Site icon Vistara News

Shakti Scheme : ಶಕ್ತಿ ಯೋಜನೆಗೆ 3 ತಿಂಗಳು; 1,352 ಕೋಟಿ ರೂಪಾಯಿ ಮೌಲ್ಯದಲ್ಲಿ ಮಹಿಳಾ ಸಂಚಾರ!

Shakti scheme and CM Siddaramaiah

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಕಾರಣವಾಗಿರುವ ಗ್ಯಾರಂಟಿ ಯೋಜನೆಯಲ್ಲಿ (Congress Guarantee Scheme) “ಶಕ್ತಿ”ಗೆ (Shakti Scheme) ಭರಪೂರ ಸ್ಪಂದನೆ ಸಿಕ್ಕಿದೆ. ಮಹಿಳೆಯರು ಇದರ ಸದುಪಯೋಗವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಈಗ ಸಾರಿಗೆ ಇಲಾಖೆ ಕೊಟ್ಟ ಅಂಕಿ-ಅಂಶವೇ ಸಾಕ್ಷಿಯಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಆರಂಭಿಸಿದ್ದ ಉಚಿತ ಪ್ರಯಾಣ (Free Bus) ಸೌಲಭ್ಯ ನೀಡುವ ಶಕ್ತಿ ಯೋಜನೆಗೆ ಈಗ ಭರ್ತಿ ಮೂರು ತಿಂಗಳು. ಈವರೆಗೆ ನಿರೀಕ್ಷೆಗೂ ಮೀರಿ ಮಹಿಳೆಯರು ಓಡಾಟ ನಡೆಸಿದ್ದಾರೆ. ಒಟ್ಟು 1,352 ಕೋಟಿ ರೂಪಾಯಿಯಷ್ಟು ಟಿಕೆಟ್‌‌ ಮೌಲ್ಯದಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ.

ಸರ್ಕಾರದ ಶಕ್ತಿ ಯೋಜನೆಗೆ ಭರ್ತಿ ಮೂರು ತಿಂಗಳು

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಅಂದರೆ, ಜೂನ್‌ 11 ರಂದು ಶಕ್ತಿ ಯೋಜನೆಯನ್ನು ಆರಂಭಿಸಿತ್ತು. ಸದ್ಯ ಈ ಯೋಜನೆಯು ಸೆಪ್ಟೆಂಬರ್‌ 11ಕ್ಕೆ ಮೂರು ತಿಂಗಳು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ 58 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 1352 ಕೋಟಿ ರೂಪಾಯಿ ಮೌಲ್ಯದ ಉಚಿತ ಟಿಕೆಟ್‌ ವಿತರಣೆ ಮಾಡಲಾಗಿದೆ.

ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿದ ಭರ್ಜರಿ ಸ್ಪಂದನೆ

ರಾಜ್ಯ ಸರ್ಕಾರವು ಶಕ್ತಿ ಯೋಜನೆಗೆ ಈ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತದೆ ಎಂದು ಭಾವಿಸಿರಲಿಲ್ಲ. ಹೇಗೂ ಸಂಚಾರ ಮಾಡುವ ಜನರಿಗೆ ಟಿಕೆಟ್‌ ಅನ್ನು ಉಚಿತವಾಗಿ ನೀಡಬಹುದು ಎಂದು ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಎಲ್ಲಿ ಸಂಚಾರ ಮಾಡಿದರೂ ಉಚಿತ ಎಂದು ಹೇಳಿತ್ತು. ಈ ಯೋಜನೆ ಜಾರಿಗೆ ಬರುತ್ತಿದ್ದಂತೆ, ವೀಕೆಂಡ್‌ ಸೇರಿದಂತೆ ಇನ್ನಿತರ ರಜಾ ದಿನಗಳಲ್ಲಿ ಮಹಿಳೆಯರು ಧಾರ್ಮಿಕ ಕ್ಷೇತ್ರ, ಪ್ರವಾಸಿ ಕ್ಷೇತ್ರ ಸೇರಿದಂತೆ ಹಲವು ಕಡೆ ಪ್ರಯಾಣ ಮಾಡಿದ್ದಾರೆ. ಕೆಲವರು ತಂಡಗಳನ್ನು ಕಟ್ಟಿಕೊಂಡು ಪ್ರಯಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ನೂಕು-ನುಗ್ಗಲು ಗಲಾಟೆಗಳು ಸಹ ನಡೆದಿದ್ದವು. ಈಗ ಒಟ್ಟಾರೆ ಪ್ರಯಾಣದ ಅಂಕಿಅಂಶ ಹೊರಬಿದ್ದಿದೆ.

ಮಹಿಳೆಯರ ಪ್ರಯಾಣ ಹಾಗೂ ವೆಚ್ಚ

ಒಟ್ಟಾರೆಯಾಗಿ 1,352 ಕೋಟಿ ರೂಪಾಯಿಯಷ್ಟು ಟಿಕೆಟ್‌‌ ಮೌಲ್ಯ ಆಗಿರುವುದಾಗಿ ಸಾರಿಗೆ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Ganesha Chaturthi 2023 : ಗಣೇಶ ಚತುರ್ಥಿ ಸೆ.18ಕ್ಕೋ 19ಕ್ಕೋ?; ವಿದ್ವಾಂಸರು ಹೇಳೋದೇನು?

ಸದ್ಯ ಎಲ್ಲಾ ಗ್ಯಾರಂಟಿ ಯೋಜನೆಗಳಿಗಿಂತ ಶಕ್ತಿ ಯೋಜನೆಯ ಪ್ರದರ್ಶನ ಜೋರಿದೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಮನೆಯನ್ನೂ ತಲುಪುವ ಕಾಂಗ್ರೆಸ್ ಪ್ಲ್ಯಾನ್ ಯಶ ಕಂಡಿದೆ. ಹೀಗಾಗಿ ಇದನ್ನೇ ಮುಂದಿನ ಲೋಕಸಭಾ ಚುನಾವಣೆಯ ಅಸ್ತ್ರ ಮಾಡಿಕೊಳ್ಳಲು ಕಾಂಗ್ರೆಸ್‌ ಚಿಂತನೆಯಲ್ಲಿದೆ.

Exit mobile version