ಬೆಂಗಳೂರು: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ (Assembly Elections 2023) ಎನ್ನುವುದು ಗ್ಯಾರಂಟಿಗಳ (Guarantee fight) ನಡುವಿನ ಕದನ ಎಂದೇ ಜನಜನಿತವಾಗಿತ್ತು. ಕಾಂಗ್ರೆಸ್ ಕರ್ನಾಟಕ ಮಾದರಿಯನ್ನು (Karnataka Model) ಇಟ್ಟುಕೊಂಡು ಗ್ಯಾರಂಟಿಗಳ ಸುರಿಮಳೆಯನ್ನು ಸುರಿಸಿತ್ತು. ಅದಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಇತರ ಪಕ್ಷಗಳು ಕೂಡಾ ಫ್ರೀ ಬೀ ಮೂಲಕ ಸಡ್ಡು ಹೊಡೆದಿದ್ದವು. ಅಂತಿಮವಾಗಿ ಭಾನುವಾರ (ಡಿಸೆಂಬರ್ 3) ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (Election results ಪ್ರಕಟವಾಗಿದೆ. ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಭರ್ಜರಿ ಜಯವನ್ನು ಸಾಧಿಸಿದ್ದರೆ, ಕಾಂಗ್ರೆಸ್ ತೆಲಂಗಾಣವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಈ ಚುನಾವಣೆಯಲ್ಲಿ ಉಚಿತ ಕೊಡುಗೆಗಳು ಪ್ರಭಾವ ಬೀರಿದವೇ ಎಂಬ ಪ್ರಶ್ನೆ ಕೇಳಿದರೆ ಹೌದು ಅಥವಾ ಇಲ್ಲ ಎಂಬ ಎರಡೂ ಉತ್ತರಗಳು ದೊರೆಯುತ್ತವೆ. ಯಾಕೆಂದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಅದುವೇ ಪ್ರಮುಖ ಕಾರಣವಾಗಿತ್ತು. ಇತ್ತ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢದಲ್ಲಿ ಬಿಜೆಪಿ ಕೂಡಾ ಉಚಿತ ಕೊಡುಗೆಗಳನ್ನು ಘೋಷಣೆ ಮಾಡಿತ್ತು. ಹಾಗಿದ್ದರೆ ಯಾವ ಯಾವ ಘೋಷಣೆಗಳನ್ನು ಎರಡು ಪ್ರಮುಖ ಪಕ್ಷಗಳು ಮಾಡಿದ್ದವು. ಅದಕ್ಕೆ ಏನು ಫಲ ಸಿಕ್ಕಿದೆ ಎನ್ನುವುದನ್ನು ಇಲ್ಲಿ ನೋಡೋಣ.
ರಾಜಸ್ಥಾನ ಚುನಾವಣೆಯಲ್ಲಿ ಏನೇನು ಭರವಸೆ ನೀಡಲಾಗಿತ್ತು?
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು
1.ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು.
2. ರೂಪಾಯಿಗೆ ಒಂದು ಕೆ.ಜಿ ಗೋವಿನ ಸಗಣಿ ವಿತರಣೆ ಮಾಡುವುದು.
3.ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ವಿತರಣೆ ಮಾಡುವುದು
4.ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ.
5.ಒಂದು ಕೋಟಿ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್‌ಫೊನ್ ನೀಡುವುದು.
ಬಿಜೆಪಿಯ ಪ್ರಮುಖ ಭರವಸೆಗಳು
1.ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ಉಳಿತಾಯ ಬಾಂಡ್‌ಗಳು
2.ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮಿ ಯೋಜನೆಯಂತೆಯೇ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ 2 ಲಕ್ಷ ರೂ. ಉಳಿತಾಯ ಬಾಂಡ್.
3. ಉಜ್ವಲಾ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಮೇಲೆ 450 ರೂ. ಸಬ್ಸಿಡಿ
4. ಮಾತೃ ವಂದನಾ ಯೋಜನೆಯ ಮೊತ್ತವನ್ನು 5000 ರೂ.ನಿಂದ 8000 ರೂ.ವರೆಗೆ ಹೆಚ್ಚಳ
5. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚಗಳಿಗಾಗಿ ನೇರ ನಗದು ಮೂಲಕ 1200 ರೂ.
ಫಲಿತಾಂಶ ಏನಾಯಿತು?: ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಬಿಜೆಪಿ 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ 69 ಮತ್ತು ಇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ- ಕಾಂಗ್ರೆಸ್ ನೀಡಿದ ಭರವಸೆಗಳು
ಕಾಂಗ್ರೆಸ್ ನೀಡಿದ ಭರವಸೆಗಳೇನು?
1. ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂ. ಆರ್ಥಿಕ ಸಹಾಯ
2. 25 ಲಕ್ಷದ ತನಕ ಆರೋಗ್ಯ ವಿಮೆ
3. 2 ಲಕ್ಷದ ತನಕ ರೈತರ ಕೃಷಿ ಸಾಲ ಮನ್ನಾ,
4. ಕ್ವಿಂಟಾಲ್‌ಗೆ 2,500 ರೂ. ದರದಲ್ಲಿ ಭತ್ತ ಖರೀದಿ.
5. ಪ್ರತಿ ಮನೆಗೆ 100 ಯೂನಿಟ್ ಉಚಿತ ವಿದ್ಯುತ್
ಬಿಜೆಪಿ ನೀಡಿದ ಭರವಸೆಗಳೇನು?
1.ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ
2.ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು
3. ಬಡವರಿಗೆ 450 ರೂಪಾಯಿಗೆ ಒಂದು ಅಡುಗೆ ಅನಿಲ ಸಿಲಿಂಡರ್
4. ಎಲ್‌ಕೆಜಿಯಿಂದ ಪಿಜಿವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಎಲ್ಲರಿಗೂ 12ನೇ ತರಗತಿವರೆಗೆ ಉಚಿತ ಶಿಕ್ಷಣ
5. ಪ್ರತಿ ಬಾಲಕಿಗೆ ಎರಡು ಲಕ್ಷ ರೂ. (ಬಾಲಕಿಗೆ 21 ವರ್ಷವಾದ ಬಳಿಕ ಪಾವತಿ) ಹಣಕಾಸು ನೆರವು
(ಪ್ರಣಾಳಿಕೆಗೆ ಮೊದಲೇ ಬಡ ಗೃಹಿಣಿಯರಿಗೆ ತಿಂಗಳಿಗೆ 1250 ರೂ. ನೀಡುವ ಲಾಡ್ಲೀ ಬೆಹನ್ ಯೋಜನೆ ಇತ್ತು)
ಫಲಿತಾಂಶ ಏನಾಯಿತು?: ಮಧ್ಯ ಪ್ರದೇಶದ 230 ಕ್ಷೇತ್ರಗಳ ಪೈಕಿ ಬಿಜೆಪಿ 164 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ 65 ಸ್ಥಾನಗಳಿಗೆ ಸೀಮಿತಗೊಂಡಿದೆ. ಇತರರಿಗೆ ಸಿಕ್ಕಿದ್ದು ಒಂದು ಸ್ಥಾನ ಮಾತ್ರ
ಛತ್ತೀಸ್ ಗಢದಲ್ಲಿ ಗ್ಯಾರಂಟಿಗಳ ಸವಾಲು ಹೇಗಿತ್ತು?
ಕಾಂಗ್ರೆಸ್ ನೀಡಿದ ಪ್ರಮುಖ ಭರವಸೆಗಳು
1. ಗ್ಯಾಸ್ ಸಿಲಿಂಡರ್‌ಗೆ ₹500 ಸಬ್ಸಿಡಿ, ಭತ್ತಕ್ಕೆ 3,200 ರೂಪಾಯಿ ಬೆಂಬಲ ಬೆಲೆ
2. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್,
3. ಕೆ.ಜಿಯಿಂದ ಪಿ.ಜಿವರೆಗೆ ಉಚಿತ ಶಿಕ್ಷಣ, ರೈತರ ಸಾಲ ಮನ್ನಾ
4. 10 ಲಕ್ಷದವರೆಗೆ ಉಚಿತ ಚಿಕಿತ್ಸೆ, ಸ್ವಸಹಾಯ ಸಂಘಗಳ ಸಾಲ ಮನ್ನಾ
5. ಯುವಕರಿಗೆ ವ್ಯಾಪಾರ ಸಾಲಗಳಲ್ಲಿ 50% ಸಬ್ಸಿಡಿ
ಬಿಜೆಪಿ ನೀಡಿದ ಭರವಸೆಗಳು ಏನಿತ್ತು?
1.ಮದುವೆಯಾದ ಎಲ್ಲ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂ.
2. ಒಂದು ಎಕರೆಯಲ್ಲಿ ಬೆಳೆಯುವ 21 ಕ್ವಿಂಟಾಲ್ ಭತ್ತಕ್ಕೆ ತಲಾ 3,100 ರೂ.
3. 500 ರೂ.ಗೆ ಗ್ಯಾಸ್ ಸಿಲಿಂಡರ್
4. ಬಿಪಿಎಲ್ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಜನಿಸಿದಾಗ 1.5 ಲಕ್ಷ ರೂ.ಗಳ ಬಾಂಡ್
5. ಜಮೀನು ರಹಿತ ಕೃಷಿ ಕಾರ್ಮಿಕರಿಗೆ ವಾರ್ಷಿಕ 10 ಸಾವಿರ ರೂ. ಧನಸಹಾಯ
ಫಲಿತಾಂಶ ಏನಾಯಿತು?: ಛತ್ತೀಸ್ ಗಢದಲ್ಲಿ 90 ಸ್ಥಾನಗಳಿದ್ದು, ಬಿಜೆಪಿ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 35ಕ್ಕೆ ಸೀಮಿತಗೊಂಡಿದೆ. ಒಂದು ಸ್ಥಾನದಲ್ಲಿ ಇತರರು ಗೆದ್ದಿದ್ದಾರೆ.
ಇದನ್ನೂ ಓದಿ: Assembly Elections 2023 : ಮೋದಿ ಎಂಬ ಗ್ಯಾರಂಟಿ ಎದುರು ಹೀನಾಯವಾಗಿ ಸೋತ ಕಾಂಗ್ರೆಸ್ ಗ್ಯಾರಂಟಿ
ತೆಲಂಗಾಣದಲ್ಲಿ ಕಾಂಗ್ರೆಸ್-ಬಿಆರ್‌ಎಸ್ ಕೊಟ್ಟ ಭರವಸೆಗಳೇನು?
ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು
1.ಮಹಾಲಕ್ಷ್ಮಿ: ಕರ್ನಾಟಕದ ಗೃಹಲಕ್ಷ್ಮಿ ಮಾದರಿಯಲ್ಲಿ ಮನೆ ಯಜಮಾನಿಗೆ 2000 ರೂ.
2. ರೈತು ಭರೋಸಾ: ರೈತರಿಗೆ ಪ್ರತಿ ವರ್ಷ ಎಕರೆಗೆ 15 ಸಾವಿರ ರೂ., ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 12,000 ರೂ., ಭತ್ತದ ಬೆಳೆಗೆ ವರ್ಷಕ್ಕೆ ₹ 500 ಬೋನಸ್
3. ಇಂದಿರಮ್ಮ (ಬಡವರಿಗೆ ಮನೆ ಯೋಜನೆ)
4. ಗೃಹಜ್ಯೋತಿ: ಕರ್ನಾಟಕ ಮಾದರಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್
5. ಯುವ ವಿಕಸಂ-ಮಕ್ಕಳ ಶಿಕ್ಷಣ ಯೋಜನೆ
6. ಚೇಯುತಾ-ಆರೋಗ್ಯ ವಿಮೆ ಮತ್ತು ಪಿಂಚಣಿ ಯೋಜನೆ
7. ವಧುವಿಗೆ 10 ಗ್ರಾಂ ಚಿನ್ನ, ಒಂದು ಲಕ್ಷ ರೂ. ನಗದು ಗಿಫ್ಟ್
ಬಿಆರ್‌ಎಸ್ ನೀಡಿದ ಗ್ಯಾರಂಟಿಗಳೇನು?
1. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ 5 ಲಕ್ಷದವರೆಗೂ ಉಚಿತ ವಿಮೆ
2. ರೈತ ಬಂಧು ಯೋಜನೆಯಡಿಯ ಸಹಾಯ ಧನ ಮೊತ್ತ 10 ಸಾವಿರ ರೂ.ನಿಂದ 16 ಸಾವಿರ ರೂ.ಗೆ ಏರಿಕೆ
3. 400 ರೂ.ಗೆ ಗ್ಯಾಸ್ ಸಿಲಿಂಡರ್
ಫಲಿತಾಂಶ ಏನಾಯಿತು?: ತೆಲಂಗಾಣದಲ್ಲಿ 119 ಕ್ಷೇತ್ರಗಳಿದ್ದು, ಕಾಂಗ್ರೆಸ್ 64 ಸ್ಥಾನಗಳೊಂದಿಗೆ ಸರಳ ಬಹುಮತ ಪಡೆದಿದೆ. ಕೆ. ಚಂದ್ರಶೇಖರ್ ಅವರ ಬಿಆರ್‌ಎಸ್ 39 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ ಎಂಟು, ಎಐಎಂಐಎಂ 7 ಮತ್ತು ಇತರರು ಒಂದು ಸ್ಥಾನ ಗೆದ್ದಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: https://vistaranews.com/tag/assembly-election-2023