Site icon Vistara News

Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!

Madhu Bangarappa in Power Point with HPK

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿದ್ದು ಕೋಮು ಗಲಭೆ (Communal riots) ಅಲ್ಲವೇ ಅಲ್ಲ. ಅಲ್ಲಿ ಒಂದು ಹತ್ತು ಮನೆಗಳಿಗೆ ಕಲ್ಲು ಹೊಡೆಯಲಾಗಿದೆ. ಅದನ್ನು ನಾನು ಇಲ್ಲ ಎಂದು ಹೇಳುತ್ತಿಲ್ಲ. ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಇದನ್ನು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ. ಇಲ್ಲಿ ಯಾವುದೇ ಧಾರ್ಮಿಕ ಭಾವನೆಯಿಂದ ನೋಡದೆ ಯಾರು ಯಾರು ತಪ್ಪು ಮಾಡಿದ್ದಾರೋ? ಅವರೆಲ್ಲರಿಗೂ ಶಿಕ್ಷೆ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಶಾಂತಿಯ ತೋಟ ಎಂಬುದನ್ನೂ ನಾನು ಈಗಲೂ ಹೇಳುತ್ತೇನೆ. ಇದನ್ನು ಯಾರೋ ಕಿಡಿಗೇಡಿಗಳು, ತಲೆಹರಟೆಗಳು ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಯಾರೇ ಕೆದಕಲು ಹೋದರೆ ಪಾಠ ಕಲಿಸುತ್ತೇವೆ

ಒಂದು ವೇಳೆ ಯಾರಾದರೂ ಹೋಗಿ ಇದನ್ನು ಮತ್ತೆ ಕೆದಕುವುದನ್ನು ಮಾಡಿದರೆ ಕಾನೂನು ಅವರಿಗೆ ಕಠಿಣವಾದ ಪಾಠವನ್ನು ಕಲಿಸಲಿದೆ. ಪಕ್ಷಾತೀತ, ಜಾತ್ಯತೀತ ಹಾಗೂ ಧರ್ಮಾತೀತವಾಗಿ ಅಂಥವರ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಖಡಕ್‌ ಎಚ್ಚರಿಕೆಯನ್ನು ನೀಡಿದರು.

ಶಿವಮೊಗ್ಗಕ್ಕೆ ಅನ್ವಯ ಮಾಡಬೇಡಿ

ಮಾಧ್ಯಮಗಳಲ್ಲಿ ತೋರಿಸುವ ರೀತಿಯಲ್ಲಿ ಶಿವಮೊಗ್ಗ ಗಲಭೆ ನಡೆದಿಲ್ಲ. ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ಜನರು ಆ ರೀತಿಯಾಗಿ ಇಲ್ಲ. ಯಾರೋ ಒಬ್ಬ ಕಿಡಿಗೇಡಿ, ತಲೆಹರಟೆ ಮಾಡುವ ಕೆಲಸಕ್ಕೆ ನಾವೂ ಇಡೀ ಜನರನ್ನು ದೂಷಣೆ ಮಾಡುವುದು ಸರಿಯಲ್ಲ. ಇದನ್ನು ಶಿವಮೊಗ್ಗಕ್ಕೆ ಅನ್ವಯ ಮಾಡುವುದು ಸರಿಯಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದ ಇತಿಹಾಸದಲ್ಲಿ ವಿಜೃಂಭಣೆಯಿಂದ ನಡೆದ ಗಣೇಶ ಮಹೋತ್ಸವ ಯಾವ ಅವಧಿಯಲ್ಲಿ ಎಂಬುದನ್ನು ನೋಡಿದರೆ ಈಗಿನ ನಮ್ಮ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಇದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಇದನ್ನೂ ಓದಿ : Power Point with HPK : ಜನ ನಮಗೆ ಅಧಿಕಾರ ಕೊಟ್ಟಿದ್ದೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು!

ಕಿಡಿಗೇಡಿಗಳಿಂದ ಗಲಾಟೆ

ಶಿವಮೊಗ್ಗದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆಯನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು. ಮೆರವಣಿಗೆ ವೇಳೆ ಡಿಜೆ, ಎಲ್‌ಇಡಿ ಲೈಟ್‌ಗಳನ್ನು ಬಳಸಲಾಗಿತ್ತು. ಈ ಮೆರವಣಿಗೆಯಲ್ಲಿ ಕೆಲವು ಮುಸ್ಲಿಂ ಯುವಕರೂ ಭಾಗವಹಿಸಿ ಖುಷಿಪಟ್ಟಿದ್ದರು. ಅಲ್ಲದೆ, ಅಂದೇ ಈದ್‌ ಮಿಲಾದ್‌ ಕೂಡಾ ಇತ್ತು. ಆದರೆ, ಅಂದು ಮುಸ್ಲಿಂ ಮುಖಂಡರು ಒಂದು ಕಡೆ ಸೇರಿ ಅದೇ ದಿನ ಅದೇ ಮಾರ್ಗವಾಗಿ ಮೆರವಣಿಗೆ ಮಾಡುವುದು ಸರಿಹೋಗುವುದಿಲ್ಲ. ನಾವು ಅಕ್ಟೋಬರ್‌ 1ರಂದು ಈದ್‌ ಮಿಲಾದ್‌ ಮೆರವಣಿಗೆ ಮಾಡೋಣ ಎಂದು ನಿಗದಿ ಮಾಡಿಕೊಂಡರು. ಆದರೆ, ಕೆಲವು ಕಿಡಿಗೇಡಿಗಳು ಅಂದು ಗಲಾಟೆಯನ್ನು ಮಾಡಿದ್ದಾರೆ. ಅಂಥವರ ಮೇಲೆ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

Exit mobile version