ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಮೀಸಲಾತಿ ವಿಚಾರವಾಗಿ ಆಗಾಗ ಸಂಕಷ್ಟಗಳು ಎದುರಾಗುತ್ತಲೇ ಇವೆ. ಒಂದಲ್ಲ ಒಂದು ಸಮುದಾಯದವರು “ಪರಿಶಿಷ್ಟ ಜಾತಿ”ಗೆ (Scheduled Castes) ಸೇರ್ಪಡೆ ಮಾಡುವ ಮೂಲಕ ಮೀಸಲಾತಿ (SC Reservation) ಕಲ್ಪಿಸಬೇಕು ಕೂಗು ಹಾಕುತ್ತಲೇ ಬರುತ್ತಿದ್ದಾರೆ. ಈಗ ರಾಜ್ಯ ಕಟಿಕ ಸಮಾಜದ ನಿಯೋಗವು (Delegation of Katika community) ರಾಜ್ಯ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಈ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಸಮುದಾಯದ ಹಲವು ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿದೆ.
ಕಟುಕ, ಕಟಿಕ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ನಿಯೋಗ ಒತ್ತಾಯಿಸಿತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇದನ್ನೂ ಓದಿ: Cauvery Water Dispute : ರಾಜ್ಯ ಸರ್ಕಾರಕ್ಕೆ ರೈತರು, ಕಾನೂನು ತಜ್ಞರು ಈಗ ನೆನಪಾದರೇ? ಬೊಮ್ಮಾಯಿ ಖಡಕ್ ಪ್ರಶ್ನೆ
ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಲಿ
ಕುರಿ, ಮೇಕೆ ಮಾಂಸ ಕಡಿಯುವುದು ಸಮಾಜದ ಕಸುಬು. ಹೀಗಾಗಿ ಕಟುಕ ಎನ್ನುವ ಹೆಸರೂ ಸಮಾಜಕ್ಕೆ ಅಂಟಿಕೊಂಡಿದ್ದು, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಕಟಿಕ ಸಮಾಜ ಸೇರಿಸಲ್ಪಟ್ಟಿದೆ. ನವ ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿದೆ. 2012ರ ಕುಲಶಾಸ್ತ್ರೀಯ ಅಧ್ಯಯನದಲ್ಲಿಯೂ ಸಮುದಾಯದ ಕುರಿತು ಸ್ಪಷ್ಟವಾಗಿ ನಮೂದಾಗಿದೆ. ಕರ್ನಾಟಕ ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸು ಮಾಡಲಾಗಿದೆ ಎಂದು ವಿವರಿಸಿದರು.
ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕಟಿಕ ಸಮಾಜದ ಮುಖಂಡರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ ಮನವಿ ಮಾಡಿದರು. ಈ ವೇಳೆ ಮಾಜಿ ಶಾಸಕ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.
ಅನಾಥ ಮಕ್ಕಳಿಗೂ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದ ಹಿಂದುಳಿದ ವರ್ಗಗಳ ಆಯೋಗ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (OBC Commission) ಸಿದ್ಧಪಡಿಸಿದ ವರದಿಯಲ್ಲಿ ಮಹತ್ವದ ಅಂಶವೊಂದು ಹೊರಬಿದ್ದಿದ್ದು, ಅನಾಥ ಮಕ್ಕಳಿಗೂ ಮೀಸಲಾತಿ (Reservation for orphaned children) ಕೊಡುವಂತೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ಅವರು ಈಚೆಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ.
ಅನಾಥ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಕೊಡಲು ಶಿಫಾರಸು ಮಾಡಿದ್ದೇವೆ. ರಾಜ್ಯದ ಬಾಲಮಂದಿರಗಳಲ್ಲಿ ಇರುವ ಮಕ್ಕಳು ಡಿಗ್ರಿ ಮತ್ತು ಎಂಎ ಮುಗಿಸಿದ್ದಾರೆ. ಇವರನ್ನು ನೋಡಿದಾಗ ಮೀಸಲಾತಿ ಕೊಡಬೇಕು ಅಂತ ನಿರ್ಧಾರ ಮಾಡಿದೆವು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದರು.
ಹೀಗೆ ಅನಾಥ ಮಕ್ಕಳಿಗೆ ಮೀಸಲಾತಿ ಕೊಡುವ ನಿರ್ಧಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಭೇಟಿ ಮಾಡಿ ಅಧ್ಯಯನ ಮಾಡಿದೆವು. ಅಲ್ಲದೆ, ಕೆಲವರು ಕೊರೊನಾ ಸಮಯದಲ್ಲಿ ತಂದೆ-ತಾಯಿಯರನ್ನು ಕಳೆದುಕೊಂಡರು. ಅಂಥವರಿಗೆ ಮೀಸಲಾತಿ ಸಿಗಬೇಕು. ಅತ್ಯಂತ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೊಡಲು ಹೇಳಿದ್ದೇವೆ. ಒಂದು ವೇಳೆ ಉದ್ಯೋಗ ಸೇರಿದಂತೆ ಯಾವುದೇ ಫಲಾನುಭವಿ ಕ್ಷೇತ್ರಕ್ಕೆ ಅಂತಹ ಮಕ್ಕಳಿಂದ ಅರ್ಜಿ ಬರದೇ ಇದ್ದರೆ ಅದರ ಉಪಯೋಗವನ್ನು ಇತರೆ ವರ್ಗದವರು ಪಡೆದುಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದರು.
ಇದನ್ನೂ ಓದಿ: Cauvery Water Dispute : ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಆಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ 5280 ಅನಾಥ ಮಕ್ಕಳು
ರಾಜ್ಯಾದ್ಯಂತ 5280 ಅನಾಥ ಮಕ್ಕಳು ಇದ್ದಾರೆ. ಇಂತಹ ಮಕ್ಕಳು ಸಾಮಾನ್ಯ ವರ್ಗದ ಜತೆ ಪೈಪೋಟಿ ಮಾಡಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಜತೆ ತಂದೆ, ತಾಯಿ ಇಲ್ಲದ ಮಕ್ಕಳು ಪೈಪೋಟಿ ನಡೆಸುವುದು ಸುಲಭವಿಲ್ಲ. ಚುನಾವಣೆಗೂ ಮೊದಲೇ ವರದಿ ನೀಡಿದ್ದೆವು. ಸರ್ಕಾರ ಗೆಜೆಟ್ ಹೊರಡಿಸಿದೆ. ಆದರೆ, ಅದು ಸರಿಯಿಲ್ಲದ ಕಾರಣ ಬದಲಾವಣೆ ಮಾಡಲು ಹೇಳಿದ್ದೇನೆ ಎಂದು ಜಯಪ್ರಕಾಶ್ ಹೆಗ್ಡೆ ಮಾಹಿತಿ ನೀಡಿದ್ದರು.