ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ ಮಾಡುವುದರ ಹಿಂದೆ ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕೆಪಿಸಿಸಿ ವಕ್ತಾರ ರಮೇಶ್ ಬಾಬು ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗಾವಿಯಲ್ಲಿ ಸೋಮವಾರ ರಮೇಶ್ ಜಾರಕಿಹೊಳಿ ಸಂಬಂಧಿಸಿದಂತೆ ಪಕ್ಷದ ಪರವಾಗಿ ನಾವು ಸುದ್ದಿಗೋಷ್ಟಿ ಮಾಡ್ತಾ ಇದ್ದೇವೆ. ನಮ್ಮ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾತಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆಶಿ ಮೇಲಿರುವ ಹಗೆತನಕ್ಕಾಗಿ ಸುದ್ದಿಗೋಷ್ಟಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಅವರು ಕೇಂದ್ರ ಗೃಹ ಸಚಿವರ ಭೇಟಿ ಬಳಿಕ ಸುದ್ದಿಗೋಷ್ಠಿ ಮಾಡಿದ್ದಾರೆ. ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ನಾವು ಸ್ಪಷ್ಟತೆ ಕೊಡ್ತಿದ್ದೇವೆ. ಕೇಂದ್ರ ಗೃಹ ಸಚಿವರು, ಸಿಎಂ ಹಾಗೂ ಉಳಿದ ನಾಯಕರ ಶಾಮೀಲಾಗಿ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ. ಎಸ್‌ಐಟಿಗೆ ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಸೆಕ್ಸ್ ಸಿಡಿ ಪ್ರಕರಣದಲ್ಲಿ ಇನ್ನೂ ಕ್ಕ್ಲೀನ್ ಚಿಟ್ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿಗೆ ಇನ್ನೂ ಪ್ರಕರಣ ಬಾಕಿ ಇದೆ.
ರಮೇಶ್ ಇದುವರೆಗೆ ಒಂದೇ ಒಂದು ಸ್ಟೇಷನ್ ನಲ್ಲೂ ದೂರು ದಾಖಲಿಸಿಲ್ಲ. ಸಿಬಿಐಗೆ ಖಾಸಗಿ ಪ್ರಕರಣ ನೀಡಿರುವುದು ಅಪರೂಪ. ಆದರೆ ಸಿಬಿಐ ಅನ್ನು ತಮ್ಮ ಪಕ್ಷದ ಸಲುವಾಗಿ ಬಿಜೆಪಿ ಬಳಸಿಕೊಳ್ತಿದೆ. ಹೀಗಾಗಿ ಸಿಬಿಐಗೆ ಕೊಡುವ ಷಡ್ಯಂತ್ರ ಬಿಜೆಪಿಯವರು ಮಾಡಿರಬಹುದು. ಜನಾರ್ಧನ ರೆಡ್ಡಿ ಕೂಡ ಹಿಂದೆ ಸಿಡಿ ಬಿಡ್ತಿನೀ ಅಂತ ಪ್ರಚಾರ ಮಾಡಿದರು. ಅಂದಿನಿಂದ ಇಂದಿನವರೆಗೂ ಬಿಜೆಪಿಯವರಿಗೆ ಸಿಡಿ ಅಂಟುರೋಗ ಇದೆ.
ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ಬದುಕನ್ನು ಶುದ್ದವಾಗಿ ಇಟ್ಟುಕೊಳ್ಳಬೇಕಿತ್ತು. ಬಿಜೆಪಿಯ ರೂಪವನ್ನು ಜನರಿಗೆ ತಿಳಿಸ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವರು ಆಡಿದ ಪದ ಅವರ ಪಕ್ಷದ ನೀತಿಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ವೈಯಕ್ತಿಕ ಹಗೆತನದ ಕಾರಣಕ್ಕೆ ಆರೋಪ ಮಾಡ್ತಿದ್ದಾರೆ. ವಿಕ್ಟಿಮ್ ಸಾಮಾನ್ಯವಾಗಿ ದೂರನ್ನು ಕೊಡ್ತಾರೆ, ಈ ಸೆಕ್ಸ್ ಸಿಡಿ ಪ್ರಕರಣದಲ್ಲಿ ಜಾರಕಿಹೊಳಿ ತಮ್ಮ ಪ್ರಭಾವ ಬಳಸಿ ಎಸ್ ಐಟಿ ರಚನೆ ಮಾಡಿಸಿದ್ದಾರೆ.
ಸುಳ್ಳನ್ನು ತಲೆ ಮೇಲೆ ಹೊಡೆದಂತೆ ಹೇಳುವ ಪ್ರವೃತ್ತಿ ಬಿಜೆಪಿಯವರದ್ದು. ೧೯೮೮ ರಲ್ಲಿ ಬೆಂಗಳೂರಿನ ೯೮ ಹೌಸಿಂಗ್ ಸೊಸೈಟಿಗಳ ತನಿಖೆಗೆ ಸಂಬಂಧಿಸಿ ಆದೇಶ ಮಾಡಲಾಗಿತ್ತು. ಶಾಂತಿನಗರ ಹೌಸಿಂಗ್ ಸೊಸೈಟಿಯ ಬಗ್ಗೆಯೂ ತನಿಖಾಧಿಕಾರಿ ವರದಿ ನೀಡಿದ್ದಾರೆ. ಅವತ್ತು ಡಿ.ಕೆ. ಶಿವಕುಮಾರ್ ಇನ್ನೂ ಶಾಸಕರೇ ಆಗಿರಲಿಲ್ಲ. ಸಹಕಾರ ಸಚಿವರಾಗಿ ಜಾರಕಿಹೊಳಿ ಕೈವಾಡ ಆಗಲೇ ಇಲ್ಲ ಅಂತಾದರೆ ಅವತ್ತೇ ಯಾಕೆ ಪ್ರಕರಣ ಹೊರಗೆ ತರದೆ ಮುಚ್ಚಿಟ್ಟಿರಿ? ಎಂದು ಪ್ರಶ್ನಿಸಿದರು.
ಲಖನ್ ಜಾರಕಿಹೊಳಿ ವ್ಯಂಗ್ಯ ವಿಚಾರದಲ್ಲಿ ಪ್ರತಿಕ್ರಿಯಿಸಿ, ಲಖನ್ ಜಾರಕಿಹೊಳಿಗೆ ಯಾವಾಗ ಜ್ಞಾನೋದಯ ಆಗುತ್ತದೆಯೋ ಗೊತ್ತಿಲ್ಲ. ಇದೇ ಲಖನ್ ಜಾರಕಿಹೊಳಿ ಯಾಕೆ ಯತ್ನಾಳ್ ಸಿಡಿ ಸರ್ಕಾರ ಅಂತ ಹೇಳಿದಾಗ ಸುಮ್ಮನೆ ಇದ್ದರು? ಲಖನ್ ವಿಧಾನಪರಿಷತ್ ಚುನಾವಣಾ ಸಂದರ್ಭದಲ್ಲಿ ಯಾವ ಪಕ್ಷದ ವಿರುದ್ದ ಚುನಾವಣೆ ನಿಂತಿದ್ರು? ಲಖನ್ ಜಾರಕಿಹೊಳಿ ಈಗ ಬಂದು ಮಾತನಾಡುವವರು ತಮ್ಮ ಅಣ್ಣ ಮಹಿಳೆಯನ್ನು ಅಧಿಕಾರ ದುರುಪಯೋಗ ಮಾಡಿಕೊಳ್ಳುವಾಗ ಯಾಕೆ ಸುಮ್ಮನೆ ಇದ್ರು? ಎಂದರು.
ಡಿಕೆಶಿ ಬೆನ್ನಿಗೆ ಕಾಂಗ್ರೆಸ್ ನಾಯಕರು ನಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ನಾಯಕರು ಭಾರತ್ ಜೋಡೊ ಸಮಾರೋಪ ಸಮಾರಂಭದಲ್ಲಿ ಇದ್ದರು. ನಿನ್ನೆಯ ನಮ್ಮ ಕೆಲ ನಾಯಕರು ಮಾತಾಡಿದ್ದಾರೆ. ನಮ್ಮ ನಾಯಕರ ಸೂಚನೆ ಮೇರೆಗೆ ನಾವು ಈಗ ಸುದ್ದಿಗೋಷ್ಟಿ ಮಾಡ್ತಾ ಇದ್ದೇವೆ. ಕೆಲವೊಂದು ವಿಷ್ಯಗಳನ್ನು ಇಲ್ಲಿ ಮಾತನಾಡಲು ಆಗಲ್ಲ ಎಂದು ರಮೇಶ್ ಬಾಬು ಜಾರಿಕೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಸಿ ರಾಜು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಮೇಲೆ ರಮೇಶ್ ವೈಯಕ್ತಿಕ ದ್ವೇಷ ಸಾಧಿಸ್ತಿದ್ದಾರೆ. ಜಾರಕಿಹೊಳಿ ನಾಲಿಗೆ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಊಹಾಪೋಹದ ಮಾತುಗಳನ್ನು ಆಡಬಾರದು. ರಮೇಶ್ ಜಾರಕಿಹೊಳಿ ಇನ್ನೂ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರಿಗೆ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡುವ ನೈತಿಕತೆಯೇ ಇಲ್ಲ. ರಮೇಶ್ ಜಾರಕಿಹೊಳಿ ಬಾಡಿಯೂ ಕಂಟ್ರೋಲ್ ನಲ್ಲಿ ಇಲ್ಲ, ಮಾತೂ ಕಂಟ್ರೋಲ್ ನಲ್ಲಿ ಇಲ್ಲ ಎಂದರು.
ಇದನ್ನೂ ಓದಿ : Ramesh Jarkiholi : ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುತ್ತಾರ ಸಿಎಂ?: ರಮೇಶ್ ಜಾರಕಿಹೊಳಿ ಭೇಟಿ ಕುತೂಹಲ
ಜಾರಕಿಹೊಳಿ ವಿರುದ್ಧ ಪ್ರತಿಭಟನೆ
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆರೋಫ ಮಾಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಮುಕ ಜಾರಕಿಹೊಳಿ ಎಂದು ಪೋಸ್ಟರ್ ಹಿಡಿದು ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಂತರ ಪೊಲೀಸರು ಅವರನ್ನು ಬಂಧಿಸಿ ಸದಾಶಿವನಗರ ಠಾಣೆಗೆ ಕರೆದೊಯ್ದರು.
ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ, ಮುತ್ತಿಗೆ ಹಾಕುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಮನೆಯ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಜಾರಕಿಹೊಳಿ ಮನೆಯಿರುವ ರಸ್ತೆಯ ಎರಡೂ ಕಡೆ ಹೆಚ್ಚೆಚ್ಚು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಸ್ಥಳದಲ್ಲಿ ಅನೇಕ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.