ಬೆಂಗಳೂರು: ಲೋಕಸಭಾ ಚುನಾವಣೆ (Parliament Elections 2024) ಸನ್ನಿಹಿತವಾಗುತ್ತಿದ್ದಂತೆಯೇ ಮತ್ತೆ ಪ್ರಚೋದನಾತ್ಮಕ ಹೇಳಿಕೆಗಳನ್ನು (Provocative Statements) ನೀಡಲು ಆರಂಭಿಸಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ (MP Anantkumar Hegde) ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಏಕವಚನದಲ್ಲಿ ನಿಂದಿಸಿದ್ದರು. ಇದಕ್ಕೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಪ್ರದೀಪ್ ಈಶ್ವರ್, “ಅನಂತ ಕುಮಾರ್ ಹೆಗಡೆ ಮೈಂಡ್ ಯುವರ್ ಟಂಗ್” ಹಿಂದು ಧರ್ಮ ನಿಮ್ಮ ಅಪ್ಪನ ಮನೆ ಸ್ವತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಹಿಂದು ಧರ್ಮವು ನಿಮ್ಮ ಅಪ್ಪನ ಮನೆ ಆಸ್ತಿ ತರಹ ಆಡುತ್ತಿದ್ದೀರಲ್ಲ ಎಂದು ಪ್ರಶ್ನೆ ಮಾಡಿದರು.
ಅನಂತ ಕುಮಾರ್ ಹೆಗಡೆ ಅವರೇ ನಿಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಎನ್ನೋದು ಗೊತ್ತಾಗಿದೆ. ಇವರ ಬಾಯಿ ಚಪಲದಿಂದ ಹಿಂದೆ ಕೇಂದ್ರ ಸರ್ಕಾರದಲ್ಲಿ ಸಿಕ್ಕಿದ್ದ ಸಚಿವ ಸ್ಥಾನವನ್ನೂ ಕಳೆದುಕೊಂಡರು. ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ? ಮನ್ ಕಿ ಬಾತ್ ಜತೆಗೆ ಕಾಮ್ ಕಿ ಬಾತ್ ಮಾತಾಡೋಣ ಬನ್ನಿ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ನಮ್ಮ ಎದೆ ಬಗೆದರೆ ಎಲ್ಲರೂ ಕಾಣ್ತಾರೆ
ನಾವು ಸಹ ಹಿಂದು ಧರ್ಮದವರೇ, ನಮಗೂ ಶ್ರೀರಾಮನ ಮೇಲೆ ನಂಬಿಕೆ ಇದೆ. ನೀವು ಒಂದು ಮಾತನಾಡಿದರೆ ನಾವು ನಾಲ್ಕು ಮಾತನಾಡುತ್ತೇವೆ. ಬನ್ನಿ ಈ ಫೈಟ್ ಎಲ್ಲಿಗೆ ಹೋಗಿ ನಿಲ್ಲುತ್ತದೆ ನೋಡೋಣ. ನಮ್ಮ ಎದೆ ಬಗೆದರೆ ಶ್ರೀರಾಮನೂ ಕಾಣ್ತಾನೆ, ಸಿದ್ದರಾಮಯ್ಯನೂ ಕಾಣ್ತಾರೆ, ಅಂಬೇಡ್ಕರ್ ಅವರೂ ಕಾಣ್ತಾರೆ. ಜತೆಗೆ ನಮ್ಮ ಸಿದ್ದಗಂಗಾ ಶ್ರೀಗಳೂ ಕಾಣಿಸುತ್ತಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಪ್ರಚೋದನೆಯಿಂದ ಏನಾದರೂ ಹೆಚ್ಚೂ ಕಡಿಮೆ ಆದರೆ ಅನಂತ ಕುಮಾರ್ ಹೆಗಡೆ ಬರ್ತಾರಾ? ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅನಂತ ಕುಮಾರ್ ಹೆಗಡೆ ವಿರುದ್ಧ ಎಫ್ಐಆರ್ ದಾಖಲಾಗಬೇಕು. ಅವರನ್ನು ಒಳಗೆ ಹಾಕಬೇಕು ಎಂದು ಪ್ರದೀಪ್ ಈಶ್ವರ್ ಒತ್ತಾಯ ಮಾಡಿದರು.
ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಪ್ರಶ್ನೆ
ಸಂಸದ ಪ್ರತಾಪ್ ಸಿಂಹ ಅವರು ಕೊಚ್ಚೆ ಎಂಬ ಪದ ಬಳಕೆ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಅವರೇ, ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ ಅಲ್ವಾ? ಕೊಚ್ಚೆಗೆ ಕೈ ಹಾಕೋ ಕೆಲಸವನ್ನು ನೀವ್ಯಾಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ನಮ್ಮ ಸರ್ಕಾರದಲ್ಲಿ ಮಾಡಿದ ಕೆಲಸಕ್ಕೆ ಇವರು ಹೆಸರು ಪಡೆದುಕೊಳ್ಳುತ್ತಾರೆ. ಪ್ರತಾಪ್ ಸಿಂಹಗೆ ನಾನು ಚಾಲೆಂಜ್ ಮಾಡುತ್ತೇನೆ. ಈ ಸಲ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸುತ್ತಾರೆ. ಆಗ ಹೋಗಿ ಕಾವೇರಿ ನೀರಲ್ಲಿ ಪಾಪ ತೊಳೆದುಕೊಳ್ಳಲಿ. ಸಿಎಂ ಸಿದ್ದರಾಮಯ್ಯ ನಮ್ಮ ಭವಿಷ್ಯ, ನಮ್ಮಂತಹ ಅಹಿಂದ ಹುಡುಗರಿಗೆ ನೋವಾದರೆ ನಾವು ಸುಮ್ಮನೆ ಇರಲ್ಲ. ಪ್ರತಾಪ್ ಸಿಂಹ ಅವರೇ ಮೈಂಡ್ ಯುವರ್ ಟಂಗ್. ನಾವಂತೂ ಹೀಗೆ ಮಾತು ಮುಂದುವರಿದರೆ ಸುಮ್ಮನೆ ಇರಲ್ಲ ಎಂದು ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದರು.
ನಾಲ್ಕು ವರ್ಷದಿಂದ ಕಾಣೆಯಾಗಿದ್ದ ಹೆಗಡೆ: ಮನೋಹರ್ ವಾಗ್ದಾಳಿ
ಸಂಸದ ಅನಂತಕುಮಾರ್ ಹೆಗಡೆ ಕುಮಾರ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಹರಿಹಾಯ್ದಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಅನಂತಕುಮಾರ್ ಹೆಗಡೆ ನಾಲ್ಕು ವರ್ಷದಿಂದ ಕಾಣೆಯಾಗಿದ್ದರು. ಜನ ಸೇವೆ ಮಾಡಬೇಕಾದ ವ್ಯಕ್ತಿ, ಕೇಂದ್ರದಲ್ಲಿ ಮಂತ್ರಿಯಾಗಿದ್ದ ಇವರು ಸಂವಿಧಾನದ ವಿರೋಧಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಂತಹ ವ್ಯಕ್ತಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಳಸಿದ ಪದವನ್ನು ನಾವು ಖಂಡನೆ ಮಾಡುತ್ತಲಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸಿಎಂಗೆ “ಮಗನೆ” ಎಂದು ಹೇಳಿದ್ದಾರೆ. ನಾವು ಯಾವ ಮಗನೇ ಅಂತ ಕರೆಯಬೇಕು? ಎಂದು ಮನೋಹರ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: CM Siddaramaiah: ಸಿಎಂಗೆ ಏಕವಚನದಲ್ಲಿ ನಿಂದನೆ; ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ FIR
ಕಾಂಗ್ರೆಸ್‌ನಿಂದ ಪ್ರತಿಭಟನೆ
ಸಿಎಂ ವಿರುದ್ಧ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದ್ದು, ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಆವರಣದಲ್ಲಿ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅನಂತಕುಮಾರ್ ಹೆಗಡೆ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯ ಮಾಡಲಾಗಿದೆ. ಅಲ್ಲದೆ, ಅನಂತ ಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶವನ್ನು ಹೊರಹಾಕಲಾಗಿದೆ.