Site icon Vistara News

BJP JDS Alliance: ಬಿಜೆಪಿ ಜೆಡಿಎಸ್‌ ಮೈತ್ರಿಯಲ್ಲಿ 24+4 ಫಾರ್ಮುಲಾ? ಆ 4 ಕ್ಷೇತ್ರ ಯಾವುದು?

PM Narendra Modi and HD Kumaraswamy

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಸನ್ನಿಹಿತವಾಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS Alliance) ಮಾತುಕತೆಯು ಮಹತ್ವದ ಘಟ್ಟವನ್ನು ತಲುಪಿದೆ. ಈಗಾಗಲೇ ಎನ್‌ಡಿಎ ಮೈತ್ರಿಕೂಟವನ್ನು (NDA alliance) ಸೇರಿರುವ ಜೆಡಿಎಸ್‌ಗೆ ಈಗ ಸೀಟು ಹಂಚಿಕೆ ಸವಾಲು ಎದುರಾಗಿದೆ. ಆದರೆ, 25+3 ಫಾರ್ಮುಲವಾ? ಇಲ್ಲವೇ 24+4 ಫಾರ್ಮುಲಾವೇ? ಎಂಬುದೇ ಈಗ ಕುತೂಹಲವನ್ನು ಹುಟ್ಟುಹಾಕಿದೆ. ಈ ಬಗ್ಗೆ ಇಂದು (ಗುರುವಾರ) ಸಂಜೆಯೊಳಗೆ ದೆಹಲಿಯಲ್ಲಿ ಅಂತಿಮ ಆಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP national president JP Nadda) ಹಾಗೂ ಗೃಹ ಸಚಿವ ಅಮಿತ್‌ ಶಾ ಜತೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸಭೆ ನಡೆಸಲಿದ್ದು, ಸೀಟು ಹಂಚಿಕೆ ಬಹುತೇಕ ಫೈನಲ್‌ ಆಗಲಿದೆ.

ಈ ಸಂಬಂಧ ಈಗಾಗಲೇ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರು ಪಡೆದುಕೊಂಡಿದ್ದಾರೆ. ಇಂದು ಇಲ್ಲವೇ ನಾಳೆ ಎಚ್‌‌.ಡಿ. ಕುಮಾರಸ್ವಾಮಿ ಜತೆ ಫೈನಲ್‌ ಮಾತುಕತೆ ನಡೆಯಲಿದೆ. ಮೂರು ಸೀಟ್‌ ಅನ್ನು ಬಿಟ್ಟುಕೊಡುವ ಬಗ್ಗೆ ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ. ಆದರೆ, ಇನ್ನೊಂದು ಸ್ಥಾನವನ್ನು ಹೆಚ್ಚು ಕೊಟ್ಟರೆ ಅದು ಬೋನಸ್‌ ಎಂದು ರಾಜ್ಯ ಬಿಜೆಪಿ ಹೇಳುತ್ತಿದೆ.

ಬಿಟ್ಟು ಕೊಡುವ 4 ಕ್ಷೇತ್ರ ಯಾವುವು?

ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಈ ಮೂಲಕ ನಮಗೆ ಗೆಲುವು ಮುಖ್ಯ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ರವಾನೆ ಮಾಡಲಿದ್ದಾರೆ. ಆದರೆ, 25+3 ಫಾರ್ಮುಲಾಗೆ ಬೆಸ್ಟ್‌ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಆಗುವ ಬದಲಾವಣೆ ಮೇಲೆ ಬಿಟ್ಟುಕೊಡುವುದು ಮೂರು ಸ್ಥಾನವೋ ಇಲ್ಲವೇ ನಾಲ್ಕು ಸ್ಥಾನವೋ ಎಂಬುದು ತಿಳಿಯಲಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್‌ ಶಾ ಅವರ ಜತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು. ಗ್ಯಾರಂಟಿ ಮೂಲಕ ಓಡುತ್ತಿರುವ ಕಾಂಗ್ರೆಸ್‌‌ ಅನ್ನು ಲೋಕಸಭಾ ಚುನಾವಣೆಯಲ್ಲಿ ಕಟ್ಟಿ ಹಾಕಲು ಎಚ್‌ಡಿಕೆ ಮೈತ್ರಿಗೆ ಒಪ್ಪಿಕೊಂಡಿದ್ದರು. ಈಗ ಈ ನಾಯಕರ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಸೇರಿಕೊಳ್ಳಲಿದ್ದು, ಸೀಟು ಹಂಚಿಕೆ ಸಭೆಯಲ್ಲಿ ವರಿಷ್ಠರು ತಮ್ಮ ತೀರ್ಮಾನವನ್ನು ಪ್ರಕಟಿಸಲಿದ್ದಾರೆ.

5 ಕ್ಷೇತ್ರ ಬಿಟ್ಟುಕೊಡಲು ಜೆಡಿಎಸ್‌ ಮನವಿ

ಈ ನಡುವೆ 5 ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್‌ ನಾಯಕರು ಮನವಿ ಮಾಡಿದ್ದಾರೆ. ಜೆಡಿಎಸ್‌ ಸಂಘಟನೆ ಚುರುಕು ಇರುವ ಕಡೆ ಸೀಟ್‌ ಕೊಡವಂತೆ ಒತ್ತಾಯ ಮಾಡಿದ್ದಾರೆ. ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್‌ ಸಂಘಟನೆಯಲ್ಲಿ ಚುರುಕಾಗಿದೆ. ಹೀಗಾಗಿ ಈ ಆರೂ ಕ್ಷೇತ್ರಗಳನ್ನು ನಮಗೆ ಕೊಡಿ, ಉಳಿಕೆ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಿ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ವರಿಷ್ಠರಿಗೆ ಮಾಜಿ ಸಿಎಂ ಬಿಎಸ್‌ವೈ ಕೊಟ್ಟ ಸಲಹೆಯೇನು?

ಎಚ್.ಡಿ. ಕುಮಾರಸ್ವಾಮಿ ಜತೆ ಮಾತುಕತೆ ಬಳಿಕ ಬಿ.ಎಸ್.‌ ಯಡಿಯೂರಪ್ಪ ಅವರನ್ನು ಕರೆಸಿಕೊಂಡಿದ್ದ ವರಿಷ್ಠರು, ಜೆಡಿಎಸ್‌ಗೆ ಸೀಟ್‌ ಬಿಟ್ಟುಕೊಡುವ ಬಗ್ಗೆ ಮಾಹಿತಿಯನ್ನು ಪಡೆದಿದ್ದರು. ಅವರು ಯಾವ ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಮಾಹಿತಿ ಪಡೆದಿದ್ದರು. ಅದಕ್ಕೆ ಬಿಎಸ್‌ವೈ, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರವನ್ನು ಕೊಡಿ ಎಂದು ಹೇಳಿ ಬಂದಿದ್ದರು ಎನ್ನಲಾಗಿದೆ. ಅಂತಿಮವಾಗಿ ಎಷ್ಟು ಸ್ಥಾನ ಸಿಗಲಿದೆ ಎಂಬುದು ಇಂದು (ಗುರುವಾರ) ಸಂಜೆ ಇಲ್ಲವೇ ನಾಳೆ (ಗುರುವಾರ) ಬೆಳಗ್ಗೆ ನಿರ್ಣಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: BJP JDS Alliance: ಮೈತ್ರಿ ಸೀಟು ಹಂಚಿಕೆ; ದೇವೇಗೌಡರಿಗೆ ಮೋದಿ ಹೇಳಿದ್ದೇನು?

ಬೆಳಗಾವಿ ಅಧಿವೇಶನದಲ್ಲಿ ಸಹ ಈ ಬಾರಿ ಮೈತ್ರಿ ಪಾಲಿಟಿಕ್ಸ್‌‌ ವರ್ಕೌಟ್‌ ಆಗಿದೆ. ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ಜಂಟಿಯಾಗಿ ಹೋರಾಟ ಮಾಡಿತ್ತು. ಪ್ರತಿಪಕ್ಷ ನಾಯಕ ಆರ್‌‌. ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಎಚ್‌.ಡಿ.ಕ. ಕುಮಾರಸ್ವಾಮಿ ಸಾಥ್‌ ಕೊಟ್ಟಿದ್ದರು. ಬರ ಮತ್ತು ಉತ್ತರ ಕರ್ನಾಟಕ ಅಭಿವೃದ್ಧಿ ತಾರತಮ್ಯ ವಿಚಾರದಲ್ಲಿಯೂ ಎಚ್‌ಡಿಕೆ ಜತೆಯಾಗಿದ್ದರು. ಇನ್ನು ಮುಂದೆ ಲೋಕಸಭೆ ಚುನಾವಣೆಯಲ್ಲಿ ಜಂಟಿ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ.

Exit mobile version