Site icon Vistara News

Karnataka Drought: ಬರ ಪರಿಹಾರಕ್ಕೆ ಆಧಾರ್‌ ಜೋಡಣೆ ಕುಂಟು ನೆಪ; ರೈತರ ಖಾತೆಗೆ ತಕ್ಷಣ 2000 ರೂ. ಹಾಕಿ: ಬೊಮ್ಮಾಯಿ

Former Chief Minister Basavaraj Bommai

ಬೆಂಗಳೂರು: ರಾಜ್ಯ ಸರ್ಕಾರ ಬರ (Karnataka Drought) ಪರಿಹಾರ ನೀಡಲು ಆಧಾರ ಜೋಡಣೆಯ ಕುಂಟು ನೆಪ ಹೇಳುತ್ತಿದೆ. ಈಗಾಗಲೇ ಫ್ರೂಟ್ ಸಾಫ್ಟ್‌ವೇರ್‌ನಲ್ಲಿ (Fruit software) 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸರ್ಕಾರದ ಆರ್ಥಿಕ ದುಸ್ಥಿತಿ ಮರೆ ಮಾಚಲು ತಾಂತ್ರಿಕ ಕಾರಣ ನೆಪ ಹೇಳುತ್ತಿದ್ದಾರೆ. ಸರ್ಕಾರ ತಕ್ಷಣ ರೈತರ ಖಾತೆಗಳಿಗೆ 2000 ರೂಪಾಯಿ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Former Chief Minister Basavaraj Bommai) ಆಗ್ರಹಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬರ ಅಂತ ಘೋಷಣೆ ಆಗಿದೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರವು ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿಯನ್ನು ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಯಾವುದೇ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಈಗ ಆಧಾರ್‌ ಜೋಡಣೆಯ ನೆಪ ಹೇಳಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ವರ್ಷ ಬರಗಾಲದ ಹಿನ್ನೆಲೆಯಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಲಿದೆ ಅಂತ ಕೃಷಿ ಇಲಾಖೆ ವರದಿ ಹೇಳುತ್ತಿದೆ. ಹೀಗಿದ್ದಾಗಲೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ. ಹಿಂದೆ ಎಲ್ಲ ಸರ್ಕಾರಗಳು ಕೇಂದ್ರದ ದಾರಿ ಕಾಯದೇ ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸುವ‌ ಕೆಲಸ ಮಾಡುತ್ತಿದ್ದವು. ಬೆಳಗಾವಿ ಅಸೆಂಬ್ಲಿ ಅಧಿವೇಶನಕ್ಕೆ ಮುಂಚೆ ರೈತರ ಬ್ಯಾಂಕ್ ಖಾತೆಗೆ ಪ್ರತಿ ಹೆಕ್ಟೇರ್‌ಗೆ 2000 ರೂ. ಹಾಕುವುದಾಗಿ ಹೇಳಿದ್ದೀರಿ, ಈಗ ಆಧಾರ ಲಿಂಕ್ ಮಾಡುವುದಾಗಿ ಹೇಳುತ್ತಿದ್ದೀರಿ. ಈಗಾಗಲೇ ಫ್ರೂಟ್ಸ್‌ ಸಾಫ್ಟ್‌ವೇರ್‌ನಲ್ಲಿ ಸುಮಾರು 69 ಲಕ್ಷ ರೈತರ ಆಧಾರ ಲಿಂಕ್ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಗುಪ್ತಚರ ಇಲಾಖೆ ವೈಫಲ್ಯ

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕರಸೇವಕರ ಕುರಿತು ನೀಡಿರುವ ಹೇಳಿಕೆಯಂತೆ ತಮ್ಮ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇದು ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಒಬ್ಬ ಎಂಎಲ್‌ಸಿಗೆ ಇರುವ ಮಾಹಿತಿ ಗೃಹ ಇಲಾಖೆಗೆ ಮಾಹಿತಿ ಇಲ್ಲ ಎಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ ಎಂದರ್ಥ. ಗೃಹ ಸಚಿವರು ಅಗತ್ಯ ಬಿದ್ದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹರಿಪ್ರಸಾದ್ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದು, ಬೇರೆಯವರು ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇವರ ಅವಧಿಯಲ್ಲಿ ಅಪರಾಧ ಪ್ರಕರಣ ಹೆಚ್ಚಾಗಿತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಅಕ್ರಮ ಸಾರಾಯಿ ದಂಧೆ, ಇಸ್ಪೀಟ್ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ರಿವೆ. ಈ ವರ್ಷ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಆದರೆ, ಅಪರಾಧ ಪತ್ತೆಹಚ್ಚುವ ಕಾರ್ಯ ಕಡಿಮೆಯಾಗಿದೆ ಎಂಬ ವರದಿ‌ ಇದೆ. ಅಂದರೆ, ಗೃಹ ಇಲಾಖೆ ಅಪರಾಧ ಪತ್ತೆ ಹಚ್ಚುವಲ್ಲಿ ಗೃಹ ಇಲಾಖೆ ವಿಫಲವಾಗಿದೆ. ಗೃಹ ಇಲಾಖೆ ಮುಖ್ಯಸ್ಥರಾಗಿ ಪರಮೇಶ್ವರ್ ಕ್ರಮ ಕೈಗೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಯಾವುದೇ ಅನುಮಾನದ ಮಾತುಗಳಿಗೆ ಉತ್ತರ ಕೊಡುವುದಿಲ್ಲ ಅಂತ ಹೇಳಿದ್ದಾರೆ. ಹರಿಪ್ರಸಾದ್ ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಅನ್ನುವುದನ್ನು ಕರೆದು ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

ಇನ್ನು ಕರಸೇವಕ ಶ್ರೀಕಾಂತ ಪೂಜಾರಿ ವಿರುದ್ಧ ಎಷ್ಟೇ ಪ್ರಕರಣ ಇರಲಿ, ಆ ಕೇಸ್‌ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ, ಈ ಸಂದರ್ಭದಲ್ಲಿ 32 ವರ್ಷಗಳ ಹಿಂದಿನ ಕರಸೇವೆಯ ಆರೋಪದ ಪ್ರಕರಣದಲ್ಲಿ ಬಂಧಿಸುವ ಉದ್ದೇಶವೇನಿತ್ತು? ಹುಬ್ಬಳ್ಳಿಯಲ್ಲಿ ಗಡಿ ಪಾರ್ ಆದವರು ಇದ್ದಾರೆ. ಇವರೊಬ್ಬರ ಮೇಲೆ ಏಕೆ ಈ ಸಂದರ್ಭದಲ್ಲಿ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಆರೋಪಿಗಳ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಹರಿಪ್ರಸಾದ್ ಮೇಲೆ ನಂಬಿಕೆ ಇಲ್ಲ. ಆದರೆ, ವಿತಂಡ ವಾದ ಮಾಡುವುದೇ ಅವರ ಸ್ವಭಾವ‌ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್ ನಿಂದ ರಾಜಕಾರಣ

ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಹಿಂದು – ಮುಸ್ಲಿಮರು ಸೇರಿದಂತೆ ಯಾವುದೇ ಸಾಮಾನ್ಯ ಜನರು ರಾಜಕಾರಣ ಮಾಡುತ್ತಿಲ್ಲ.‌ ತಲೆ‌ಕೆಡಿಸಿಕೊಂಡಿಲ್ಲ. ಕಾಂಗ್ರೆಸ್‌ನವರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಕೇವಲ ಪ್ರಧಾನಿ ಮೋದಿ ಒಬ್ಬರೇ ಹೋಗುತ್ತಿಲ್ಲ. ರಾಮ ಮಂದಿರಕ್ಕಾಗಿ ಯಾರು ಸೇವೆ, ಸಹಾಯ ಮಾಡಿದ್ದಾರೊ ಅವರನ್ನು ರಾಮ ಮಂದಿರ ಸಮಿತಿಯವರು ಕರೆದಿದ್ದಾರೆ. ಕಾಂಗ್ರೆಸ್‌ನವರು ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: BJP Karnataka: ರಾಜ್ಯ ಬಿಜೆಪಿ ವಕ್ತಾರರಾಗಿ ಹರಿಪ್ರಕಾಶ್‌ ಕೋಣೆಮನೆ ನೇಮಕ

ಗುಜರಾತಿನ ಸೋಮನಾಥ ಮಂದಿರ ಉದ್ಘಾಟನೆಗೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಭಾಗವಹಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೋಮನಾಥ ಮಂದಿರ ಅತ್ಯಂತ ಅದ್ಭುತ ಮಂದಿರ ಆಗಿನ ಪ್ರಧಾನಿ ಜವಾಹರ ಲಾಲ್ ನೆಹರು ಹೋಗಿರಲಿಲ್ಲ. ಹಾಗಾಗಿ ಗೃಹ ಸಚಿವರಾಗಿದ್ದ ವಲ್ಲಭಬಾಯಿ ಪಟೇಲರು ಹೋಗಿದ್ದರು. ಈಗಿನ ಪ್ರಧಾನಿಗಳು ಆಸ್ತಿಕರಿದ್ದಾರೆ. ರಾಮನ ಭಕ್ತರಿದ್ದಾರೆ‌. ಹೀಗಾಗಿ ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Exit mobile version