ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress Karnataka) ಈಗ ಲೋಕಸಭಾ ಚುನಾವಣಾ (Lok Sabha Election 2024) ತಯಾರಿ ನಡೆಸುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರಗಳನ್ನು ಗೆದ್ದು ಬೀಗಿರುವ ಕಾಂಗ್ರೆಸ್ಗೆ ಲೋಕಸಭೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಗ್ಯಾರಂಟಿ ಯೋಜನೆಯು (Congress Guarantee Scheme) ಎಷ್ಟರ ಮಟ್ಟಿಗೆ “ಜಯದ ಗ್ಯಾರಂಟಿ” ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಸ್ಪಷ್ಟ ಚಿತ್ರಣ ನೀಡಿದ್ದಾರೆ. ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಷರಾ ಬರೆದಿದ್ದಾರೆ. ಇನ್ನು 4.30 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ (Guaranteed Smart Card) ಕೊಡಲು ನಿರ್ಧಾರ ಮಾಡಲಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಇದರ ಸಂಪೂರ್ಣ ಲಾಭ ಪಡೆಯುವ ತೀರ್ಮಾನಕ್ಕೆ ಬರಲಾಗಿದೆ.
ರಾಜ್ಯ ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಕೆಲವು ಟಾಸ್ಕ್ಗಳನ್ನು ನೀಡಿದ್ದಾರೆ. ಲೋಕಸಭೆಯನ್ನು ಗೆಲ್ಲಲು ಏನೆಲ್ಲ ಮಾಡಬೇಕು ಎಂದು ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಸುರ್ಜೇವಾಲ ಯಾವೆಲ್ಲ ಟಾಸ್ಕ್ ನೀಡಿದ್ದಾರೆಂಬ ಮಾಹಿತಿ “ವಿಸ್ತಾರ ನ್ಯೂಸ್”ಗೆ ಲಭ್ಯವಾಗಿದೆ.
ಏನೆಲ್ಲ ಟಾಸ್ಕ್?
- 4.30 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಸ್ಮಾರ್ಟ್ ಕಾರ್ಡ್ ಕೊಡಲು ನಿರ್ಧಾರ. ಈ ಸ್ಮಾರ್ಟ್ ಕಾರ್ಡ್ ವಿತರಣೆ ಜವಾಬ್ದಾರಿ ಅನುಷ್ಠಾನ ಸಮಿತಿ ಹೆಗಲಿಗೆ
- ಮೂರೇ ವಾರದಲ್ಲಿ ಗ್ಯಾರಂಟಿ ಅನುಷ್ಠಾನ ಸಹಿತ ಎಲ್ಲ ಇಲಾಖೆಗಳ ಸಮಿತಿಗಳಿಗೆ ನೇಮಕ. ಇದರಲ್ಲಿ ಒಟ್ಟಾರೆ ಐದು ಸಾವಿರ ಕಾರ್ಯಕರ್ತರಿಗೆ ಅವಕಾಶ ಕೊಡುವುದು
- ಆಡಳಿತ ಪಕ್ಷದ ಶಾಸಕರಿಗೆ 25 ಕೋಟಿ ರೂ. ವಿಶೇಷ ಅನುದಾನ. ಇದಕ್ಕೆ ಕ್ರಿಯಾಯೋಜನೆ ರೂಪಿಸಲು ಸೂಚನೆ
- ಲೋಕಸಭೆ ಚುನಾವಣೆ ಬಳಿಕ ಪ್ರತಿ ಶಾಸಕರು, ಸಚಿವರ ಮೌಲ್ಯಮಾಪನಕ್ಕೆ ನಿರ್ಧಾರ
- ಎರಡು ವರ್ಷದ ಬಳಿಕ ನಿಗಮ ಮಂಡಳಿಗೆ ನೇಮಕ ಬದಲಿಸಬೇಕು
- ಕೆಪಿಸಿಯಿಂದ ಗ್ಯಾರಂಟಿ ಬಗ್ಗೆ ಮಾಹಿತಿ ಇರುವ ಕರಪತ್ರ ಮಾಡಿ ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು. ಇದನ್ನು ಸರ್ಕಾರ ಸಿದ್ಧಪಡಿಸಬೇಕು. ಅನುಷ್ಠಾನ ಸಮಿತಿ ಮೂಲಕ ವಿತರಣೆ ಮಾಡಬೇಕು
- ಜಿಲ್ಲೆಗಳಲ್ಲಿ ಕ್ರಿಯಾಶೀಲ ಆಗಿರುವ ಮೂವರು ಕಾರ್ಯಕರ್ತರನ್ನು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಬೇಕು. ಈ ವಕ್ತಾರರು ಹದಿನೈದು ದಿನಗಳಿಗೊಮ್ಮೆ ಸುದ್ದಿಗೋಷ್ಠಿ ನಡೆಸಬೇಕು
- ಉಸ್ತುವಾರಿ ಸಚಿವರು ತಿಂಗಳಲ್ಲಿ ಎರಡು ಬಾರಿ ಡಿಸಿಸಿ ಕಚೇರಿಗೆ ಬರಲೇಬೇಕು
- ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಯಲ್ಲಿ ಸಚಿವರು ಹಾಜರಿರಲೇಬೇಕು. ಇಲ್ಲಿ ಕಾರ್ಯಕರ್ತರಿಗೆ ಸ್ಪಂದಿಸಬೇಕು
ಇದನ್ನೂ ಓದಿ: BJP Karnataka: ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಕಾರ್ಯತಂತ್ರ; ಕ್ಷೇತ್ರವಾರು ಸಭೆಯಲ್ಲಿ ಬಿಜೆಪಿ ನಿರ್ಧಾರ
ಆಂತರಿಕ ಕಚ್ಚಾಟ ಬಿಡಿ, ಪಕ್ಷಕ್ಕಾಗಿ ದುಡಿಯಿರಿ
ಪ್ರತಿಯೊಬ್ಬ ಸಚಿವರು ಸೇರಿದಂತೆ ಜವಾಬ್ದಾರಿಯನ್ನು ಪಡೆದವರು ತಮ್ಮ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಒಟ್ಟಾರೆಯಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕು. ಆಂತರಿಕ ಕಿತ್ತಾಟಗಳಿಗೆ ತಿಲಾಂಜಲಿ ಹಾಡಬೇಕು. ಈಗ ಎಲ್ಲರ ಗುರಿಗಳೂ ಒಂದೇ ಆಗಿದ್ದು, ಅದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಎಂಬುದು ಮಾತ್ರವೇ ಆಗಿರಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಅವರು ಖಡಕ್ ಸೂಚನೆಯನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.