ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕೈಗೊಂಡ ಎರಡು ದಿನಗಳ ರಾಜ್ಯ ಪ್ರವಾಸ ಅಂತ್ಯವಾಗಿದ್ದು, ದೆಹಲಿಗೆ ಹೊರಡುವ ಮುನ್ನ ಅವರು ಸಚಿವ ವಿ. ಸೋಮಣ್ಣ ನಿವಾಸಕ್ಕೆ ತೆರಳಿ ಉಪ್ಪಿಟ್ಟು, ಕೇಸರಿಬಾತ್ ಹಾಗೂ ಬಜ್ಜಿ ಸವಿದರು.
ಆದಿಚುಂಚನಗಿರಿ ಮಠದಿಂದ ನೇರವಾಗಿ ವಿಜಯನಗರದಲ್ಲಿರುವ ವಿ. ಸೋಮಣ್ಣ ನಿವಾಸಕ್ಕೆ ತೆರಳಿದ ಶಾ ಅವರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅವರ ಮನೆಯಲ್ಲಿ ಕೇಸರಿ ಬಾತ್, ಉಪ್ಪಿಟ್ಟು, ಮೆಣಸಿನಕಾಯಿ ಬಜ್ಜಿ ಸೇವಿಸಿದರು. ಹಾಗೆಯೇ, ಸೋಮಣ್ಣ ನಿವಾಸದಲ್ಲಿಯೇ ಅರ್ಧ ಗಂಟೆ ಸಭೆ ನಡೆಸಿದ ಅಮಿತ್ ಶಾ, ಕೊನೆಯ ಕ್ಷಣದ ತಂತ್ರಗಾರಿಕೆ ರೂಪಿಸಿದರು. ಬಿಜೆಪಿ ನಾಯಕರಿಗೆ ಹಲವು ಟಾಸ್ಕ್‌ಗಳನ್ನೂ ನೀಡಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ತೇಜಸ್ವಿ ಸೂರ್ಯ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
ನನ್ನ ಮನೆಗೆ ಬಂದಿದ್ದು ಅವರ ದೊಡ್ಡತನ ಎಂದ ಸೋಮಣ್ಣ
“ಅಮಿತ್ ಶಾ ಅವರು ನನ್ನ ಮನೆಗೆ ಬಂದು ಉಪಾಹಾರ ಸೇವಿಸಿದ್ದು ಅವರ ದೊಡ್ಡತನ” ಎಂದು ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. “ಒಳ್ಳೆಯತನಕ್ಕೆ, ಕೆಲಸಗಾರನಿಗೆ ಭಗವಂತ ಒಂದೊಂದು ರೂಪದಲ್ಲಿ ಸಹಕಾರ ಕೊಡುತ್ತಾನೆ. ಅಮಿತ್ ಶಾ ಅವರು ಬರುವ ಕುರಿತು ಬಿ.ಎಲ್.ಸಂತೋಷ್ ಅವರು ಕರೆ ಮಾಡಿ ಹೇಳಿದರು. ಒಬ್ಬ ಕಾರ್ಯಕರ್ತನ ಮನೆಗೆ ಗೃಹ ಸಚಿವರು ಬಂದಿದ್ದು ಹೆಮ್ಮೆಯ ವಿಷಯ. ಅವರು ನನ್ನ ಮನೆಗೆ ಬಂದ ತಕ್ಷಣ ತುಲನೆ ಮಾಡುವುದು ಬೇಡ. ಯಾವುದೇ ವಿಚಾರಗಳಿಗೆ ಒಗ್ಗರಣೆ ಹಾಕುವುದು ಬೇಡ. ಎಲ್ಲಿಯತನಕ ಬಿ.ಎಸ್.ಯಡಿಯೂರಪ್ಪ ಅವರು ಸಕ್ರಿಯ ರಾಜಕಾರಣದಲ್ಲಿರುತ್ತಾರೋ ಅವರೇ ನಮ್ಮ ನಾಯಕರು” ಎಂದರು.
ಇದನ್ನೂ ಓದಿ | Amit shah | ಹಳೇ ಮೈಸೂರು ಭಾಗದಲ್ಲಿ 30ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು: ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ