ಹೊಸದಿಲ್ಲಿ: ಹೊಸ ಮದ್ಯ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗಿರುವ ದಿಲ್ಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್ (Arvind Kejriwal) ಅಸ್ವಸ್ಥರಾಗಿದ್ದು, 4.5 ಕೆ.ಜಿ. ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (AAP) ಹೇಳಿಕೊಂಡಿದೆ. ಆದರೆ, ತಿಹಾರ್ ಜೈಲಿನ ಅಧಿಕಾರಿಗಳು ಇದು ಸುಳ್ಳು, ಕೇಜ್ರಿವಾಲ್ ಆರೋಗ್ಯದಿಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ತಿಹಾರ್ ಜೈಲಿನಲ್ಲಿರುವ ಅಧಿಕಾರಿಗಳು ಆಪ್ ಮುಖಂಡರು ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ. ಮಾರ್ಚ್ 21ರಂದು ಬಂಧಿಸಲ್ಪಟ್ಟ ಕೇಜ್ರಿವಾಲ್ ಅವರನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಿಹಾರ್ ಜೈಲಿನಲ್ಲಿರುವ (Tihar jail) ಅವರು ಚೆನ್ನಾಗಿದ್ದಾರೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಶುಗರ್ ಏರುಪೇರು
ತಿಹಾರ್ ಜೈಲಿನ ಜೈಲು ಸಂಖ್ಯೆ 2 ರ 14X8 ಅಡಿ ಸೆಲ್‌ನಲ್ಲಿ ಬಂಧಿಸಲ್ಪಟ್ಟಿರುವ ಕೇಜ್ರಿವಾಲ್ ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಳೆದ ಕೆಲವು ದಿನಗಳಿಂದ ಏರುಪೇರಾಗುತ್ತಿದೆ. ಒಂದು ಹಂತದಲ್ಲಿ 50ಕ್ಕಿಂತ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ಆಪ್ ಮುಖಂಡರು.
ಅರವಿಂದ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಲು ಔಷಧಗಳನ್ನು ನೀಡಲಾಗಿದೆ. ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಕ್ಕರೆ ಸಂವೇದಕವನ್ನು ಸಹ ಒದಗಿಸಲಾಗಿದೆ ಮತ್ತು ಯಾವುದೇ ಹಠಾತ್ ಕುಸಿತವನ್ನು ತಡೆಯಲು ಟೋಫಿಗಳನ್ನು ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಯಿಂದಲೇ ಊಟ
ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮನೆಯಿಂದಲೇ ವ್ಯವಸ್ಥೆ ಮಾಡಲಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಗಾಗಿ ಅವರ ಸೆಲ್ ಬಳಿ ತ್ವರಿತ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಕೇಜ್ರಿವಾಲ್ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ನಿ ಸುನೀತಾ ಅವರೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಅವರ ವಕೀಲರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ.
ತನಿಖೆಗೆ ಸಹಕರಿಸುತ್ತಿಲ್ಲ
ದೆಹಲಿ ಮದ್ಯ ಹಗರಣದ ಪ್ರಮುಖ ಆರೋಪಿ ಆಮ್ ಆದ್ಮಿ ಪಕ್ಷ (ಎಎಪಿ) ಎಂದು ಇಡಿ ಹೇಳಿದ್ದು, ಅಪರಾಧದಿಂದ ಬಂದ ಆದಾಯದ ಸುಮಾರು 45 ಕೋಟಿ ರೂ. ಅನ್ನು 2022 ರ ಗೋವಾ ವಿಧಾನಸಭಾ ಚುನಾವಣೆ ವೇಳೆ ಎಎಪಿಯ ಪ್ರಚಾರಕ್ಕೆ ಬಳಸಿಕೊಂಡಿದೆ ಎಂದು ಹೇಳಿದೆ.
ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವುದು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಅಡ್ಡಿಯಾಗಬಹುದು ಎಂದು ಜಾರಿ ನಿರ್ದೇಶನಾಲಯವು ಕಳವಳ ವ್ಯಕ್ತಪಡಿಸಿದ ಬಳಿಕ ದೆಹಲಿ ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಕೇಜ್ರಿವಾಲ್ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಕೇಂದ್ರೀಯ ಸಂಸ್ಥೆ ಹೇಳಿದೆ. ಮಧ್ಯಂತರ ಪರಿಹಾರಕ್ಕಾಗಿ ದೆಹಲಿ ಮುಖ್ಯಮಂತ್ರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ.
ಇದನ್ನು ಓದಿ: Manmohan Singh: 33 ವರ್ಷದ ಬಳಿಕ ಮನಮೋಹನ್ ಸಿಂಗ್ ಇಂದು ರಾಜ್ಯಸಭೆಯಿಂದ ನಿವೃತ್ತಿ; ʼಒಂದು ಯುಗ ಮುಗಿಯಿತುʼ
ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ
ಲೋಕಸಭಾ ಚುನಾವಣೆ ಹತ್ತಿರವಿರುವಾಗಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಏಪ್ರಿಲ್ 15 ರವರೆಗೆ ತಿಹಾರ್ ಜೈಲಿನಲ್ಲಿ ಬಂಧನದಲ್ಲಿ ಇರಿಸಲಾಗಿದೆ.
ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿ ಮುಗಿದ ಅನಂತರ ಕೇಜ್ರಿವಾಲ್ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಲಾಗಿತ್ತು. ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಿದ್ದು ನಂತರ ಅವರಿಗೆ ಹೆಚ್ಚುವರಿ ಕಸ್ಟಡಿ ಬೇಕಾಗಬಹುದು ಎಂದು ಹೇಳಿದೆ.
ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಇತರ ಕೈದಿಗಳಂತೆ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲೇ ಏಳಬೇಕು. ನಂತರ ಚಹಾ ಮತ್ತು ಬ್ರೆಡ್ ಉಪಾಹಾರವಾಗಿ ಸೇವಿಸುತ್ತಾರೆ.
ಸ್ನಾನ ಮಾಡಿದ ಬಳಿಕ ವಿಚಾರಣೆಗೆ ನ್ಯಾಯಾಲಯಕ್ಕೆ ಹೋಗುತ್ತಾರೆ ಅಥವಾ ತಮ್ಮ ವಕೀಲರನ್ನು ಭೇಟಿಯಾಗುತ್ತಾರೆ.
ಮಧ್ಯಾಹ್ನ ದಾಲ್, ಸಬ್ಜಿ, ರೊಟ್ಟಿ ಮತ್ತು ಅನ್ನವನ್ನು ಒಳಗೊಂಡ ಊಟ ನೀಡಲಾಗುತ್ತದೆ. ಬಳಿಕ ವಿಶ್ರಾಂತಿಗಾಗಿ ತಮ್ಮ ಕೋಣೆಗಳಲ್ಲಿ ಇರಬೇಕಾಗುತ್ತದೆ. ಅಪರಾಹ್ನ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಲಾಗುತ್ತದೆ. ಸಂಜೆ ವಕೀಲರೊಂದಿಗೆ ಮಾತನಾಡಬಹುದು. ಬಳಿಕ ಸಂಜೆಯ ಊಟ ಮುಗಿಸಿ 7 ಗಂಟೆ ಸುಮಾರಿಗೆ ತಮ್ಮ ಕೋಣೆಗಳಲ್ಲಿ ಬಂಧಿಸಲಾಗುತ್ತದೆ. ಜೈಲಿನಲ್ಲಿರುವ ಟಿವಿ ವೀಕ್ಷಣೆಗೆ ಅವಕಾಶವಿದೆ.