Site icon Vistara News

Arun Kumar Puthila : ಮುನಿಸು ಮರೆತು ಬಿಜೆಪಿ ಜತೆ ಕೈ ಜೋಡಿಸಿದ ಪುತ್ತಿಲ, ಕ್ಯಾಪ್ಟನ್‌ ನಿರಾಳ

Arun Kumar Puthila

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣರಾಗಿದ್ದ ಪುತ್ತಿಲ ಪರಿವಾರದ ನಾಯಕ ಅರುಣ್‌ ಕುಮಾರ್‌ ಪುತ್ತಿಲ (Arun Kumar puthila) ಅವರು ಲೋಕಸಭಾ ಚುನಾವಣೆಯಲ್ಲೂ (Lok Sabha Election 2024) ಮಗ್ಗುಲ ಮುಳ್ಳಾಗಬಹುದೇ ಎಂಬ ಆತಂಕ ಬಿಜೆಪಿಗಿತ್ತು. ಆದರೆ, ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿ ಮತ್ತು ಬಿವೈ ವಿಜಯೇಂದ್ರ (BY Vijayendra) ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ತಮ್ಮ ಮುನಿಸು ಮರೆತು ಚುನಾವಣೆಯಲ್ಲಿ ಬಿಜೆಪಿ ಬೆಂಬಲಕ್ಕೆ ನಿಲ್ಲಲು (Puthila to support BJP) ನಿರ್ಧರಿಸಿದ್ದಾರೆ.

ವಿಧಾನಸಭಾ ಚುನಾವಣೆಯ ಬಳಿಕ ಪುತ್ತಿಲ ಪರಿವಾರ ಮತ್ತು ಬಿಜೆಪಿ- ಸಂಘ ಪರಿವಾರದ ನಡುವೆ ಮಾತುಕತೆ ನಡೆದಿತ್ತು. ಮರಳಿ ಬಿಜೆಪಿ ಪರಿವಾರ ಸೇರಬೇಕು ಎಂಬ ಬೇಡಿಕೆಗೆ ಅರುಣ್‌ ಕುಮಾರ್‌ ಪುತ್ತಿಲ ಕೆಲವು ಷರತ್ತುಗಳನ್ನು ಇಟ್ಟಿದ್ದರು. ಬಿಜೆಪಿಯ ಸಂಘಟನಾತ್ಮಕ ಚಟುವಟಿಕೆಯಲ್ಲಿ ಪಾಲುದಾರಿಕೆ ಬಯಸಿದ್ದರು. ಅದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಮೈಸೂರಿನಲ್ಲಿ ಭೇಟಿಯಾಗಿದ್ದರು.

ಆದರೆ, ಬಿಜೆಪಿ ಪುತ್ತಿಲ ಹಾಕಿದ ಯಾವ ಷರತ್ತನ್ನೂ ಪೂರೈಸಿರಲಿಲ್ಲ. ಆಗ ಪುತ್ತಿಲ ಟೀಮ್‌ ಮತ್ತೆ ಎದ್ದುನಿಂತಿತು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧೆಯ ಸವಾಲನ್ನು ಹಾಕಿತ್ತು. ಆದರೆ, ಬಿಜೆಪಿ ಇದನ್ನೂ ತುಂಬಾ ಗಂಭೀರವಾಗಿ ಪರಿಗಣಿಸಿದಂತೆ ಕಂಡಿರಲಿಲ್ಲ.

ಈ ನಡುವೆ, ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಬದಲು ನಿವೃತ್ತ ಯೋಧ, ಸಂಘಟಕ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರಿಗೆ ಟಿಕೆಟ್‌ ನೀಡಿತು. ಈ ವಿದ್ಯಮಾನದಿಂದ ಸ್ವಲ್ಪ ತಣ್ಣಗಾದಂತೆ ಕಂಡ ಅರುಣ್‌ ಕುಮಾರ್‌ ಪುತ್ತಿಲ ಗುರುವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು.

Arun Kumar Puthila BJP

ತಮ್ಮ ಪರಿವಾರದೊಂದಿಗೆ ಬಂದ ಅವರು ಮೊದಲು ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿ ಅಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಜತೆ ಮಾತುಕತೆ ನಡೆಸಿದರು. ಬಳಿಕ ಅಲ್ಲಿಂದ ಅವರನ್ನು ಬಿ.ವೈ ವಿಜಯೇಂದ್ರ ಅವರ ನಿವಾಸಕ್ಕೆ ಕರೆತರಲಾಯಿತು. ಎರಡೂ ಕಡೆ ನಡೆದ ಮಾತುಕತೆಯ ಬಳಿಕ ಪುತ್ತಿಲ ಸಂಪೂರ್ಣವಾಗಿ ತಮ್ಮ ನಿಲುವನ್ನು ಬದಲಿಸಿದ್ದು ಬಿಜೆಪಿ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : Vistara news polling booth: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮೇಲುಗೈ; ಪುತ್ತಿಲಗೆ ಜನಬೆಂಬಲ!

ಪುತ್ತಿಲ ಅವರ ಜತೆ ಮತನಾಡಿದ ಬಳಿಕ ವಿವರ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಅವರು, ʻʻಪುತ್ತಿಲ ಪರಿವಾರ ಮೋದಿ ಪರಿವಾರದ ಜೊತೆಗೆ ಇರಬೇಕೆಂದು ನಿಶ್ಚಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಅಭ್ಯರ್ಥಿಯ ಗೆಲುವುಗಾಗಿ ಶ್ರಮಿಸುತ್ತಾರೆ. ಇಂದು ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಮಾತುಕತೆ ಆಗಿ, ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷ ಸೂಕ್ತವಾದ ಸ್ಥಾನಮಾನ ನೀಡಲಿದೆʼʼ ಎಂದು ಹೇಳಿದರು.

ಬಳಿಕ ಸ್ವತಃ ಅರುಣ್‌ ಕುಮಾರ್ ಪುತ್ತಿಲ ಅವರೇ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ʻʻನರೇಂದ್ರ ಮೋದಿ ಅವರ ಕೆಲಸ‌ ಕಾರ್ಯಗಳಿಗೆ ಶಕ್ತಿ ತುಂಬಲು ಮುಂದಾಗಿದ್ದೇನೆ. ಪುತ್ತಿಲ ಪರಿವಾರ ಹಾಗೂ ಮೋದಿ ಪರಿವಾರ ಒಟ್ಟಿಗೆ ಕೆಲಸ ಕಾರ್ಯ ಮಾಡಲಿದೆ. ಅಭ್ಯರ್ಥಿಯ ಗೆಲುವಿಗಾಗಿ ಶ್ರಮವಹಿಸುತ್ತೇವೆ. ದಕ್ಷಿಣ ಕನ್ನಡ ಅಭ್ಯರ್ಥಿಯನ್ನು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆʼʼ ಎಂದು ಅರುಣ್‌ ಕುಮಾರ್‌ ಪುತ್ತಿಲ ಹೇಳಿದರು.

Exit mobile version