Site icon Vistara News

HD Kumaraswamy: ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿದ ವೃದ್ಧೆ; ಕಾಂಗ್ರೆಸ್‌ ವಿರುದ್ಧ ಎಚ್‌ಡಿಕೆ ಕಿಡಿ

HD kumaraswamy slams Congress Government

ಬೆಂಗಳೂರು: ಮಾಸಾಶನಕ್ಕಾಗಿ (Monthly pension) 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ದಾವಣಗೆರೆ ಜಿಲ್ಲೆಯ ಅಜ್ಜಿಯೊಬ್ಬರು ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ದುಃಖ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ (Congress Government) ಜನರ ಜೀವನ ಹೇಗೆ ಹಳಿ ತಪ್ಪುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ಇಂಥ ಆಸಕ್ತರನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ನಿಯಮಿತವಾಗಿ ಮಾಸಾಶನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ.. ಆದರೆ, ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ ಈ ದೃಶ್ಯವೇ ಜೀವಂತ ಸಾಕ್ಷಿ ಎಂದು ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ತೀವ್ರ ಆಘಾತ ಉಂಟಾಗಿದೆ

ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ಈ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ. ಸರ್ಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ. ಈ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಸ್ಥಿತಿಯನ್ನು ಕಂಡು ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಾನು ಮುಖ್ಯಮಂತ್ರಿ ಆಗಿದ್ದಾಗ ವೃದ್ಧರು, ವಿಕಲಚೇತನರು, ವಿಧವೆಯರು, ದೇವದಾಸಿಯರು ಸೇರಿ ಸಮಾಜದ ವಿವಿಧ ದುರ್ಬಲ ಜನರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು, ಅವರ ಆರ್ಥಿಕ ಸಬಲೀಕರಣಕ್ಕೆ ಕ್ರಮ ವಹಿಸಿದ್ದೆ. ವೃದ್ಧಾಪ್ಯ ವೇತನ ವಿಕಲಚೇತನರ ಮಾಸಾಶನವನ್ನು ಏರಿಕೆ ಮಾಡಿದ್ದೆ. ಕಷ್ಟದಲ್ಲಿರುವವರಿಗೆ ಆಸರೆ ಕೊಡುವುದು ಆಡಳಿತ ನಡೆಸುವವರ ಕರ್ತವ್ಯ. ಗೃಹಲಕ್ಷ್ಮಿಯರಿಗೆ 2000 ರೂಪಾಯಿ ಕೊಡುತ್ತೀರಿ ಸರಿ. ಆದರೆ, ಇಂತಹ ಅಸಂಖ್ಯಾತ ವೃದ್ಧ ಅಮ್ಮಂದಿರ ಪರಿಸ್ಥಿತಿ ಏನು? ಸರ್ಕಾರಕ್ಕೆ ಕನಿಕರ ಎನ್ನುವುದು ಇಲ್ಲವೇ? ಎಂದು ‌ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಮೈಸೂರು ಲೋಕಸಭೆಗೆ ಯದುವೀರ್‌ ಒಡೆಯರ್‌ ಎಂಟ್ರಿ? ಟಿಕೆಟ್‌ ಕೊಡಲು ಬಿಜೆಪಿ, ಕಾಂಗ್ರೆಸ್‌ ಪೈಪೋಟಿ!

ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಸಂತೋಷ. ಆದರೆ, ಬಡ, ಅಶಕ್ತ ಮಹಿಳೆಯರಿಗೆ ನೆರವಾಗುವ ವೃದ್ಧಾಪ್ಯ ವೇತನ, ವಿಧವಾ ವೇತನವನ್ನು ಸಕಾಲಕ್ಕೆ ಮತ್ತು ನಿಯಮಿತವಾಗಿ ಬಿಡುಗಡೆ ಮಾಡಬೇಕು. ಮಾಸಾಶನಕ್ಕಾಗಿ ಈ ಅಜ್ಜಿ 5 ಕಿ.ಮೀ. ತೆವಳಿಕೊಂಡು ಬಂದ ದೃಶ್ಯಗಳು ಪುನರಾವರ್ತನೆ ಆಗಬಾರದು. ಕೂಡಲೇ ಆ ತಾಯಿಗೆ ಸರ್ಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಕಾಂಗ್ರೆಸ್ ಸರ್ಕಾರ ಕಣ್ತೆರೆದು ನೋಡಲಿ ಎಂದು ಎಚ್.ಡಿ. ಕುಮಾರಸ್ವಾಮಿ‌ ಒತ್ತಾಯ ಮಾಡಿದ್ದಾರೆ.

Exit mobile version