ಮುಂಬೈ: ಇತ್ತೀಚಿನ ಲೋಕಸಭಾ ಚುನಾವಣೆ (Lok Sabha Election)ಯಲ್ಲಿನ ಕಳಪೆ ಪ್ರದರ್ಶನದ ನಂತರ ಮಹಾರಾಷ್ಟ್ರ (Maharashtra)ದಲ್ಲಿ ಅಜಿತ್ ಪವಾರ್ (Ajit Pawar) ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (Nationalist Congress Party)ಗೆ ಮತ್ತೊಂದು ಆಘಾತ ಎದುರಾಗಿದೆ. ಪಿಂಪ್ರಿ ಚಿಂಚ್ವಾಡ್ (Pimpri Chinchwad)ದ ನಾಲ್ವರು ಉನ್ನತ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಅವರು ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರುವ ಸಾಧ್ಯತೆ ಇದೆ.
ಅಜಿತ್ ಪವಾರ್ ಅವರಿಗೆ ರಾಜೀನಾಮೆ ಸಲ್ಲಿಸಿದವರಲ್ಲಿ ಎನ್‌ಸಿಪಿಯ ಪಿಂಪ್ರಿ-ಚಿಂಚ್ವಾಡ್ ಘಟಕದ ಮುಖ್ಯಸ್ಥ ಅಜಿತ್ ಗವ್ಹಾನೆ ಕೂಡ ಸೇರಿದ್ದಾರೆ. ಪಿಂಪ್ರಿ ಚಿಂಚ್ವಾಡ್ ವಿದ್ಯಾರ್ಥಿ ಘಟಕದ ಮುಖ್ಯಸ್ಥ ಯಶ್ ಸಾನೆ, ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್ ಭೋಸಲೆ ಮತ್ತು ಪಂಕಜ್ ಭಲೇಕರ್ ರಾಜೀನಾಮೆ ನೀಡಿದ ಇತರ ನಾಯಕರು. ಅಜಿತ್ ಪವಾರ್ ಬಣದ ಕೆಲವು ನಾಯಕರು ಶರದ್ ಪವಾರ್ ಬಣಕ್ಕೆ ಮರಳಲು ಸಿದ್ಧರಾಗಿದ್ದಾರೆ ಎನ್ನುವ ವದಂತಿಯ ಮಧ್ಯೆ ಈ ಬೆಳವಣಿಗೆ ನಡೆದಿದೆ.
Pimpri-Chinchwad NCP Chief Ajit Gavhane resigns from his post; sends his resignation to party president Sunil Tatkare. Along with Ajit Gavhane, two former Corporator from Pimpri Chinchwad also sent their resignation to Sunil Tatkare. pic.twitter.com/h4orndb7bh
— ANI (@ANI) July 16, 2024
ಕಳೆದ ತಿಂಗಳು ಶರದ್ ಪವಾರ್ ಈ ಬಗ್ಗೆ ಮಾತನಾಡಿ, ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ಸೇರಿಸಿಕೊಳ್ಳುವುದಿಲ್ಲ. ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರದ ನಾಯಕರನ್ನು ಸ್ವಾಗತಿಸುವುದಾಗಿ ತಿಳಿಸಿದ್ದರು. “ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ನಾವು ಸ್ವಾಗತಿಸುವುದಿಲ್ಲ. ಆದರೆ ಸಂಘಟನೆಯನ್ನು ಬಲಪಡಿಸಲು ಸಹಾಯ ಮಾಡುವ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ನಾಯಕರನ್ನು ಸೇರಿಸುತೇವೆ” ಎಂದು ಅವರು ಘೋಷಿಸಿದ್ದರು.
ಈ ಮಧ್ಯೆ ಎನ್‌ಸಿಪಿ ವಕ್ತಾರರು ಮಾತನಾಡಿ, “ಯಾವುದೇ ನಾಯಕರು ಪಕ್ಷವನ್ನು ತೊರೆಯುವುದು ಹಿನ್ನಡೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಅಜಿತ್ ಗವ್ಹಾನೆ ನಮ್ಮೊಂದಿಗೆ ಇರುತ್ತಾರೆ ಎಂಬ ವಿಶ್ವಾಸವಿದೆ. ಅವರು ಅಜಿತ್ ಪವಾರ್‌ನ ನಿಕಟವರ್ತಿ. ಆದ್ದರಿಂದ ಅವರು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಹಿತ್ ಗವ್ಹಾನೆ , ʼʼಎನ್‌ಸಿಪಿಗೆ ರಾಜೀನಾಮೆ ನೀಡಿದ್ದೇನೆ. ಆದರೆ ಶರದ್ ಪವಾರ್ ಬಣಕ್ಕೆ ಸೇರುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇಂದು (ಜುಲೈ 17) ಪತ್ರಿಕಾಗೋಷ್ಠಿ ಕರೆದು ನಿರ್ಧಾರ ಪ್ರಕಟಿಸುತ್ತೇನೆʼʼ ಎಂದು ತಿಳಿಸಿದ್ದಾರೆ.
2023ರಲ್ಲಿ ಅಜಿತ್ ಪವಾರ್ ತಮ್ಮ ಸಂಬಂಧಿ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ವಿರುದ್ಧ ದಂಗೆ ಎದ್ದ ನಂತರ ಪವಾರ್ ಕುಟುಂಬವು ಎರಡು ರಾಜಕೀಯ ಪಕ್ಷಗಳಾಗಿ ವಿಭಜನೆಯಾಯಿತು. ಶರದ್ ಪವಾರ್ ಪ್ರತಿಪಕ್ಷದ ಪಾಳಯದಲ್ಲಿ ಉಳಿದರೆ, ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ಭಾಗವಾದರು. ಜತೆಗೆ ಅಜಿತ್ ಪವಾರ್ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ಅಜಿತ್ ಪವಾರ್ ಅವರ ಪಕ್ಷವು ಬಿಜೆಪಿ ನೇತೃತ್ವದ ಎನ್‌ಡಿಎಯ ಮಿತ್ರಪಕ್ಷವಾಗಿ ಲೋಕಸಭಾ ಚುನಾವಣೆ ಎದುರಿಸಿತು. ಆದರೆ ಒಂದು ಸ್ಥಾನವನ್ನು (ರಾಯಗಢ) ಮಾತ್ರ ಗೆದ್ದುಕೊಂಡಿದೆ. ಶರದ್ ಪವಾರ್ ಪಕ್ಷವು ಎಂಟು ಕ್ಷೇತ್ರಗಳಲ್ಲಿ ಗೆದ್ದಿದೆ.
ಇದನ್ನೂ ಓದಿ: Real NCP: ಅಜಿತ್ ಪವಾರ್ ಬಣದ್ದೇ ನಿಜವಾದ ಎನ್‌ಸಿಪಿ ಎಂದ ಆಯೋಗ; ಶರದ್ ಪವಾರ್‌ಗೆ ಹಿನ್ನಡೆ