Site icon Vistara News

Congress Karnataka: 3 ಡಿಸಿಎಂ ಚರ್ಚೆ ಮುನ್ನೆಲೆಗೆ; ಕಾಂಗ್ರೆಸ್‌ನಲ್ಲಿ ಮತ್ತೆ ಡಿನ್ನರ್‌ ಪಾಲಿಟಿಕ್ಸ್

Sathish Jarkhiholi

ಬೆಂಗಳೂರು: ರಾಜ್ಯದಲ್ಲಿ ಕರ ಸೇವಕರ (Kara Sevaks) ಬಂಧನ ಪ್ರಕರಣ ತೀವ್ರ ವಿವಾದವನ್ನು ಪಡೆದುಕೊಂಡಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್‌ (Congress Karnataka) ಸರ್ಕಾರದಲ್ಲಿ ಡಿನ್ನರ್‌ ಪಾಲಿಟಿಕ್ಸ್‌ ಮತ್ತೆ ಶುರುವಾಗಿದೆ. ಇಲ್ಲಿ ಮೂರು ಡಿಸಿಎಂ ಹುದ್ದೆ (Deputy CM post) ಸೃಷ್ಟಿ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಗುರುವಾರ ತಡರಾತ್ರಿ ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ನೇತೃತ್ವದಲ್ಲಿ ಅವರ ನಿವಾಸದಲ್ಲಿ ದಲಿತ ಮತ್ತು ಸಿಎಂ ಆಪ್ತ ಸಚಿವರ ಸಭೆ ನಡೆದಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಚಿವರಾದ ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ ಹಾಗೂ ದಿನೇಶ್ ಗುಂಡೂರಾವ್ ಸಭೆಯಲ್ಲಿ ಭಾಗಿಯಾಗಿದ್ದರು. ಇದು ಈಗ ಕುತೂಹಲವನ್ನು ಹುಟ್ಟುಹಾಕಿದೆ.

ಈ ಹಿಂದೆ ಜಾತಿವಾರು ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು. ಈ ಕೆಲಸ ಲೋಕಸಭಾ ಚುನಾವಣೆಗೆ ಮುನ್ನವೇ ಆಗಬೇಕು. ಈ ಸಂಬಂಧ ದೆಹಲಿಗೂ ಭೇಟಿ ನೀಡಿ ಹೈಕಮಾಂಡ್ ಜತೆ ಮಾತುಕತೆ ಮಾಡುವುದಾಗಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದರು. ಇದೇ ವೇಳೆ ಐವರು ಸಚಿವರು ಒಂದು ಕಡೆ ಸೇರಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಡಿನ್ನರ್ ಮೀಟಿಂಗ್ ವೇಳೆ ಮುಂದಿನ ತಂತ್ರಗಾರಿಕೆ ಕುರಿತು ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯಿಂದ ವಾಪಸ್ ಆಗುವ ಹೊತ್ತಿನಲ್ಲೇ ನಡೆದಿರುವ ಐವರು ಸಚಿವರ ಸಭೆಯು ಕುತೂಹಲವನ್ನು ಹುಟ್ಟುಹಾಕಿದೆ. ತಡರಾತ್ರಿ ಊಟದ ನೆಪದಲ್ಲಿ ಸಭೆ ಸೇರಿ ಮತ್ತೊಮ್ಮೆ ರಹಸ್ಯ ಚರ್ಚೆ ನಡೆಸಿದ್ದಾರೆ. ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.

ಸಿಎಂ ಜತೆ ಮಾತನಾಡಿದ್ದ ಸತೀಶ್‌ ಜಾರಕಿಹೊಳಿ

ಈ ನಾಯಕರು ಕೆಲ‌ ದಿನಗಳ ಹಿಂದಷ್ಟೇ ಪರಮೇಶ್ವರ್ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಆಗ ರಹಸ್ಯ ಸಮಾಲೋಚನೆ ನಡೆದಿತ್ತು. ಈ ನಡುವೆ ಇವರ ನಡೆ ಕುತೂಹಲವನ್ನು ಹುಟ್ಟುಹಾಕಿದೆ. ಎರಡು ದಿನದ ಹಿಂದಷ್ಟೇ ರಾತ್ರಿ ವೇಳೆ ಏರ್‌ಪೋರ್ಟ್ ತನಕ ತೆರಳಿದ್ದ ಸತೀಶ್‌ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಜತೆ ಮಾತುಕತೆ ನಡೆಸಿ ವಾಪಸಾಗಿದ್ದರು. ಇನ್ನು ಗುರುವಾರ ನಡೆಸಿದ ಡಿನ್ನರ್‌ ಪಾಲಿಟಿಕ್ಸ್‌ಗೆ ಮುನ್ನ ಸಹ ಸತೀಶ್‌ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಹಾಗಾಗಿ ಈ ಸಭೆ ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ಚರ್ಚೆ ಆಗಿದೆ: ಸಚಿವ ಸತೀಶ್ ಜಾರಕಿಹೊಳಿ

ಒಂದೇ ಪಕ್ಷದ ಮಂತ್ರಿಗಳು ಒಂದು ಕಡೆ ಸೇರಿದ್ದೆವು. ಇದರಲ್ಲಿ ಏನೂ ವಿಶೇಷ ಇಲ್ಲ. ಊಟದ ವಿಚಾರವಾಗಿ ಸೇರಿಕೊಂಡಾಗ ಸಹಜವಾಗಿ ರಾಜಕೀಯ ಚರ್ಚೆ ಆಗಿದೆ. ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ, ಕಾರ್ಯಕರ್ತರ ಸ್ಥಾನಮಾನದ ಚರ್ಚೆ ಆಗಿದೆ. ದಲಿತ ಸಿಎಂ ವಿಚಾರವಾಗಿ ಚರ್ಚೆ ಆಗಿಲ್ಲ. ಮುಂದೆ ಶೋಶಿತರ ಸಮಾವೇಶ ಇದೆ. ದಲಿತರ ಸಮಾವೇಶ ಇದೆ. ಈ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಡಿಸಿಎಂ ವಿಚಾರ ಚರ್ಚೆ ಆಗಿಲ್ಲ. ರಾಜಣ್ಣ ಬಹಳ ಸಾರಿ ಹೇಳಿದ್ದಾರೆ. ನಾವು ಕೂಡ ಹೇಳಿದ್ದೇವೆ. ಹೈಕಮಾಂಡ್ ಭೇಟಿ ಸದ್ಯಕ್ಕೆ ಇಲ್ಲ. ಮೊದಲಿನಿಂದ ನಾಲ್ಕು ಡಿಸಿಎಂ ಬೇಡಿಕೆ ಇದೆ. ಇದು ಹೈಕಮಾಂಡ್ ಗಮನಕ್ಕೂ ಇದೆ. ಸಿದ್ದರಾಮಯ್ಯ ಕೂಡ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ರಾಜಕೀಯ ಚರ್ಚೆ ಆಗಿದೆ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ಇತ್ತು. ಹೋಗಿ ಊಟ ಮಾಡಿ ಬಂದೆ. ರಾಜಕೀಯ ಚರ್ಚೆ ಆಗಿದೆ. ಅದನ್ನು ನಿಮ್ಮ ಬಳಿ ಬಹಿರಂಗ ಪಡಿಸಲು ಆಗುತ್ತದೆಯೇ? ರಾಜಕೀಯದವರು ನಾವು ರಾಜಕೀಯ ಮಾತನಾಡಿಯೇ ಇರುತ್ತೇವೆ. ಚುನಾವಣೆ ಮೊದಲು ಚಿತ್ರದುರ್ಗದಲ್ಲಿ ಎಸ್‌ಸಿ-ಎಸ್‌ಟಿ ಸಮಾವೇಶ ಮಾಡಿ ಕೆಲವು ನಿರ್ಣಯ ಮಾಡಿದ್ದೆವು. ಸರ್ಕಾರ ಬಂದಾಗ ಅದನ್ನು ಮಾಡುತ್ತೇವೆ ಅಂತ ಘೋಷಣೆ ಮಾಡಿದ್ದೆವು. ಈಗ ಸರ್ಕಾರ ಬಂದಿದೆ. ಅದನ್ನು ಜಾರಿ ಮಾಡಬೇಕು. ಅ ಬಗ್ಗೆ ಚರ್ಚೆ ಮಾಡಿದೆವು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಡಿನ್ನರ್ ಮೀಟಿಂಗೋ? ಇಲ್ಲವೇ ಇಶ್ಯೂ ಡೈವರ್ಟ್ ಪಾಲಿಟಿಕ್ಸೋ?

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಐವರು ಸಚಿವರು ಒಂದು ಕಡೆ ಸೇರಿದ್ದು “ಡಿನ್ನರ್‌ ಪಾಲಿಟಿಕ್ಸ್‌” ಇಲ್ಲವೇ ಇಶ್ಯೂ ಡೈವರ್ಟ್ ಪಾಲಿಟಿಕ್ಸೋ? ಎಂಬ ಅನುಮಾನವನ್ನು ಮೂಡಿಸಿದೆ. ಮೂರು ತಿಂಗಳ ಹಿಂದೆ ಇದೇ ತಂಡ ಡಿನ್ನರ್ ಪಾಲಿಟಿಕ್ಸ್ ಮಾಡಿತ್ತು. ಕೆ.ಎನ್ ರಾಜಣ್ಣ ಅವರು ಡಿಸಿಎಂ ಹುದ್ದೆ ಚರ್ಚೆಯನ್ನು ಎಳೆದು ತಂದಿದ್ದರು. ಬಳಿಕ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಇವರನ್ನು ತಣ್ಣಗೆ ಮಾಡಿತ್ತು.

ಇದನ್ನೂ ಓದಿ: BJP Protest: ತಾಕತ್‌ ಇದ್ದರೆ ನನ್ನ, ಬಿ.ಎಸ್.‌ ಯಡಿಯೂರಪ್ಪ ಅವರನ್ನು ಬಂಧಿಸಿ: ಸರ್ಕಾರಕ್ಕೆ ಆರ್. ಅಶೋಕ್‌ ಸವಾಲು

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ನಡೆಗೆ ಅಸಮಾಧಾನ‌ ವ್ಯಕ್ತವಾಗಿದೆ. ಅಲ್ಲದೆ, ಡಿಸಿಎಂ ಹುದ್ದೆ ಸೃಷ್ಟಿ ಪೂರಕವಾಗಿ ಸಚಿವರು ಮಾತನಾಡಲು ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಕರಸೇವಕರ ಬಂಧನ ವಿಚಾರ ಬಾರಿ ಚರ್ಚೆಗೆ ಈಡಾಗಿದ್ದು, ಇದು ಒಂದು ವಾರದಿಂದ ಸರ್ಕಾರಕ್ಕೆ ಬಾರಿ ಡ್ಯಾಮೇಜ್ ಮಾಡುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಡೈವರ್ಟ್‌ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿದೆಯೇ? ಎಂಬ ಅನುಮಾನ ಮೂಡಿದೆ. ಹಾಗಾಗಿ ಐವರು ಸಚಿವರ ಈ ನಡೆ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಎಚ್ಚರಿಕೆ ಸಂದೇಶವೋ ಅಥವಾ ಡೈವರ್ಟ್‌ ಪಾಲಿಟಿಕ್ಸ್‌ ಆಗಿದೆಯೋ ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

Exit mobile version