Site icon Vistara News

‌CM Siddaramaiah : ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್; ಸೆಡ್ಡು ಹೊಡೆದ ಬಿ.ಕೆ. ಹರಿಪ್ರಸಾದ್!

BK Hariprasad And CM siddaramaiah regarding ahinda clash

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯ ರಾಜಕೀಯದಲ್ಲಿ (Karnataka Politics) ಎಲ್ಲವೂ ಸರಿಯಾಗಿಲ್ಲ. ಮೊದನೆಯದಾಗಿ ಕಾಂಗ್ರೆಸ್‌ ಪಕ್ಷದಲ್ಲಿಯೇ ಭಿನ್ನಮತ ಸ್ಫೋಟಗೊಳ್ಳುತ್ತಲಿದೆ. ಸಚಿವರ ವಿರುದ್ಧ ಶಾಸಕರ ಅಸಮಾಧಾನ, ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (‌CM Siddaramaiah) ವಿರುದ್ಧ ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ (MLC and senior Congress leader BK Hariprasad) ಹೇಳಿಕೆಗಳೂ ಸೇರಿದಂತೆ ಹಲವು ಸಂಗತಿಗಳು ಕೈ ಪಕ್ಷಕ್ಕೆ ಮುಜುಗರವನ್ನು ತಂದಿತ್ತು. ಇನ್ನು ಸಿದ್ದರಾಮಯ್ಯ ವಿರುದ್ಧ ಪಕ್ಷದೊಳಗೆ ಕೆಲವು ಕಾರಣಗಳಿಗಾಗಿ ಕೆಲವರಲ್ಲಿ ಅಸಮಾಧಾನ ಕುದಿಯುತ್ತಲೇ ಇದೆ. ಹೀಗಾಗಿ ಅವರು ಈ ಹಿಂದೆ ರಾಜಕೀಯವಾಗಿ ಪ್ರಬಲ ಶಕ್ತಿಯನ್ನಾಗಿ ಉಪಯೋಗಿಸಿಕೊಂಡಿದ್ದ “ಅಹಿಂದ” (Ahinda Organization) ದಾಳವನ್ನೇ ಪ್ರತಿಯಾಗಿ ಉರುಳಿಸಲು ಈಗ ಬಿ.ಕೆ. ಹರಿಪ್ರಸಾದ್‌ ಮುಂದಾಗಿದ್ದಾರೆ. ಈಗ ಮತ್ತೊಂದು “ಅಹಿಂದ” ರಾಜಕೀಯ (Ahinda politics) ರಾಜ್ಯದಲ್ಲಿ ತಲೆ ಎತ್ತಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಮೇಲೆ ಈಚೆಗೆ ಅಸಮಾಧಾನ ಹೊರಹಾಕಿದ್ದ ಬಿ.ಕೆ ಹರಿಪ್ರಸಾದ್, ತಮಗೆ ಸಿಎಂ ಮಾಡುವುದೂ ಗೊತ್ತು, ಅಧಿಕಾರದಿಂದ ಇಳಿಸುವುದೂ ಗೊತ್ತು ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರು ಕುರುಬ ಸಮಾಜವನ್ನು ಬಿಟ್ಟರೆ ಇತರ ಹಿಂದುಳಿದ ವರ್ಗದವರನ್ನು ಕಡೆಗಣಿಸಿದ್ದಾರೆ ಎಂದು ಆಗಾಗ ಹೇಳಿಕೊಂಡು ಬರುತ್ತಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್‌ ಅವರೀಗ ಅಹಿಂದವನ್ನು ಕಟ್ಟಲು ಮುಂದಾಗಿದ್ದಾರೆ. ಈ ಮೂಲಕ “ಅಹಿಂದ ನಾಯಕ” ಎಂದೇ ಪ್ರಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರ ಪಟ್ಟವನ್ನು ಕಿತ್ತುಕೊಳ್ಳಲು ಪ್ಲ್ಯಾನ್‌ ಹಾಕಿದ್ದಾರೆ.

ಇದನ್ನೂ ಓದಿ:Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ಹೇಗಿರಲಿದೆ ಅಹಿಂದ ಪಾಲಿಟಿಕ್ಸ್?

ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್ ಮಾಡಲು ಮುಂದಾಗಿರುವ ಬಿ.ಕೆ. ಹರಿಪ್ರಸಾದ್‌ ಇದಕ್ಕೆ ತಯಾರಿಯನ್ನೂ ನಡೆಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದರ ಸಂಘಟನೆಯನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಮಾಡಿದ ಮಾದರಿಯಲ್ಲಿಯೇ ಮಾಡಲು ಚಿಂತನೆ ನಡೆಸಿದ್ದಾರೆ. ಈ ಹಿಂದೆ ಅವರು ಅಹಿಂದ ಸಂಘಟನೆ ಮಾಡಿದಾಗ ಇದಕ್ಕೆ ಕುರುಬ ಸಮುದಾಯ ಬಲ ತುಂಬಿತ್ತು. ಆ ಸಮುದಾಯವರು ಬೆನ್ನಿಗೆ ನಿಂತಿದ್ದರಿಂದ ಬಹಳ ಯಶಸ್ವಿಯೂ ಆಗಿತ್ತು.

ಸಿದ್ದರಾಮಯ್ಯ ಅಹಿಂದ ಕಟ್ಟಿದ್ದು ಹೇಗೆ?

2004ರ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರೆ, ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಡಿಸಿಎಂ ಆಗಿದ್ದ ಅವಧಿಯಲ್ಲಿ ಜೆಡಿಎಸ್‌ ಪಕ್ಷದೊಳಗೆ ಸಿದ್ದರಾಮಯ್ಯ ಅವರ ಭಿನ್ನಾಭಿಪ್ರಾಯ ಶುರುವಾಗಿತ್ತು. ಎಚ್.ಡಿ ದೇವೇಗೌಡರ ಕುಟುಂಬದ ಬಗ್ಗೆ ಅಪಸ್ವರ ತೆಗೆದಿದ್ದರು. ಹೀಗಾಗಿ ಆಗಾಗ ಒಳ ಜಗಳಗಳು ನಡೆಯುತ್ತಿದ್ದವು. ಈ ಕಾರಣದಿಂದ ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ದೂರವಾಗಿದ್ದರು. ಆಗ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾದ ಸಿದ್ದರಾಮಯ್ಯ ಅವರು ಅಹಿಂದ ಸಂಘಟನೆಯನ್ನು ಕಟ್ಟಿದರು. ದೊಡ್ಡ ಮಟ್ಟದಲ್ಲಿ ಸಮಾವೇಶಗಳನ್ನು ಸಂಘಟಿಸಿದರು. ಅಹಿಂದಕ್ಕೆ ಪ್ರಾರಂಭದಲ್ಲಿ ಕುರುಬ ಸಮುದಾಯದವರು ಹೆಚ್ಚು ಬೆಂಬಲ ನೀಡಿರಲಿಲ್ಲ. ಸಿದ್ದರಾಮಯ್ಯ ನೇತೃತ್ವ ವಹಿಸಿಕೊಂಡ ಮೇಲೆ ಆ ಸಮುದಾಯದವರು ಅಹಿಂದಕ್ಕೆ ಬೆಂಬಲ ನೀಡಿದ್ದರು.

ಈಗ ಬಿ.ಕೆ. ಹರಿಪ್ರಸಾದ್ ತಂತ್ರಗಾರಿಕೆ ಏನು?

ಅಹಿಂದ ಸಂಘಟನೆ ಸಂಬಂಧ ಶನಿವಾರ (ಸೆಪ್ಟೆಂಬರ್‌ 9) ಪೂರ್ವಭಾವಿ ಸಭೆ ನಡೆಸಿದ್ದ ಬಿ.ಕೆ. ಹರಿಪ್ರಸಾದ್‌, ಈ ಸಂಬಂಧ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅಹಿಂದಕ್ಕೆ ಈಡಿಗ, ಬಿಲ್ಲವ, ನಾಮಧಾರಿಗಳ ನಾಯಕತ್ವ ವಹಿಸುವ ಪ್ಲ್ಯಾನ್‌ ಅನ್ನು ಅವರು ಮಾಡಿದ್ದಾರೆ.

ಈಡಿಗ, ಬಿಲ್ಲವ, ನಾಮಧಾರಿ, ದೀವರ ಅತಿ ಹಿಂದುಳಿದ ವರ್ಗಗಳ ಸಂಘಟನೆ ಮಾಡಲು ಮುಂದಾಗಿರುವ ಬಿ.ಕೆ. ಹರಿಪ್ರಸಾದ್‌, ಸರಿಸುಮಾರು 70ಕ್ಕೂ ಹೆಚ್ಚು ಅತಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಮಡಿವಾಳ, ಸವಿತಾ ಸಮಾಜ., ಕುಂಬಾರ, ಉಪ್ಪಾರ, ಅಂಬಿಗರು, ಯಾದವ, ವಿಶ್ವಕರ್ಮ ಸೇರಿದಂತೆ 70ಕ್ಕೂ ಅಧಿಕ ಅತಿ ಹಿಂದುಳಿದ ವರ್ಗಗಳನ್ನು “ಅಹಿಂದ” ಮೂಲಕ ಒಗ್ಗೂಡಿಸುವ ತಂತ್ರಗಾರಿಕೆ ಮಾಡಿದ್ದಾರೆ.

ಇದನ್ನೂ ಓದಿ: Road Accident : ಇಬ್ಬರ ಜೀವ ತೆಗೆದ ನಾಯಿ! ಕಾರು ಪಲ್ಟಿಯಾಗಿ ಶಿಕ್ಷಕ ಸಾವು, ಲಾರಿ ಹರಿದು ಮಹಿಳೆ ಮೃತ್ಯು

ಈ ಸಮುದಾಯಗಳಿಗೆ ರಾಜ್ಯ ಮಟ್ಟದಲ್ಲಿ ನಾಯಕತ್ವ ನೀಡಲು ಮುಂದಾಗಿರುವ ಬಿ.ಕೆ. ಹರಿಪ್ರಸಾದ್, ಈಡಿಗ ಸಮುದಾಯದ ನಾಯಕತ್ವದಲ್ಲಿ ಅಹಿಂದ ಕಟ್ಟುವ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಈ ಬಗ್ಗೆ ಅವರು ಸುಳಿವನ್ನು ಸಹ ಬಿಟ್ಟುಕೊಟ್ಟಿದ್ದಾರೆ.

Exit mobile version