Site icon Vistara News

Opposition Leader : ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆರ್.‌ ಅಶೋಕ್‌ ಆಯ್ಕೆ; ಬಿಎಸ್‌ವೈ ಮೇಲುಗೈ

Vistara Editorial, BJP appoints opposition leader and it Should work constructively

ಬೆಂಗಳೂರು: ಬಿಜೆಪಿಯಿಂದ ವಿರೋಧ ಪಕ್ಷದ (Opposition Leader) ನಾಯಕನ ಆಯ್ಕೆ ಕೊನೆಗೂ ಅಂತಿಮವಾಗಿದೆ. ಮಾಜಿ ಡಿಸಿಎಂ ಆರ್.‌ ಅಶೋಕ್‌ (R Ashok) ಅವರನ್ನು ವಿಪಕ್ಷ ನಾಯಕ ಎಂದು ಬಿಜೆಪಿ ಹೈಕಮಾಂಡ್‌ (BJP high command) ಘೋಷಣೆ ಮಾಡಿದೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಅವರ ಪಾರುಪತ್ಯ ಮುಂದುವರಿದಂತಾಗಿದೆ. ಯಡಿಯೂರಪ್ಪ ಅವರು ಸೂಚಿಸಿದವರೇ ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರಾಗಿ ಆಯ್ಕೆಯಾದಂತೆ ಆಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಗಿದೆ. ಕೇಂದ್ರದಿಂದ ಆಗಮಿಸಿದ್ದ ಬಿಜೆಪಿ ವೀಕ್ಷಕರಾದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಅವರು ಶಾಸಕರ ಅಭಿಪ್ರಾಯವನ್ನು ಪಡೆದು ಒಮ್ಮತದ ತೀರ್ಮಾನ ಎಂದು ಪ್ರತಿಪಕ್ಷ ನಾಯಕರನ್ನಾಗಿ ಆರ್.‌ ಅಶೋಕ್‌ ಹೆಸರನ್ನು ಘೋಷಣೆ ಮಾಡಿದ್ದಾರೆ.

ಬಿ.ಎಸ್.‌ ಯಡಿಯೂರಪ್ಪ ಮೇಲುಗೈ

ಆರ್.‌ ಅಶೋಕ್‌ ಆಯ್ಕೆ ಮೂಲಕ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿದಂತೆ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಶಿಷ್ಯ ಆರ್‌. ಅಶೋಕ್‌ ಅವರನ್ನು ಪ್ರತಿಷ್ಠಾಪನೆ ಮಾಡುವಲ್ಲಿ ಯಶ ಕಂಡಂತೆ ಆಗಿದೆ.

ಅಶೋಕ್‌ ಪರ ಮೊಳಗಿದ ಘೋಷಣೆ

ಇನ್ನು ಇತ್ತ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದರೆ, ಅತ್ತ ಖಾಸಗಿ ಹೋಟೆಲ್‌ ಹೊರಗೆ ಆರ್.‌ ಅಶೋಕ್‌ ಪರ ಕಾರ್ಯಕರ್ತರು, ಮುಖಂಡರು ಘೋಷಣೆಗಳನ್ನು ಕೂಗಿದ್ದಾರೆ. ಪದ್ಮನಾಭನಗರ ಕ್ಷೇತ್ರದ ಅಶೋಕ್ ಬೆಂಬಲಿಗರು ಅಲ್ಲಿಗೆ ಆಗಮಿಸಿ, ಬಿ.ಎಸ್.‌ ಯಡಿಯೂರಪ್ಪ ಹಾಗೂ ಆರ್. ಅಶೋಕ್ ಪರ ಜೈಕಾರ ಕೂಗಿದ್ದಾರೆ.

ಅಶಿಸ್ತು ತೋರಿ ಹೊರ ನಡೆದ ಯತ್ನಾಳ್‌?

ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕೇಂದ್ರದ ವೀಕ್ಷಕರ ಎದುರು ಅಶಿಸ್ತು ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ವೀಕ್ಷಕರು ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಅಸಮಾಧಾನ ವ್ಯಕ್ತಪಡಿಸಿ ಯತ್ನಾಳ್ ಹೊರ ನಡೆದಿದ್ದಾರೆ. ನಿಷ್ಠಾವಂತರಿಗೆ ಅವಕಾಶ ಇಲ್ಲ ಎಂದು ಸಿಟ್ಟಿನಿಂದ ಹೊರನಡೆದರು. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ತೋರಿಸಿದಂತೆ ಆಗಿದೆ. ಯಾವುದೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಆದರೆ, ಈಗ ಬಹಿರಂಗವಾಗಿ ಅಸಮಾಧಾನ ಹೊರಹಾಕಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಕರ್ನಾಟಕ ಪ್ರಾಶಸ್ತ್ಯ ಕೊಡಲಿಲ್ಲವೆಂದು ಅಸಮಾಧಾನ?

ಇಲ್ಲಿಯವರೆಗೆ ಪ್ರಮುಖ ಸ್ಥಾನವನ್ನು ದಕ್ಷಿಣ ಕರ್ನಾಟಕ ಭಾಗದವರೇ ಪಡೆಯುತ್ತಿದ್ದಾರೆ. ಬಿಜೆಪಿ ಬೆಳವಣಿಗೆಗೆ ಉತ್ತರ ಕರ್ನಾಟಕದವರ ಕೊಡುಗೆಯೂ ಸಾಕಷ್ಟು ಇದೆ. ಹೀಗಾಗಿ ಈ ಭಾಗದವರಿಗೆ ಪ್ರತಿಪಕ್ಷ ನಾಯಕ ಸ್ಥಾನವನ್ನು ಕೊಡಬೇಕು ಎಂಬುದು ಬಸನಗೌಡ ಪಾಟೀಲ್‌ ಯತ್ನಾಳ್‌ ವಾದವಾಗಿತ್ತು.

ಕೇಂದ್ರದಿಂದ ಬಿಜೆಪಿ ವೀಕ್ಷಕರಾಗಿ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಹಾಗೂ ದುಷ್ಯಂತ್ ಕುಮಾರ್ ಗೌತಮ್ (Dushyant Kumar Gautam) ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, ಪ್ರತಿಪಕ್ಷದ ನಾಯಕ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: Opposition Leader : ಎಲ್ಲರನ್ನೂ ಗೆಲ್ಲಬಲ್ಲ ಅಜಾತಶತ್ರು ಸಾಮ್ರಾಟ್‌ ಅಶೋಕ್‌ ಈಗ ವಿಪಕ್ಷ ನಾಯಕ

ಉತ್ತರ ಕರ್ನಾಟಕದ ಜನರು ಊಟ ಹಾಕಿದ್ದಾರೆ. ಈ ಸ್ಥಾನವನ್ನು ಉ.ಕ. ಮಂದಿಗೆ ಕೊಡದೇ ಹೋದರೆ ಜನರೇ ತೀರ್ಮಾನ ಮಾಡುತ್ತಾರೆ. ನನಗೆ ಯಾರ ಭಯ ಇಲ್ಲ. ಉತ್ತರ ಕರ್ನಾಟಕ, ಹಿಂದುತ್ವದ ಹಿನ್ನೆಲೆಯಲ್ಲಿ ನಾನು ಕೇಳುತ್ತೇನೆ. ಶಾಸಕಾಂಗ ಸಭೆಯಲ್ಲಿ ಇದನ್ನು ಪ್ರಶ್ನೆ ಮಾಡುತ್ತೇನೆ. ಪಂಚಮಸಾಲಿಗಳಿಗೆ ಯಾವಾಗಲೂ ಅನ್ಯಾಯ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಬಂದಾಗಿನಿಂದ ಅನ್ಯಾಯ ಆಗಿದೆ. ದಲಿತರಿಗೆ, ಒಕ್ಕಲಿಗರಿಗೆ, ಎಸ್‌ಟಿಗೆ ಮೀಸಲಾತಿ ಕೊಟ್ಟಿರುವ ನಮ್ಮಿಂದ ಪಂಚಮಸಾಲಿಗೆ ಅನ್ಯಾಯ ಆಗಿದೆ. ಈ ಬಗ್ಗೆ ಬೊಮ್ಮಾಯಿ ಜತೆ ಮಾತನಾಡಿದ್ದೇನೆ‌. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಬೇಕು ಅಂತ ಮಾತನಾಡಿದ್ದೇವೆ. ಈ ವಿಚಾರದಲ್ಲಿ ನಾವೆಲ್ಲ ಒಂದು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದರು.

ರಮೇಶ್‌ ಜಾರಕಿಹೊಳಿ ಸಾಥ್‌

ಸಭೆ ಆರಂಭವಾಗುತ್ತಿದಂತೆ ಅಸಮಾಧಾನವನ್ನು ಹೊರಗೆ ಹಾಕಿ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊರನಡೆಯುತ್ತಿದ್ದಂತೆ ಅವರಿಗೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi) ಸಾಥ್‌ ನೀಡಿದ್ದರು. ಇನ್ನು ಕಳೆದ ಬಾರಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಸಹ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು.

Exit mobile version