Site icon Vistara News

Chandrayaana 3 : ಎಲ್ಲಿದೆ ಚಂದ್ರಯಾನ ಸಂಭ್ರಮ; ಮಣಿಪುರ ನೆನೆದು ನಟ ಕಿಶೋರ್‌ ರೋದನ

Kishor criticises PM Narendra Modi over Chandrayaan-3 celebrations

ಬೆಂಗಳೂರು: ಚಂದ್ರಯಾನ 3 (Chandrayaana 3) ಯಶಸ್ಸಿಗೆ ಇಡೀ ದೇಶವೇ ಸಂಭ್ರಮ ವ್ಯಕ್ತಪಡಿಸುತ್ತಿದೆ. ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದರೂ (South Africa tour) ವಿಡಿಯೊ ಸ್ಕ್ರೀನ್‌ ಮೂಲಕ ಲೈವ್‌ ಆಗಿ ಲ್ಯಾಂಡಿಂಗ್‌ ದೃಶ್ಯವನ್ನು ಕಣ್ತುಂಬಿಕೊಂಡಿದ್ದಲ್ಲದೆ, ಇಸ್ರೋ ತಂಡವನ್ನು ಹಾಡಿಹೊಗಳಿದ್ದರು. ಅಲ್ಲದೆ, ಅಲ್ಲಿಂದ ನೇರವಾಗಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಈ ಮಧ್ಯೆ ನಟ ಕಿಶೋರ್‌ (Actor Kishore) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ (Instagram post) ಇಸ್ರೋ ಸಾಧನೆಯನ್ನು ಹೊಗಳುತ್ತಲೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜಕೀಯ ವ್ಯವಸ್ಥೆಯನ್ನು ತಮ್ಮ ಕಟು ಶಬ್ದಗಳಿಂದ ಟೀಕಿಸಿದ್ದಾರೆ. ನಟ ಪ್ರಕಾಶ್‌ ರಾಜ್‌ (Actor Prakash Raj) ಟೀಕೆ ಬೆನ್ನಲ್ಲೇ ಈಗ ಕಿಶೋರ್‌ ಸಹ ಅದೇ ಹಾದಿಯನ್ನು ಹಿಡಿದಿರುವುದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ಕಿಶೋರ್‌ ಹೇಳಿದ್ದೇನು?

“ಚಂದ್ರನ ದಕ್ಷಿಣ ದ್ರುವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ. ಹೆಮ್ಮೆಯಿದೆ, ಎದೆ ಬೀಗಿದೆ. ಆದರೆ..

ಇದನ್ನೂ ಓದಿ: Operation Hasta : ಕಾಂಗ್ರೆಸ್‌ ಸೇರಿದ ಆಯನೂರು ಮಂಜುನಾಥ್‌, ನಾಗರಾಜಗೌಡ; ಜಿಲ್ಲಾ ನಾಯಕರ ಸೇರ್ಪಡೆಗೆ ಡಿಕೆಶಿ ಕರೆ

ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ, ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ. ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ, ಹಿಂದು – ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ. ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ – ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ, ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಾಶ್ಮೀರದ ಜನತೆಯ ಚಿತ್ರ, ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ, ಹೀಗೇ ನೂರಾರು.

ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೇ? ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು???” ಎಂಬುದಾಗಿ ಕಿಶೋರ್‌ ಬರೆದುಕೊಂಡಿದ್ದಾರೆ.

ಟೀಕೆಗಳ ಸುರಿಮಳೆ

ಕಿಶೋರ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಈ ಅನಿಸಿಕೆಯನ್ನು ಪೋಸ್ಟ್‌ ಮಾಡುತ್ತಿದ್ದಂತೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಹಲವಾರು ಮಂದಿ ಕಿಶೋರ್‌ ಪೋಸ್ಟ್‌ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ.

“ಇಡೀ ಜಗತ್ತು ಚಂದ್ರಯಾನ 3ರ ಯಶಸ್ಸನ್ನು ಸಂಭ್ರಮಿಸುತ್ತಿರುವಾಗ ನಿಮ್ಮಂತಹ ಕೆಲವರು ಸಮಸ್ಯೆಗಳನ್ನು ಇದರೊಂದಿಗೆ ಜೋಡಿಸುತ್ತಾರೆ. ಮಾನವೀಯತೆ ಅಥವಾ ಅನುಭೂತಿಯ ವಿಷಯಕ್ಕೆ ಬಂದಾಗ ನಾನು ಅದರ ಪರವಾಗಿ ನಿಲ್ಲುತ್ತೇನೆ. ಉತ್ತರ ಪ್ರದೇಶದ ಗುಂಡಾಗಳು ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದಾಗ. ಬುಲ್ಡೋಜರ್ ಬಾಬಾ ಅವರ ಮೇಲೆ ಕ್ರಮ ಕೈಗೊಂಡರು. ನೀವು ಮಾನವೀಯತೆಯ ಬಗ್ಗೆ ಮಾತನಾಡುತ್ತೀರಿ. ಆದರೆ, ಅದರ ಹಿಂದಿನ ಕರುಣಾಜನಕ ಸ್ಥಿತಿಯ ಭಾಗವಾದ ಮೃತ ಮಹಿಳೆಯರ ಬಗ್ಗೆ ಮಾತನಾಡಲಿಲ್ಲ” ಎಂದು ಗಣೇಶ್‌ ಹೆಗಡೆ ಎಂಬುವವರು ಕಮೆಂಟ್‌ ಮಾಡಿದ್ದಾರೆ.

“ಜನರು ವೈಜ್ಞಾನಿಕ ಸಾಧನೆಯ ಯಶಸ್ಸನ್ನು ಆಚರಿಸುತ್ತಿರುವಾಗ ಯಾವುದೇ ಪ್ರಯೋಜನವಿಲ್ಲದ ಕೆಲವು ನಟರು ಭಾರತದ ಬಗ್ಗೆ ಕಮೆಂಟ್ ಮಾಡುತ್ತಾರೆ” ಎಂದು ವಿಜಯ್‌ಕುಮಾರ್‌ ಎಂಬುವವರು ಕಮೆಂಟ್‌ ಮಾಡಿದ್ದರೆ, “ಇವರು ಮತ್ತೊಬ್ಬ ಪ್ರಕಾಶ್‌ ರಾಜ್‌ ಇರಬೇಕು” ಎಂದು ಅವಿನಾಶ್‌ ಗೌಡ ಎಂಬುವವರು ಟೀಕಿಸಿದ್ದಾರೆ. ಹೀಗೆ ಹಲವರು ಕಿಶೋರ್‌ ನಡೆಯನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: Chandrayaan 3: ನಾಳೆ ದಕ್ಷಿಣ ಆಫ್ರಿಕದಿಂದ ನೇರ ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಲಿರುವ ಪ್ರಧಾನಿ ಮೋದಿ; 1 ಕಿಮೀ ರೋಡ್‌ ಶೋ!

ಅದೇ ರೀತಿ ಕಿಶೋರ್‌ ಅವರನ್ನು ಬೆಂಬಲಿಸಿಯೂ ಕೆಲವರು ಕಮೆಂಟ್‌ ಮಾಡಿದ್ದಾರೆ. ಶಶಿಕುಮಾರ್‌ ಎಂಬುವವರು ಕಮೆಂಟ್‌ ಮಾಡಿ, “ಸತ್ಯವಾದ ಮಾತುಗಳು. ಆದರೆ ಇಲ್ಲಿ ಅದಕ್ಕೆ ಬೆಲೆ ಇಲ್ಲದಾಂತವಾಗಿದೆ ಏಕೆಂದರೆ ನಮ್ಮ ದೇಶದ ರಾಜಕಾರಣಿಗಳ ಪ್ರಭಾವದಿಂದ ಎಲ್ಲವೂ ಸುಳ್ಳಾಗಿದೆ. ಉದಾಹರಣೆಗೆ ಮಣಿಪುರದಲ್ಲಿ ನನ್ನ ದೇಶದ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ಮಾಡುವಾಗ ಕಂಡರೂ ಕಾಣದಂತೆ ಇರುವ ದೇಶ ನನ್ನದು” ಎಂದು ಹೇಳಿದ್ದಾರೆ.

Exit mobile version