ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ. ಬಡವರು, ರೈತರ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದರು.
ಭಾನುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆ ಹಾಗೂ ಮುಖಂಡರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿನವರೆಗೆ ಬರಗಾಲದ ಬಗ್ಗೆ ಐದು ತಿಂಗಳಾದರೂ ಒಂದು ಸಭೆಯನ್ನೂ ಅಮಿತ್ ಶಾ ಕರೆದಿಲ್ಲ. ಬರ ಪರಿಹಾರ ಕೊಡಲು ಇರುವ ಸಮಿತಿಗೆ ಅವರೇ ಅಧ್ಯಕ್ಷರು. ದೇಶದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ. ರೈತರು ಬರಗಾಲದಲ್ಲಿ ಕಷ್ಟಪಡುತ್ತಿದ್ದಾರೆ. ಬರಗಾಲ ಬಂದಾಗ ಎಂಜಿನರೇಗಾ ಯೋಜನೆಯಡಿ 150 ಮಾನವ ದಿನಗಳನ್ನು ಹೆಚ್ಚಿಸುವುದು ಕಡ್ಡಾಯವಾದರೂ ಇಂದಿನವರೆಗೆ ಹೆಚ್ಚಿಸಿಲ್ಲ. ಆದರೆ, ಕೇಂದ್ರ ಸರ್ಕಾರದವರು ಇದುವರೆಗೂ ಅನುಮತಿ ನೀಡಿಲ್ಲ. ಜತೆಗೆ ಈ ಸಂಬಂಧ ಬರೆದ 2-3 ಪತ್ರಕ್ಕೂ ಉತ್ತರ ನೀಡಿಲ್ಲ ಎಂದರು.
ಅನ್ಯಾಯವನ್ನೆಲ್ಲ ಸರಿ ಎಂದು ಹೇಳಬಾರದು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಕ್ಕ ಉತ್ತರ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈಗ ದೇವೇಗೌಡರು ಅವರ ಜತೆ ಸೇರಿದ್ದಾರೆ. ಇದೇ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅದರ ಬಗ್ಗೆ ಈಗೇನು ಹೆಳುತ್ತಿದ್ದಾರೆ? ಅವರು ಯಜಮಾನರು, ಮಾಜಿ ಪ್ರಧಾನಿಗಳಾಗಿದ್ದವರು ಹೀಗೆ ಹೇಳಬಾರದು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿಯವರು ಮಾಡಿದ ಅನ್ಯಾಯವನ್ನೆಲ್ಲ ಸರಿ ಎಂದು ಹೇಳಬಾರದು ಎಂದು ಹೇಳಿದರು.
ಇದನ್ನೂ ಓದಿ: Amit Shah: ಅಮಿತ್ ಶಾ ಉಕ್ಕಿನ ಮನುಷ್ಯ; ಮೋದಿ – ಶಾ ಜೋಡೆತ್ತುಗಳೆಂದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಗೆಲ್ಲಲಿದೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಿಂದಲೇ ಅಮಿತ್ ಶಾ ರಣಕಹಳೆ ಮೊಳಗಿಸುತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ರಣಕಹಳೆ ಎಂದರೆ ಏನು? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು. ಈ ಬಾರಿ ಚಾಮರಾಜನಗರ, ಮೈಸೂರು ಕ್ಷೇತ್ರ ಎರಡನ್ನೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿದರು.
ಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿ.ವೈ. ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನನ್ನ ತೆರಿಗೆ ನನ್ನ ಹಕ್ಕು ಅಲ್ಲ. ಅದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಹೋರಾಟ ಅಷ್ಟೆ. ನಿಮ್ಮ ಸರ್ಕಾರ ಬಂದು ಎಂಟು ತಿಂಗಳಲ್ಲಿ ಘೋಷಿಸಿದ ಒಂದು ಅಭಿವೃದ್ಧಿ ಕಾರ್ಯ ತಿಳಿಸಿ? ಯಾವ ಯೋಜನೆಯನ್ನೂ ಘೋಷಣೆ ಮಾಡಿಲ್ಲ. ಸಿಎಂ ನೇತೃತ್ವದಲ್ಲಿ ಹೊಸ ನಾಟಕ ನಡೆಯುತ್ತಿದೆ. ಒಂದು ಸುಳ್ಳು ನೂರು ಬಾರಿ ಹೇಳಿ ಜನರಿಗೆ ಮಂಕು ಎರಚುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಇದು ಕಾಂಗ್ರೆಸ್‌ಗೆ ದುಷ್ಪರಿಣಾಮ ಬೀರುವುದು ನಿಶ್ಚಿತ” ಎಂದು ಹೇಳಿದ್ದಾರೆ.
ಮಂಡ್ಯದ ಬಗ್ಗೆ ಚರ್ಚೆಯೇ ಆಗಿಲ್ಲ: ಬಿವೈ ವಿಜಯೇಂದ್ರ
ಮಂಡ್ಯ, ಮೈಸೂರು, ಚಾಮರಾಜನಗರ ಸೇರಿ ನಾಲ್ಕು ಲೋಕಸಭಾ ಕ್ಷೇತ್ರದಿಂದ ಕಾರ್ಯ ತಂತ್ರ ಹೇಗಿರಬೇಕು? ಜೆಡಿಎಸ್ – ಬಿಜೆಪಿ ಹೊಂದಾಣಿಕೆ ಇರುವ ಕಾರಣ ಒಟ್ಟಾಗಿ ಚುನಾವಣೆ ಎದುರಿಸುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಇಲ್ಲಿ ಚರ್ಚೆ ನಡೆಸಲಾಗುವುದು. ಸಿಎಂ ತವರೂರಿಂದ ಈ ಬಾರಿ ಚುನಾವಣಾ ಕಾರ್ಯತಂತ್ರ ಆರಂಭವಾಗಿದ್ದು ವಿಶೇಷ ಅಲ್ಲ. ಚಾಮರಾಜನಗರ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕು. ಮಂಡ್ಯದಲ್ಲಿ ಬದಲಾದ ರಾಜಕೀಯ ಸ್ಥಿತಿಯಲ್ಲಿ ಜೆಡಿಎಸ್ ಆ ಸ್ಥಾನ ಕೇಳುತ್ತಿದೆ ಅಂತ ಟಿವಿಯಲ್ಲಿ ನೋಡಿದ್ದೇವೆ. ಆದರೆ, ನಮ್ಮಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ. ಇವತ್ತು ಆ ಬಗ್ಗೆ ಚರ್ಚೆ ಆದರೂ ಆಗಬಹುದು ಎಂದು ಹೇಳಿದರು.
ಇದನ್ನೂ ಓದಿ: Share Market : ಚೀನಾವನ್ನು ಹಿಂದಿಕ್ಕಿ ನಾಗಾಲೋಟದಲ್ಲಿರುವ ಭಾರತದ ಷೇರು ಮಾರುಕಟ್ಟೆ; ಇಲ್ಲಿದೆ ಅಂಕಿ ಅಂಶ
ಸಿಎಂ ನೇತೃತ್ವದಲ್ಲಿ ಹೊಸ ನಾಟಕ
ಕಾಂಗ್ರೆಸ್ ಹೋರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ನನ್ನ ತೆರಿಗೆ ನನ್ನ ಹಕ್ಕು ಅಲ್ಲ. ಅದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಹೋರಾಟ ಅಷ್ಟೆ. ನಿಮ್ಮ ಸರ್ಕಾರ ಬಂದು ಎಂಟು ತಿಂಗಳಲ್ಲಿ ಘೋಷಿಸಿದ ಒಂದು ಅಭಿವೃದ್ಧಿ ಕಾರ್ಯ ತಿಳಿಸಿ? ಯಾವ ಯೋಜನೆಯನ್ನೂ ಘೋಷಣೆ ಮಾಡಿಲ್ಲ. ಸಿಎಂ ನೇತೃತ್ವದಲ್ಲಿ ಹೊಸ ನಾಟಕ ನಡೆಯುತ್ತಿದೆ. ಒಂದು ಸುಳ್ಳು ನೂರು ಬಾರಿ ಹೇಳಿ ಜನರಿಗೆ ಮಂಕು ಎರಚುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಇದು ಕಾಂಗ್ರೆಸ್‌ಗೆ ದುಷ್ಪರಿಣಾಮ ಬೀರುವುದು ನಿಶ್ಚಿತ ಎಂದು ಹೇಳಿದರು.