Site icon Vistara News

Indira Canteen : ಹೆಚ್ಚುವರಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah in Kanakadasa jayanti

ಬೆಂಗಳೂರು: ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಗುರುವಾರ ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ 225 ವಾರ್ಡ್‌ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ಇದಲ್ಲದೆ ಅಗತ್ಯವಿರುವೆಡೆ ಕ್ಯಾಂಟೀನ್ ಅನ್ನು ಪ್ರಾರಂಭಿಸಲಾಗುವುದು. ಇಂದಿರಾ ಕ್ಯಾಂಟೀನ್‌ಗೆ ಸ್ಥಳದ ಅಭಾವವಿರುವ ಕಡೆ ಮೊಬೈಲ್ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಕನಕದಾಸರು -ಸಮಸಮಾಜದ ಕನಸು ಕಂಡಿದ ದಾಸಶ್ರೇಷ್ಠ:

ಕನಕದಾಸರು ಸಮಾಜ ಸುಧಾರಕರಾಗಿದ್ದರು. ಅವರ ಸಾಹಿತ್ಯದ ಮೂಲಕ ಮನುಷ್ಯತ್ವವನ್ನು ಸಾರಿದರು. ಇಡೀ ಜಾತ್ಯತೀತವಾದ, ಮೇಲು – ಕೀಳು ಭೇದ – ಭಾವವಿಲ್ಲದ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ. ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದವರು. ಸಮಾಜದ ತಾರತಮ್ಯ ಹೋಗಲಾಡಿಸಲು ದಾಸಶ್ರೇಷ್ಠರ ದಿನವನ್ನು ಸರ್ಕಾರ ಇಂದು ಆಚರಿಸುತ್ತಿದೆ. ಸಾಹಿತ್ಯದ ಮೂಲಕ ತಮ್ಮ ಆದರ್ಶಗಳನ್ನು ಜನರಿಗೆ ತಿಳಿಹೇಳಿ ಜಾಗೃತಿ ಮೂಡಿಸಿದ್ದರು. ಜನರಿಗೆ ಅರ್ಥವಾಗುವ ಸರಳಭಾಷೆಯಲ್ಲಿ ತಮ್ಮ ದಾಸಸಾಹಿತ್ಯವನ್ನು ರಚಿಸಿದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ಬಿ.ಆರ್.ಪಾಟೀಲ್ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಬಿ.ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಅಧಿವೇಶನಕ್ಕೆ ಆಗಮಿಸಲು ಒಪ್ಪಿದ್ದಾರೆ. ಈಗ ಅವರ ಮನವೊಲಿಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಕನಕದಾಸ ಜಯಂತಿಯ ಶುಭಾಶಯಗಳನ್ನು ಕೋರಿದರು.

ನಿಮ್ಹಾನ್ಸ್‌ನಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸಾ ವ್ಯವಸ್ಥೆಯಿಲ್ಲದೆ ರೋಗಿಯೊಬ್ಬರ ಸಾವು ಸಂಭವಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ನಿಮ್ಹಾನ್ಸ್ ನಿರ್ದೇಶಕರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಉತ್ತರಿಸಿದರು.

ಹಳೇ, ಕೊಳಕು ಬಟ್ಟೆ ಹಾಕಿ ಬರುವ ಬಡವರಿಗೂ ಸ್ಪಂದಿಸಿ ಚಿಕಿತ್ಸೆ ನೀಡಿ: ಸಿದ್ದರಾಮಯ್ಯ

ಜಯದೇವ ಆಸ್ಪತ್ರೆಯಲ್ಲಿರುವ (Jayadeva Hospital) ಗುಣಮಟ್ಟದ ಆರೋಗ್ಯ ಸೇವೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ (Government Hospital) ಸಿಗಬೇಕು ಎನ್ನುವುದು ಸರ್ಕಾರದ ಗುರಿ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಆಸ್ಪತ್ರೆ ಹಳೇ ಬಟ್ಟೆ-ಕೊಳಕು ಬಟ್ಟೆ ಹಾಕಿಕೊಂಡು ಬರುವ ಬಡವರನ್ನೂ ಮಾನವೀಯವಾಗಿ ನಡೆಸಿಕೊಂಡು ತಾರತಮ್ಯ ಇಲ್ಲದ ಉತ್ತಮ ಆರೋಗ್ಯ ಸೇವೆ ನೀಡಿ ಎಂದು ವೈದ್ಯರಿಗೆ ಹೃದಯಸ್ಪರ್ಶಿ ಕಿವಿಮಾತು ಹೇಳಿದರು.‌

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮೇಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 262 ಆಧುನಿಕ ಜೀವ ರಕ್ಷಕ ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧವಾಗಿದೆ. ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳುವಂಥಾಗಬಾರದು ಎನ್ನುವ ಕಾರಣಕ್ಕೇ ನೂತನ 262 ತುರ್ತು 108 ಆಂಬ್ಯುಲೆನ್ಸ್‌ಗಳನ್ನು ಆರೋಗ್ಯ ಸೇವೆಗೆ ಒದಗಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 840ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳ ಅಗತ್ಯವಿದೆ

ರಾಜ್ಯದಲ್ಲಿ 840ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳ ಅಗತ್ಯವಿದೆ. ಪ್ರತಿ ತಾಲೂಕಿನಲ್ಲಿ 4 ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ದಿನ ನೂರಾರು ಮಂದಿಗೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸುತ್ತಿವೆ. ಪ್ರಾಥಮಿಕ ತುರ್ತು ಚಿಕಿತ್ಸೆ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಉತ್ತರ ಕರ್ನಾಟಕದ ಕಡೆ ಹೆಚ್ಚಿನ‌ ಗಮನ ನೀಡಿ

ಪ್ರತಿ ಜಿಲ್ಲೆಯಲ್ಲಿ MRI ಸ್ಕ್ಯಾನಿಂಗ್ ಸೌಲಭ್ಯ ಇರಬೇಕು. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಸೇವಾವೆಚ್ಚ ದುಬಾರಿ ಆಗಿರುವುದರಿಂದ ಬಡವರಿಗೆ ಬಹಳ ಕಷ್ಟ ಆಗುತ್ತಿದೆ. ಈ ಕಾರಣಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಾವಿರಾರು ಮಂದಿ ಬೇಡಿಕೆ ಅರ್ಜಿ ಕೊಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲೇ ಉತ್ತಮ‌ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವ ವಾತಾವರಣ ರಾಜ್ಯದಲ್ಲಿ ಸೃಷ್ಟಿ ಆಗುತ್ತಿದೆ. ಜಯದೇವ ಆಸ್ಪತ್ರೆಯಿಂದ ಉತ್ತಮ‌ ಸೇವೆ ಸಾಧ್ಯ ಆಗಿರುವಾಗ ಉಳಿದ ಕಡೆಗಳಲ್ಲೂ ಅದೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಿದೆ. ರಾಜ್ಯ ಸರ್ಕಾರ ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ಸೂಚಿಸಿ ಉತ್ತರ ಕರ್ನಾಟಕದ ಕಡೆ ಹೆಚ್ಚಿನ‌ ಗಮನ ನೀಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಲಹೆ ನೀಡಿದರು.

ಎಲ್ಲ ಕಡೆ ಡಾಕ್ಟರ್‌ಗಳನ್ನು ಭರ್ತಿ ಮಾಡಲು ಹೇಳಿದ್ದೇನೆ

25 ಕೋಟಿ ಜನರಿಗೆ ಆರೋಗ್ಯ ಪರಿಹಾರ ಕೊಟ್ಟಿದ್ದೇವೆ. 20 ಲಕ್ಷ, 30 ಲಕ್ಷ ರೂಪಾಯಿ ಪರಿಹಾರ ಕೊಡಿ ಅಂತಾ ಬರುತ್ತಾರೆ. ನಾನು ಕನಿಷ್ಠ 5 ಲಕ್ಷ ರೂಪಾಯಿ ಕೊಡುತ್ತೇನೆ. ಒಂದು ಕಾಲದಲ್ಲಿ ಡಾಕ್ಟರ್‌ಗಳ ಕೊರೆತೆ ಇತ್ತು. ಈಗ ಡಾಕ್ಟರ್‌ಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ಡಾಕ್ಟರ್ ಹುದ್ದೆ ಖಾಲಿ ಇವೆ. ಎಲ್ಲ ಕಡೆ ಡಾಕ್ಟರ್‌ಗಳನ್ನು ಭರ್ತಿ ಮಾಡಲು ಹೇಳಿದ್ದೇನೆ. ಉತ್ತರ ಕರ್ನಾಟಕದ ಕಡೆಗೆ ಡಾಕ್ಟರ್‌ಗಳು ಹೆಚ್ಚಿನ ಒತ್ತು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಇದನ್ನೂ ಓದಿ: Congress Karnataka : ನಿಗಮ-ಮಂಡಳಿ ನೇಮಕದಲ್ಲಿ ಸಿಎಂ, ಡಿಸಿಎಂ ಏಕಪಕ್ಷೀಯ ನಿರ್ಧಾರ; ಜಾರಕಿಹೊಳಿ ಬೇಸರ

ಅನಿಮಿಯಾ ಇದ್ದರೆ ಅಪೌಷ್ಟಿಕತೆ ಇರುತ್ತದೆ

ನಾವು ಸುಮ್ಮನೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕೆಂದು ಸುವರ್ಣಸೌಧ ಕಟ್ಟಿ ಅಧಿವೇಶನ ನಡೆಸುವುದಲ್ಲ. ಅಲ್ಲಿ ಬರಿ ತವಡು ಕುಟ್ಟುವ ಕೆಲಸ ಆಗಬಾರದು. ಶಿಕ್ಷಣ ,ಆರೋಗ್ಯ, ಪೊಲೀಸ್‌ ಇಲಾಖೆಗಳು ಮುಖ್ಯವಾದವು. 180 ಕೋಟಿ ರೂಪಾಯಿಯನ್ನು ಅನಿಮಿಯಾ ಮುಕ್ತ ಕರ್ನಾಟಕ ಮಾಡಲು ಕೊಟ್ಟಿದ್ದೇನೆ. ಅನಿಮಿಯಾ ಇದ್ದರೆ ಅಪೌಷ್ಟಿಕತೆ ಇರುತ್ತದೆ. ಅದಕ್ಕೆ ನಾನು ಮಕ್ಕಳಿಗೆ ಹಾಲು ಸಹಿತ ವಾರದಲ್ಲಿ ಎರಡು ಮೊಟ್ಟೆ ಕೊಡುವುದಕ್ಕೆ ಕಾರ್ಯಕ್ರಮ ರೂಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಶಾಸಕ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.

Exit mobile version