ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ನಡೆಸಿಕೊಟ್ಟ ಜನಸ್ಪಂದನ ಕಾರ್ಯಕ್ರಮದಲ್ಲಿ (Janatha Darshan) 3812 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ನೇರವಾಗಿ ಸ್ವೀಕರಿಸಲಾದ 950 ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್ ಎಚ್ಚರಿಕೆ
ವಿಶ್ವಾಸ ಉಳಿಸುವ ಪ್ರಯತ್ನ ನಮ್ಮದು: ಸಿಎಂ ಸಿದ್ದರಾಮಯ್ಯ
ಜನಸ್ಪಂದನ ಕಾರ್ಯಕ್ರಮಕ್ಕೆ ಸುಮಾರು ನಾಲ್ಕೈದು ಸಾವಿರ ಜನರು ತಮ್ಮ ಅಹವಾಲುಗಳೊಂದಿಗೆ ಆಗಮಿಸಿದ್ದು, ಜನರು ನಮ್ಮ ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಜನಸ್ಪಂದನೆ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಸುಮಾರು 3500 ಮನವಿಗಳು ಸ್ವೀಕೃತವಾಗಿದೆ. ನಾನು ಬೆಳಗ್ಗೆಯಿಂದಲೇ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಖುದ್ದು ಆಲಿಸಿದ್ದೇನೆ. ಸ್ವೀಕೃತವಾಗಿರುವ ಎಲ್ಲ ಅರ್ಜಿಗಳ ಬಗ್ಗೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಲು ಸೂಚನೆ
ಇಂದಿನ ಜನಸ್ಪಂದನಕ್ಕೆ ಉದ್ಯೋಗ ಬೇಡಿಕೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಆಗಮಿಸಿದ್ದು, ಸಾಧ್ಯವಾದ ಕಡೆಗಳಲ್ಲಿ ಉದ್ಯೋಗ ಹಾಗೂ ಮಾಸಾಶನ ಒದಗಿಸಲು ಸೂಚನೆ ನೀಡಲಾಗಿದೆ. ಜಿಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳು ಸ್ಥಳೀಯವಾಗಿ ಜನರ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಲಾಗಿದೆ. ಮೂರು ತಿಂಗಳ ನಂತರ ಮತ್ತೊಮ್ಮೆ ಜನಸ್ಪಂದನ ನಡೆಸಲಾಗುವುದು. ಆಗ ಈ ಪ್ರಮಾಣದಲ್ಲಿ ಜನರು ತಮ್ಮ ಸಮಸ್ಯೆಗಳೊಂದಿಗೆ ಬರದಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜನರ ಆರೋಗ್ಯ ವೆಚ್ಚಕ್ಕೆ 25 ಕೋಟಿ ರೂ. ಬಿಡುಗಡೆ
ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ವೈದ್ಯಕೀಯ ವೆಚ್ಚ ಭರಿಸುವ ಮನವಿಗಳು ಹೆಚ್ಚು ಸ್ವೀಕೃತವಾಗಿವೆ. ನಾನು ಮುಖ್ಯಮಂತ್ರಿಯಾದ ನಂತರ ಜನರ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಸುಮಾರು 25 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭಿಸುತ್ತದೆ ಎಂಬ ನಂಬಿಕೆಯಿಂದ ಜನರು ಸರ್ಕಾರಿ ಆಸ್ಪತ್ರೆ ಬಿಟ್ಟು, ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುವ ಕಾರಣ, ಅವರ ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತವೆ. ಆ ವೆಚ್ಚದಲ್ಲಿ ಸಣ್ಣ ಪ್ರಮಾಣವನ್ನು ಸರ್ಕಾರ ಈ ರೀತಿ ಭರಿಸಲು ಪ್ರಯತ್ನಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಚಿವರ ಜನತಾ ದರ್ಶನ
ಸಚಿವರು ಜನತಾ ದರ್ಶನ ಸಮರ್ಪಕವಾಗಿ ಮಾಡುತ್ತಿಲ್ಲವೇಕೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲ ಸಚಿವರೂ ಜನತಾ ದರ್ಶನ ಮಾಡಿದ್ದು, ಕಾರ್ಯಕ್ರಮ ನಡೆಸಿದ ಬಗ್ಗೆ ವರದಿ ನೀಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಕ್ಕಳ ಪೌಷ್ಟಿಕಾಂಶ
ಮಕ್ಕಳ ಪೌಷ್ಟಿಕಾಂಶ ಸಮಸ್ಯೆಗಳ ಬಗ್ಗೆ ಇಂದು ಅಹವಾಲುಗಳ ಬಂದಿರುವ ಬಗ್ಗೆ ಉತ್ತರಿಸಿ, ಮಕ್ಕಳ ಪೌಷ್ಟಿಕಾಂಶ ವೃದ್ಧಿಸುವ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ 185 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಅನಿಮಿಯಾ ಇರುವ ಮಕ್ಕಳಿಗೆ ಔಷಧಿ, ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ, ಪ್ರತಿ ದಿನವೂ ಹಾಲು, ಬಿಸಿಯೂಟಗಳನ್ನು ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ಭ್ರೂಣ ಹತ್ಯೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಭ್ರೂಣ ಹತ್ಯೆ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ, ಈ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪಡಿತರ ಅಕ್ಕಿ ಕಳವು
ಯಾದಗಿರಿಯಲ್ಲಿ ಪಡಿತರ ಅಕ್ಕಿ ಕಳವು ಹಗರಣ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜಿಲ್ಲೆಯಲ್ಲಿ ಅಕ್ಕಿ ಕಳವು ನಡೆದಿದ್ದರೆ, ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದರು.
ಇದನ್ನೂ ಓದಿ: Janatha Darshan : ರೈತರ ಸಮಸ್ಯೆಗೆ ಪರಿಹಾರದ ದರ್ಶನ ನೀಡಿದ ಸಿಎಂ ಸಿದ್ದರಾಮಯ್ಯ!
ಹೆಚ್ಚುವರಿ ಬಸ್‌ಗಳಿಗೆ ವ್ಯವಸ್ಥೆ
ಶಕ್ತಿ ಯೋಜನೆ ಯಶಸ್ವಿಯಾದರೂ, ಬಸ್ ಕೊರತೆಯಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ 971 ಬಸ್‌ಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ. ಅಗತ್ಯವಿರುವೆಡೆ ಹೆಚ್ಚು ಬಸ್‌ಗಳನ್ನು ಹಾಕಲು ತಿಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.