Site icon Vistara News

Assembly Elections 2023 : ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿಕೆಯ ಸಂಕೇತ: ಡಿಕೆಶಿ

DK shivakumar

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆ (Assembly Elections 2023) ಫಲಿತಾಂಶವು ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮುಂದುವರಿದಿರುವುದರ ಸಂಕೇತ (Congress dominance in South India) ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ತಿಳಿಸಿದ್ದಾರೆ.

ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ (Telangana Election) ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಬದಲಾವಣೆ ತರಲು ತೀರ್ಮಾನ ಮಾಡಿದ್ದರು. ಹೀಗಾಗಿ ತೆಲಂಗಾಣದಲ್ಲಿ ನಿಚ್ಚಳ ಬಹುಮತ ಸಿಕ್ಕಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನೆರೆ ರಾಜ್ಯಗಳ ನಮ್ಮ ನಾಯಕರು ಇಲ್ಲಿ ಪ್ರತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದು, ಚುನಾವಣೆ ಫಲಿತಾಂಶದ ನಂತರ ಮುಂದಿನ ಕ್ರಮಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ. ಪ್ರತಿ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳನ್ನು ಕರೆ ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ತೆಲಂಗಾಣ ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದು ನನ್ನ ವೈಯಕ್ತಿಕ ಗೆಲುವಲ್ಲ

ಈ ಗೆಲುವನ್ನು ನಿಮ್ಮ ವೈಯಕ್ತಿಕ ಗೆಲುವು ಎಂದು ಭಾವಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ, “ಖಂಡಿತ ಇಲ್ಲ. ಇದು ನನ್ನ ವೈಯಕ್ತಿಕ ಗೆಲುವಲ್ಲ. ಇದು ತೆಲಂಗಾಣ ರಾಜ್ಯದ ಜನರ ಗೆಲುವು. ತೆಲಂಗಾಣ ರಾಜ್ಯ ರಚನೆ ಮಾಡಿದ ಸೋನಿಯಾ ಗಾಂಧಿ ಅವರಿಗೆ ಈ ರಾಜ್ಯದ ಜನರು ಈ ರೀತಿ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಹತ್ತು ವರ್ಷಗಳ ಆಡಳಿತ ನೋಡಿ ಇಲ್ಲಿನ ಜನ ಬೇಸತ್ತಿದ್ದರು. ಹೀಗಾಗಿ ಜನ ಅಭಿವೃದ್ಧಿ ಹಾಗೂ ಪ್ರಗತಿಯ ಬದಲಾವಣೆ ಬಯಸಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟ ಜನರಿಗೆ ಧನ್ಯವಾದಗಳು. ನಾವು ಅವರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ

ರೇವಂತ್ ರೆಡ್ಡಿ ಅವರನ್ನು ಈ ಗೆಲುವಿನ ರೂವಾರಿ ಎಂದು ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ರೇವಂತ್ ರೆಡ್ಡಿ ಅವರು ಟಿಪಿಸಿಸಿ ಅಧ್ಯಕ್ಷರು. ಅವರು ಈ ತಂಡದ ನಾಯಕರಾಗಿದ್ದರು. ನಮ್ಮ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ಮಾಡಿದ್ದು, ಪಕ್ಷ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಿದೆ. ಇಂತಹ ವಿಚಾರವಾಗಿ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ನಾವು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಿದ್ದೇವೆ. ಉಳಿದಂತೆ ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನ ಗೌರವಿಸಿ ಪಾಲಿಸುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Assembly Session: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೊ; ಪಿಡಬ್ಲ್ಯುಡಿ ಎಂಜಿನಿಯರ್‌ಗೆ ಸ್ಪೀಕರ್ ಕ್ಲಾಸ್

ತೆಲಂಗಾಣದ ಜನ ಉತ್ತರ ಕೊಟ್ಟಿದ್ದಾರೆ

ಈ ಗೆಲುವಿನ ನಂತರ ಕೆಸಿಆರ್ ಹಾಗೂ ಕೆಟಿಆರ್ ಅವರಿಗೆ ಯಾವ ಸಂದೇಶ ನೀಡುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, “ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರು ನಮ್ಮ ಬಗ್ಗೆ ಏನೆಲ್ಲ ಟ್ವೀಟ್ ಮಾಡಿದ್ದರೋ ಅದಕ್ಕೆ ತೆಲಂಗಾಣ ರಾಜ್ಯದ ಜನ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

Exit mobile version