ದೆಹಲಿ: ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind kejriwal) ಅವರನ್ನು ಸೋಮವಾರ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ಅವರನ್ನು ಕೇಂದ್ರ ಕಾರಾಗೃಹದ ಜೈಲು ನಂ.2ರಲ್ಲಿ ಇರಿಸಲಾಗಿದ್ದು, ಈ ಕೊಠಡಿಯ ಹತ್ತಿರದಲ್ಲೇ ಭೂಗತ ಪಾತಕಿ, ಭಯೋತ್ಪಾದಕರು ಮತ್ತು ದರೋಡೆಕೋರರೂ ಇದ್ದಾರೆ!
ಸೋಮವಾರ ರೋಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಿದ ನಂತರ ಅವರನ್ನು ಏಪ್ರಿಲ್ 15ರವರೆಗೆ 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ದರೋಡೆಕೋರ ನೀರಜ್ ಬವಾನಾ ಮತ್ತು ಭಯೋತ್ಪಾದಕ ಜಿಯಾವುರ್ ರೆಹಮಾನ್ ಅವರು ತಿಹಾರ್‌ನಲ್ಲಿ ಕೇಜ್ರಿವಾಲ್ ಅವರ ಹತ್ತಿರದ ಕೊಠಡಿಗಳಲ್ಲೇ ಇದ್ದಾರೆ.
ಬಿಗಿ ಭದ್ರತೆ ಇರುವ ಕಾರಣ ಹೆಚ್ಚಿನ ಹೈಪ್ರೊಫೈಲ್ ಕೇಸ್‌ಗಳ ಆರೋಪಿಗಳನ್ನು ಇದೇ ಸೆಲ್‌ನಲ್ಲಿ ಇರಿಸಲಾಗುತ್ತದೆ. 2015ರಲ್ಲಿ ಇಂಡೋನೇಷ್ಯಾದಲ್ಲಿ ಭೂಗತ ಪಾತಕಿ ಛೋಟಾ ರಾಜನ್‌ನನ್ನು ಬಂಧಿಸಿದ ಬಳಿಕ ತಿಹಾರ್ ಜೈಲಿನ ಇದೇ ಸೆಲ್‌ನಲ್ಲಿ ಇರಿಸಲಾಗಿತ್ತು. 2018ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತ ಕೊರೋನಾ ಸಮಯದಲ್ಲಿ ಸಾವನ್ನಪ್ಪಿದ್ದ.
ನೀರಜ್ ಬವಾನಾ ಕುಖ್ಯಾತ ದರೋಡೆಕೋರನಾಗಿದ್ದು, ಅವನ ವಿರುದ್ಧ 40ಕ್ಕೂ ಹೆಚ್ಚು ಕೊಲೆ, ಕೊಲೆ ಯತ್ನ ಮತ್ತು ಸುಲಿಗೆ ಪ್ರಕರಣಗಳು ದಾಖಲಾಗಿವೆ, ಜಿಯಾವುರ್ ರೆಹಮಾನ್ ಇಂಡಿಯನ್ ಮುಜಾಹಿದೀನ್ (IM) ಸದಸ್ಯನಾಗಿದ್ದು, ಆತನ ವಿರುದ್ಧ NIA ಪ್ರಕರಣ ದಾಖಲಾಗಿದೆ.
ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ ಸಂಜೆ 4 ಗಂಟೆಗೆ ತಿಹಾರ್‌ಗೆ ಕರೆತರಲಾಯಿತು ಮತ್ತು ಜೈಲು ಸಂಖ್ಯೆ 2 ರಲ್ಲಿ ಇರಿಸಲಾಯಿತು ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಅವರನ್ನು 24 ಗಂಟೆಗಳ ಕಾಲ ಕಣ್ಗಾವಲು ಇರಿಸಲಾಗುವುದು ಎಂದು ಹೇಳಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಶುಗರ್ ಮಟ್ಟ ಸ್ವಲ್ಪ ಕಡಿಮೆಯಾಗಿದೆ, ನಮ್ಮ ಜೈಲು ವೈದ್ಯರ ಸಲಹೆಯಂತೆ ಅವರಿಗೆ ಔಷಧಿಗಳನ್ನು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ದಿನಚರಿ
ಜೈಲಿನಲ್ಲಿ ಮೊದಲ ದಿನ ಬೆಳಗ್ಗೆ ಕೇಜ್ರಿವಾಲ್‌ಗೆ ಉಪಾಹಾರಕ್ಕಾಗಿ ಬ್ರೆಡ್ ಮತ್ತು ಚಹಾವನ್ನು ನೀಡಲಾಯಿತು. 6.40ರ ಸುಮಾರಿಗೆ ಬೆಳಗಿನ ಉಪಾಹಾರವನ್ನು ನೀಡಲಾಯಿತು. ಅದರ ನಂತರ ಅವರ ಕೋಣೆಯಲ್ಲಿ ಸುದೀರ್ಘ ಅವಧಿ ಧ್ಯಾನ ಮಾಡಿದರು. ಬಳಿಕ ಯೋಗ ಕೂಡ ಮಾಡಿದ್ದಾರೆ. ಅವರ ದೇಹದಲ್ಲಿ ಸಕ್ಕರೆ ಮಟ್ಟವೂ ಕುಸಿದಿದೆ.
ಇದನ್ನೂ ಓದಿ:Viral News: ಸಖತ್ ವೈರಲ್ ಆಯ್ತು ಅಜ್ಜಿ ತಯಾರಿಸಿದ ನುಗ್ಗೆಕಾಯಿ ಬಾರ್ಬೆಕ್ಯೂ ರೆಸಿಪಿ!
ತಿಹಾರ್ ಜೈಲು ನಂ. 2 ರಲ್ಲಿ ಬಂದಿಯಾಗಿರುವ ಕೇಜ್ರಿವಾಲ್ ಅವರಿಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಲು ಅನುಮತಿಸಲಾಗಿದೆ ಮತ್ತು ಅವರ ಸಕ್ಕರೆ ಮಟ್ಟವು ಸಾಮಾನ್ಯ ಸ್ಥಿತಿಗೆ ಬರುವವರೆಗೆ ಅದನ್ನು ನೀಡಲಾಗುತ್ತದೆ. ತಿಹಾರ್ ಜೈಲಿಗೆ ಬಂದ ದಿನ, ಮುಖ್ಯಮಂತ್ರಿಗಳಿಗೆ ಮಧ್ಯಾಹ್ನ ಚಹಾ ಮತ್ತು ರಾತ್ರಿಯ ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಲಾಯಿತು ಎಂದು ಪಿಟಿಐ ವರದಿ ಮಾಡಿದೆ.