕೊಡುತ್ತೇವೆ ಎಂದೇ ದಿನ ದೂಡುತ್ತಿದೆ ಎಂದು ಸ್ವಪಕ್ಷೀಯ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಜನರ ಮುಂದಿಡಲು ಬಿಜೆಪಿ ಮುಂದಾಗಿದೆ.
ಬುಕ್ ರಿಲೀಸ್‌ಗೆ ಬಿಜೆಪಿ ಸಿದ್ಧತೆ
ರಾಜ್ಯ ಸರ್ಕಾರದ ಮೇಲೆ ಮಾಡಲಾಗುವ ಎಲ್ಲ ಆರೋಪಗಳ ಪಟ್ಟಿಯನ್ನು ಒಂದು ಪುಸ್ತಕ ರೂಪದಲ್ಲಿ ತರಲು ಬಿಜೆಪಿ ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಇದನ್ನು ದೊಡ್ಡ ಮಟ್ಟದಲ್ಲಿ ಅಭಿಯಾನವನ್ನಾಗಿ ಕೈಗೊಳ್ಳಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸರ್ಕಾರದ ವಿರುದ್ಧ ಇದೇ ಇವರಿಗೆ ಪ್ರಮುಖ ಅಸ್ತ್ರವಾಗಿರಲಿದೆ.
ಕೌಂಟರ್ ಕೊಡಲು ಸಿದ್ದು ಪ್ಲ್ಯಾನ್ ಏನು?
ಇತ್ತ ಒಂದು ವರ್ಷ ಪೂರೈಸಿರುವ ಸಿದ್ದರಾಮಯ್ಯ ಸರ್ಕಾರದಿಂದ ಸಾಧನಾ ಸಮಾವೇಶ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಈಗ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಫಲಿತಾಂಶದವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜೂನ್ ಎರಡನೇ ವಾರದಲ್ಲಿ ಸಾಧನಾ ಸಮಾವೇಶ ಮಾಡಲು ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ.
ಇದನ್ನೂ ಓದಿ: DK Shivakumar: ಉತ್ತರ ಪ್ರದೇಶದಲ್ಲಿ ಡಿಕೆಶಿ; ಅಮೇಥಿ, ರಾಯ್ ಬರೇಲಿಯಲ್ಲಿ ಮಾಡ್ತಾರಾ ಕಮಾಲ್?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರ್ನಾಟಕದಲ್ಲಿ ಅಧಿಕ ಸ್ಥಾನ ಬಂದರೆ ಎರಡನ್ನೂ ಒಟ್ಟಿಗೆ ಸೇರಿ ಸಮಾವೇಶ ಮಾಡುವಂತೆ ಸಿಎಂ ಆಪ್ತರು ಸಲಹೆ ನೀಡಿದ್ದಾರೆನ್ನಲಾಗಿದೆ. ಈ ಸಮಾವೇಶ ಮಾಡುವ ಮೂಲಕ ಗ್ಯಾರಂಟಿ ಸರ್ಕಾರದ ಯಶಸ್ವಿ ನಾಗಾಲೋಟ ಮುಂದುವರಿಯುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಲು ಚಿಂತನೆ ನಡೆಸಲಾಗಿದೆ. ಒಟ್ಟಾರೆಯಾಗಿ ಬಿಜೆಪಿಯ “ಫೆಲ್ಯೂರ್ ಸರ್ಕಾರ” ಅಸ್ತ್ರಕ್ಕೆ ಪ್ರತಿಯಾಗಿ ಸಾಧನಾ ಸಮಾವೇಶ ಮಾಡಿ ಚೆಕ್‌ಮೇಟ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ.