Site icon Vistara News

40 per cent commission: ಸಿದ್ದರಾಮಯ್ಯ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯುತ್ತಿದೆ: ಬಿ.ವೈ. ವಿಜಯೇಂದ್ರ

BY Vijayendra

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ವಿರುದ್ಧ ಅದೇ ಪಕ್ಷದ ಮುಖಂಡ, ಮಾಜಿ ಸಚಿವ ಬಿ. ಶಿವರಾಂ (B Shivaram) ಮಾಡಿರುವ 40 ಪರ್ಸೆಂಟ್‌ ಕಮಿಷನ್‌ (40 per cent commission) ಆರೋಪವು ಈಗ ಕೈಪಡೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಸಂಬಂಧ ಪ್ರತಿಪಕ್ಷ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಕಿಡಿಕಾರಿದ್ದು, ಈ ಸರ್ಕಾರವನ್ನು ಕಿತ್ತೊಗೆಯುವುದೊಂದೇ ಈಗಿರುವ ಮಾರ್ಗ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಮೇಲೆ ಕೇಳಿಬಂದಿರುವ 40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆ ಟ್ವೀಟ್‌ ಮಾಡಿರುವ ಬಿ.ವೈ. ವಿಜಯೇಂದ್ರ, ಸಿದ್ದರಾಮಯ್ಯ ಅವರ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯಲು ಹೊರಟಂತಿದೆ ಎಂದು ಟೀಕಿಸಿದ್ದಾರೆ.

ಬಿ.ವೈ. ವಿಜಯೇಂದ್ರ ಟ್ವೀಟ್‌ನಲ್ಲೇನಿದೆ?

“ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಾಗಿಲು ತೆರೆದು ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ವ್ಯವಹಾರವನ್ನು ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಬಯಲು ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಮೇಲೆ ಹೊರಿಸಿದ್ದ ಆಧಾರ ರಹಿತ 40% ಆರೋಪವನ್ನು ಮೀರಿಸಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ ಎನ್ನುವುದನ್ನು ಬಿ. ಶಿವರಾಂ ಅವರು ಮಾಧ್ಯಮಗೋಷ್ಠಿ ಕರೆದು ಸಾಕ್ಷೀಕರಿಸಿದ್ದಾರೆ, ಸ್ವತಃ ಕಾಂಗ್ರೆಸ್ಸಿಗರೇ ಈ ಮಟ್ಟದಲ್ಲಿ ರೋಸಿ ಹೋಗಿದ್ದಾರೆಂದರೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕಡು ಭ್ರಷ್ಟತೆಗೆ ಹೊಸ ಇತಿಹಾಸ ಬರೆಯಲು ಹೊರಟಂತಿದೆ.

ಅಭಿವೃದ್ಧಿ, ಜನಕಲ್ಯಾಣ ಕಾರ್ಯಗಳನ್ನು ಸಂಪೂರ್ಣವಾಗಿ ಮರೆತಿರುವ ಕಾಂಗ್ರೆಸ್ ಸರ್ಕಾರ ಎಲ್ಲೆಂದರಲ್ಲಿ ಭ್ರಷ್ಟಾಚಾರದ ಅಂಗಡಿಗಳನ್ನು ತೆರೆಯುವುದರ ಜತೆಗೆ ಹೆಜ್ಜೆ ಹೆಜ್ಜೆಗೂ ಎಟಿಎಂ (ATM) ಮಾದರಿ ಕಮಿಷನ್ ಕೌಂಟರ್‌ಗಳನ್ನೂ ತೆರೆದು ಕುಳಿತಿದೆ. ಈ ಸರ್ಕಾರವನ್ನು ಕಿತ್ತೊಗೆಯುವುದೊಂದೇ ಜನರಿಗಿರುವ ಮಾರ್ಗವಾಗಿದೆ” ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಶಿವರಾಂ ಮಾಡಿದ್ದ ಆರೋಪ ಏನು?

ಹಾಸನ: ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ (Congress Karnataka) ಆರೋಪ ಮಾಡಿದ್ದ 40 ಪರ್ಸೆಂಟ್‌ ಕಮಿಷನ್‌ (40 per cent commission) ಆರೋಪ ಈಗ ಕೈಪಡೆಗೆ ತಿರುಗುಬಾಣವಾಗಿದೆ. ಅವರದ್ದೇ ಪಕ್ಷದ ಮುಖಂಡ, ಮಾಜಿ ಸಚಿವ ಬಿ. ಶಿವರಾಂ (B Shivaram) ಅವರು ಗುರುವಾರ (ಫೆ.1) ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್‌ ಸರ್ಕಾರದಲ್ಲಿ ಶೇ. 40ಕ್ಕಿಂತ ಹೆಚ್ಚಿನ ಕಮಿಷನ್‌ ಪಡೆಯಲಾಗುತ್ತಿದೆ ಎಂದು ನೇರವಾಗಿ ಆರೋಪ ಮಾಡಿದ್ದರು.

ಈ ಬಗ್ಗೆ ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿ. ಶಿವರಾಂ, ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ ವಿರುದ್ಧ ಶೇ. 40ರಷ್ಟು ಕಮಿಷನ್‌ ಆರೋಪವನ್ನು ಮಾಡಿದ್ದೆವು. ಆದರೆ, ಈಗ ಅದಕ್ಕಿಂತ ಹೆಚ್ಚಾಗಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ರಾಜ್ಯದಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕುವ ಅವಶ್ಯಕತೆ ಇದೆ. ಈ ಸಂಬಂಧ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಳಿ ಮನವಿ ಮಾಡಿದ್ದೆ. ಆಗ ಹಾಸನ ಉಸ್ತುವಾರಿ ಸಚಿವರು ಎದುರು ಇದ್ದರು ಎಂದು ಬಿ. ಶಿವರಾಂ ಹೇಳಿದ್ದರು.

ಜಿಪಂ ಅನುದಾನದ ಬಗ್ಗೆ ಅಸಮಾಧಾನ

ಹಾಸನ‌ ಜಿಲ್ಲಾ ಪಂಚಾಯಿತಿಗೆ 13 ಕೋಟಿ ಅನುದಾನ ಬಂದಿದೆ. ಈ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯ ಮಾಡಲಾಗಿದೆ. ಈ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಎಂದು ಹೇಳಲಾಗುತ್ತಿದೆ. ಕೇವಲ 50 ಸಾವಿರ ರೂಪಾಯಿ ಇರುವ ಸಚಿವರ ಸಮುದಾಯಕ್ಕೆ ಎರಡೂವರೆ ಕೋಟಿ ಅನುದಾನವಂತೆ ಎಂದು ಕಿಡಿಕಾರಿರುವ ಬಿ. ಶಿವರಾಂ, ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಇರುವ ಪರಿಶಿಷ್ಟ ಸಮುದಾಯಕ್ಕೆ ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡ ಅವರಿಗೆ ಮೂರು ಕೋಟಿ ಅನುದಾನ ಕೊಟ್ಟಿದ್ದಾರೆ. ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಮುಖ್ಯಮಂತ್ರಿ ಅವರ ಸಮ್ಮುಖದಲ್ಲೇ ಬೆಳಗಾವಿಯಲ್ಲಿ ಹೇಳಿದ್ದೆವು. ಆದರೆ ಸಿಎಂ ಮೌನವಾಗಿಯೇ ಇದ್ದರು. ನಮ್ಮ ಸಚಿವರ ಬೆನ್ನು ತಟ್ಟಿ ಸರಿ ಮಾಡ್ಕೊಂಡು ಹೋಗು ಎಂದರು ಎಂದು ಶಿವರಾಂ ಆರೋಪಿಸಿದ್ದರು.

ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಎಂದು ಆರೋಪ ಮಾಡಿ ಅಧಿಕಾರಕ್ಕೆ‌ ಬಂದಿದ್ದೇವೆ. ಆದರೆ, ಈಗ ಅದಕ್ಕಿಂತ ಜಾಸ್ತಿಯಾಗಿದೆ. ಇದಕ್ಕೆ ಕಡಿವಾಣ ಹಾಕಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ನೇರವಾಗಿ ಹೇಳುತ್ತೇನೆ ಎಂದು ಬಿ. ಶಿವರಾಂ ಹೇಳಿದ್ದರು.

ಇದನ್ನೂ ಓದಿ: Lok Sabha Election 2024: ಲೋಕಸಭೆಗೆ ಸ್ಪರ್ಧಿಸಲ್ಲ, ನಾನು ಫುಟ್ಬಾಲ್‌ ಅಲ್ಲ; ಹೈಕಮಾಂಡ್‌ಗೆ ಪ್ರಕಾಶ್‌ ಹುಕ್ಕೇರಿ ವಾರ್ನಿಂಗ್‌!

ಮಾಜಿ ಶಾಸಕ ಬಿ. ಶಿವರಾಂಗೆ ಡಿಕೆಶಿ ವಾರ್ನಿಂಗ್

ಈ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗರಂ ಆಗಿದ್ದು, ಏನೇ ಇದ್ದರೂ ಪಕ್ಷದ ಒಳಗೆ ಮಾತನಾಡಬೇಕು. ಹೀಗೆ ಹೊರಗೆ ಮಾಧ್ಯಮದ ಮುಂದೆ ಹೋಗಿ ಮಾತನಾಡಿದರೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬೇಕಾದೀತು. ನಾನು ಈ ಬಗ್ಗೆ ಶಿವರಾಂಗೆ ವಾರ್ನ್‌ ಮಾಡುತ್ತಿದ್ದೇನೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.

Exit mobile version