ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Elections 2023) ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ ಪುತ್ತಿಲ ಪರಿವಾರವನ್ನು (Puttila Parivara) ಮತ್ತೆ ಭಾರತೀಯ ಜನತಾ ಪಕ್ಷದ ತೆಕ್ಕೆಗೆ ತರಬೇಕು ಎಂಬ ಪ್ರಯತ್ನಗಳು ತೆರೆ ಮನೆಯಲ್ಲಿ ನಡೆಯುತ್ತಿದ್ದವು. ಈಗ ವಿಲೀನ ಬಹುತೇಕ ಪಕ್ಕಾ ಎನ್ನುವಂತಾಗಿದೆ. ಅಲ್ಲದೆ, ಅರುಣ್ ಕುಮಾರ್ ಪುತ್ತಿಲ (Arun Kumar puttila) ಅವರಿಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
ಪುತ್ತಿಲ ಪರಿವಾರವು ಈಚೆಗೆ ಒಂದು ಸಮಾಲೋಚನಾ ಸಭೆಯನ್ನು ನಡೆಸಿ ಬಿಜೆಪಿ ಜತೆ ವಿಲೀನಕ್ಕೆ ಹಲವು ಷರತ್ತುಗಳನ್ನು (Conditions to Merger) ವಿಧಿಸಲಾಗಿತ್ತು. ಜತೆಗೆ ಅವುಗಳ ಪೂರೈಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿತ್ತು. ಈಗ ಬಿಜೆಪಿ ಹೈಕಮಾಂಡ್‌ನಿಂದ ಪಕ್ಷ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪುತ್ತೂರಿನಲ್ಲಿ ಕಗ್ಗಂಟಾಗಿ ಪರಿಣಮಿಸಿದ್ದ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ವಿಚಾರ ಬಹುತೇಕ ಸುಖ್ಯಾಂತಗೊಳ್ಳುವತ್ತ ಸಾಗಿದೆ. ರಾಜ್ಯ ಬಿಜೆಪಿ ನಾಯಕರಿಂದ ಅರುಣ್ ಪುತ್ತಿಲರಿಗೆ ಗೌರವಯುತ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಅರುಣ್ ಪುತ್ತಿಲ ಅವರಿಗೆ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿ.ಎಸ್. ಯಡಿಯೂರಪ್ಪ ಮಾತುಕತೆ ಯಶಸ್ವಿ
ರಾಜ್ಯ ಬಿಜೆಪಿಯ ವರಿಷ್ಠರಾದ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಅರುಣ್ ಪುತ್ತಿಲ ಜತೆ ಮಾತನಾಡಿದ್ದು ಪಕ್ಷದಲ್ಲಿ ಗೌರವಯುತ ಸ್ಥಾನ ನೀಡುವುದಾಗಿ ತಿಳಿಸಿದ್ದಾರೆ. ಪಕ್ಷದ ಹಿರಿಯರ ಮಾತಿಗೆ ಅರುಣ್ ಪುತ್ತಿಲ ಸಮ್ಮತಿ ಸೂಚಿಸಿರುವುದಾಗಿ ಪುತ್ತಿಲ ಪರಿವಾರದ ಉನ್ನತ ಮೂಲಗಳು ಖಚಿತ ಪಡಿಸಿವೆ.
ಶೀಘ್ರ ಬಿ.ವೈ. ವಿಜಯೇಂದ್ರರನ್ನು ಭೇಟಿ ಮಾಡಲಿರುವ ಪುತ್ತಿಲ
ಈ ಕುರಿತು ದೂರವಾಣಿ ಮೂಲಕ ವರದಿಗಾರರ ಜತೆ ಮಾತನಾಡಿದ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ, “ಪುತ್ತಿಲ ಪರಿವಾರ ಹಾಗೂ ಬಿಜೆಪಿಗೆ ಸೇರಿದ ಎಲ್ಲರಿಗೂ ಇಂದಿನ ಬೆಳವಣಿಗೆ ಖುಷಿ ಸಂದಿದೆ. ನಾವು ಹಿಂದೆಯೂ ಬಿಜೆಪಿಯೇ ಆಗಿ ಇದ್ದೆವು. ಮುಂದಿನ ಕೆಲ ದಿನಗಳಲ್ಲಿ ನಾವು ಇನ್ನಷ್ಟು ಸಕ್ರಿಯವಾಗಿ ಬಿಜೆಪಿ ಜತೆ ಗುರುತಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವ ವಾತಾವರಣ ನಿರ್ಮಾಣವಾಗಲಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಅರುಣ್ ಪುತ್ತಿಲ ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: CM Janaspandana: ಮೂವರ ಚಿಕಿತ್ಸೆಗೆ ಸ್ಥಳದಲ್ಲೇ 10 ಲಕ್ಷ ರೂ. ಘೋಷಿಸಿದ ಸಿಎಂ
ಪಕ್ಷ ಸೇರ್ಪಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನ ಮಾರ್ತ, “ನಾವು ಬಿಜೆಪಿಯೇ… ಹಾಗಾಗಿ ನಾವು ಮತ್ತೆ ಸೇರ್ಪಡೆಯಾಗುವ ಅಗತ್ಯವಿಲ್ಲ. ಪುತ್ತಿಲ ಪರಿವಾರವನ್ನು ವಿಲೀನಗೊಳಿಸುವುದಷ್ಟೇ ಬಾಕಿ ಇರುವುದು. “ಇಂಥದ್ದೊಂದು ಸುಸಂದರ್ಭ ಕೂಡಿ ಬರಲು ಕಾರಣರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೆ.ವಿ. ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನವಾಗುವ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.