ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ, ವಿವಿಧ ಜಾತಿ ಸಮುದಾಯಗಳನ್ನು ಓಲೈಸುವ ರಾಜಕಾರಣಕ್ಕೆ ಸಣ್ಣದಾಗಿ ಚಾಲನೆ ಸಿಕ್ಕಿದೆ. ರಾಜ್ಯದಲ್ಲಿ ಪ್ರಬಲವಾಗಿರುವ ಹಾಗೂ ರಾಜಕೀಯವಾಗಿಯ ಸಾಕಷ್ಟು ಸಕ್ರಿಯರಾಗಿರುವ ವೀರಶೈವ ಲಿಂಗಾಯತ ಸಮುದಾಯವನ್ನು ತಮ್ಮಲ್ಲೆ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ ಅತ್ತ ಸಮುದಾಯ ತನ್ನಿಂದ ಸಂಪೂರ್ಣ ತೊರೆಯದಂತೆ ಕಾಪಾಡಿಕೊಳ್ಳಲು ಹರಸಾಹಸ ಮಾಡುತ್ತಿದೆ.
ಅಮಿತ್ ಷಾ ಪ್ರವಾಸ
ಏಪ್ರಿಲ್ ಒಂದರಂದು ತುಮಕೂರಿನಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಅತ್ಯಂತ ವೈಭವಯುತವಾಗಿ ಆಯೋಜಿಸಲಾಗುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮಿಸಲಿದ್ದಾರೆ. (ಅಮಿತ್ ಷಾ ಆಗಮನದ ಕುರಿತ ಸುದ್ದಿಗಾಗಿ ಕ್ಲಿಕ್ ಮಾಡಿ). ಸುಮಾರು ಎರಡು ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿರುವ ಈ ಕಾರ್ಯಕ್ರಮದ ಹೊಣೆಯನ್ನು ಮಾಜಿ ಮುಖ್ಯಮಂತ್ರಿ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಸದ್ಯಕ್ಕಂತೂ ಪ್ರಶ್ನಾತೀತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೊತ್ತಿದ್ದಾರೆ. 2018ರ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಸರ್ಕಾರ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬೆಂಬಲ ನೀಡಿದಾಗ ಸಿದ್ಧಗಂಗಾ ಮಠಾಧೀಶರು ಸೇರಿ ನಾಡಿನ ಪ್ರಮುಖ ವೀರಶೈವ ಲಿಂಗಾಯತ ಮಠಗಳು ವಿರೋಧ ವ್ಯಕ್ತಪಡಿಸಿದ್ದವು. ಆ ಸಂದರ್ಭದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ನಿಲುವು ಬಹಳ ಮುಖ್ಯವಾಗಿತ್ತು. ಮಠದ ಕುರಿತು ತನ್ನ ಬದ್ಧತೆಯನ್ನು ಪುನಃ ಖಾತ್ರಿಗೊಳಿಸುವುದರ ಜತೆಗೆ ಬಿಎಸ್‌ವೈ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನೂ ನೀಡುವ ಮೂಲಕ ಸಮುದಾಯದಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಲಾಗಿದೆ.
ಒಂದು ದಿನ ಮೊದಲೇ ರಾಹುಲ್ ಗಾಂಧಿ
ಏಪ್ರಿಲ್ ಒಂದರಂದು ಬೃಹತ್ ಕಾರ್ಯಕ್ರಮದಲ್ಲಿ ಅಮಿತ್ ಷಾ ಆಗಮಿಸುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ದಿನ ಮೊದಲೇ ಅಂದರೆ ಮಾರ್ಚ್ 31ಕ್ಕೇ ಸಿದ್ಧಗಂಗಾ ಮಠಕ್ಕೆ ತೆರಳಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.(ಈ ಕುರಿತ ವಿಸ್ತೃತ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಅಮಿತ್ ಷಾ ಅವರು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ಅದರಲ್ಲಿ ರಾಹುಲ್ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕಾರ್ಯಕ್ರಮದ ನಂತರ ಮಠಕ್ಕೆ ತೆರಳಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಒಂದು ದಿನ ಮೊದಲೇ ಭೇಟಿ ನೀಡಿದರೆ ಉತ್ತಮ ಎಂದು ಕೆಪಿಸಿಸಿ ಅಧ್ಯಕ್ ಡಿ.ಕೆ. ಶಿವಕುಮಾರ್ ಹಾಗೂ ಇನ್ನಿತರೆ ಕಾಂಗ್ರೆಸ್ ನಾಯಕರ ಒತ್ತಾಸೆ ಮೇರೆಗೆ ಈ ಪ್ರವಾಸ ನಿಗದಿಯಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಎಂದಿಗೂ ಹಿಂದುತ್ವಕ್ಕೆ ವಿರುದ್ಧವಾಗಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿಯವರು ಶೃಂಗೇರಿ ಮಠದ ಭಕ್ತರಾಗಿದ್ದರು, ಸ್ವಾಮೀಜಿಯವರ ಮಾರ್ಗದರ್ಶನ ಪಡೆಯುತ್ತಿದ್ದರು. ಸೋನಿಯಾಗಾಂಧಿಯವರು 2012ರಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ 105ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದೇ ಸಂಪ್ರದಾಯವನ್ನು ರಾಹುಲ್ ಗಾಂಧಿಯವರೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಪ್ರಬಲ ಸಮುದಾಯವಾದ ವೀರಶೈವ ಲಿಂಗಾಯತರನ್ನು ತಮ್ಮಿಂದ ದೂರಾಗದಂತೆ ತಡೆಯಲು ಎರಡೂ ರಾಷ್ಟ್ರೀಯ ಪಕ್ಷಗಳು ಎಲ್ಲ ಕಸರತ್ತನ್ನು ನಡೆಸುತ್ತಿವೆ.