ಬೆಂಗಳೂರು: ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ (Assembly Elections 2023) ಮತ ಎಣಿಕೆ (Election Counting) ಡಿಸೆಂಬರ್ 3ರಂದು ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ (Madhya pradesh) ಕಾಂಗ್ರೆಸ್ ಮತ್ತು ರಾಜಸ್ಥಾನದಲ್ಲಿ (Rajasthan Elections) ಬಿಜೆಪಿ ಮುನ್ನಡೆ ಸಾಧಿಸಲಿದೆ ಎನ್ನುವುದು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಯ ಸಾರಾಂಶವಾಗಿತ್ತು. ಆದರೆ, ಎರಡೂ ಪಕ್ಷಗಳಿಗೆ ತಾವು ಎರಡರಲ್ಲೂ ಗೆಲ್ಲುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಇದೆ. ಇದರ ನಡುವೆಯೇ ಒಂದು ವೇಳೆ ಬಿಜೆಪಿಗೆ ಸ್ವಲ್ಪ ಸ್ಥಾನ ಕಡಿಮೆ ಬಂದರೆ ಅದು ತಮ್ಮ ಶಾಸಕರನ್ನು ಸೆಳೆದುಕೊಳ್ಳುವ ಅಪಾಯವಿದೆ ಎನ್ನುವ ಸಂಶಯ ಕಾಂಗ್ರೆಸ್‌ಗೆ ಇದೆ. ಹೀಗಾಗಿ ಅಂಥ ಪರಿಸ್ಥಿತಿಯೊಂದು ನಿರ್ಮಾಣಗೊಂಡರೆ ಶಾಸಕರನ್ನು ಬೇರೆ ಕಡೆಗೆ ಸಾಗಿಸುವ ಪ್ಲ್ಯಾನ್‌ನ್ನು (Resort Politics) ಅದು ಮಾಡಿಕೊಂಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಆಡಳಿತವಿದ್ದ ಹಲವು ರಾಜ್ಯಗಳಲ್ಲಿ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದಾಗ ಕರ್ನಾಟಕ ಅವರ ನೆರವಿಗೆ ಬಂದಿದೆ. ಅಂದರೆ, ಅವರನ್ನು ರೆಸಾರ್ಟ್‌ಗಳಲ್ಲಿ ತಂದಿಟ್ಟು ರಕ್ಷಣೆ ನೀಡಿದ ಉದಾಹರಣೆಗಳಿವೆ. ಇದೇ ಪರಿಸ್ಥಿತಿ ಈ ಬಾರಿಯೂ ನಿರ್ಮಾಣಗೊಂಡರೆ ಕರ್ನಾಟಕ ಸಹಜವಾದ ಆಯ್ಕೆಯಾಗಿರುತ್ತದೆ. ಅದರಲ್ಲೂ ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪ್ರಬಲವಾಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ಇಲ್ಲಿ ರಕ್ಷಣೆ ಸಿಗಬಹುದು. ಅದರಲ್ಲೂ ಮುಖ್ಯವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಕಾಂಗ್ರೆಸ್ ನಾಯಕರಿಗೆ, ಹೈಕಮಾಂಡ್ ಗೆ ಅತೀವವಾದ ವಿಶ್ವಾಸವೂ ಇದೆ. ಸಿಎಂ ಸಿದ್ದರಾಮಯ್ಯ ಅವರು ಕೂಡಾ ಬೆಂಗಾವಲಾಗಿ ನಿಲ್ಲಲಿದ್ದಾರೆ ಎನ್ನುವುದು ದಿಟವಾಗಿದೆ. ಹಾಗಿದ್ದರೆ, ಚುನಾವಣೆ ಫಲಿತಾಂಶದ ಬೆನ್ನಲ್ಲೇ ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ಶಾಸಕರು ರಾಜ್ಯಕ್ಕೆ ಶಿಫ್ಟ್ ಆಗ್ತಾರಾ?
ಹೇಗಿದೆ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆ?
ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕಾರ ಎಂದ ಸಮೀಕ್ಷೆ
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಾರ್ಟಿಗೆ ಅಧಿಕಾರವನ್ನು ನೀಡಿವೆ. ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ವಂಚಿತವಾಗಲಿದೆ. ಇಟಿಜಿ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್: 56-72; ಬಿಜೆಪಿ: 108-128; ಇತರರು: 13-21 ಸ್ಥಾನಗಳನ್ನು ಗೆಲ್ಲಲಿದ್ದರೆ, ಪಿಎಂಎಆರ್ಕ್ಯೂ ಪ್ರಕಾರ, ಕಾಂಗ್ರೆಸ್: 69-81 ಬಿಜೆಪಿ: 105-125; ಇತರರು: 5-15 ಹಾಗೂ ಟಿವಿ 9 ಭಾರತ್ ವರ್ಷ್ -ಪೋಲ್ಸ್ಟ್ರಾಟ್ ಸಮೀಕ್ಷೆಯು ಬಿಜೆಪಿ 100-110 ಕಾಂಗ್ರೆಸ್ +: 90-110; ಇತರರು: 05-15 ಸ್ಥಾನಗಳನ್ನು ಗೆಲ್ಲಲಿದ್ದಾರೆಂದು ಹೇಳಿದೆ.
ಅದೇ ರೀತಿ ಜನ್ ಕಿ ಬಾತ್ ಸಮೀಕ್ಷೆಯು ಬಿಜೆಪಿ: 100-122 ಕಾಂಗ್ರೆಸ್: 62-85 ಇತರರು: 14-15 , ಸಿಎನ್ಎನ್ 18 ಸಮೀಕ್ಷೆಯು, ಬಿಜೆಪಿ: 111, ಕಾಂಗ್ರೆಸ್: 74 ,ಇತರೆ: 14 ಹಾಗೂ ಸಟ್ಟಾ ಬಜಾರ್ ಬಿಜೆಪಿ- 115, ಕಾಂಗ್ರೆಸ್- 68 ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕೆಲವೊಂದು ಸಮೀಕ್ಷೆಗಳು ಕಾಂಗ್ರೆಸ್ ಗೆಲುವಿನ ಸೂಚನೆಯನ್ನು ನೀಡಿರುವುದರಿಂದ ಕಾಂಗ್ರೆಸ್ ಕಾದು ನೋಡುವ ತಂತ್ರದಲ್ಲಿದೆ. ಒಂದೊಮ್ಮೆ ಬಿಜೆಪಿಗೆ ಮ್ಯಾಜಿಕ್ ಸಂಖ್ಯೆಯ ಆಸುಪಾಸಿನಲ್ಲೇ ಸೀಟುಗಳು ಬಂದರೆ ಅದು ಕಾಂಗ್ರೆಸ್ ಬುಟ್ಟಿಗೆ ಕೈ ಹಾಕುವ ಅಪಾಯವಿರುವುದರಿಂದ ರೆಸಾರ್ಟ್ ಫಿಕ್ಸ್ ಮಾಡಿಕೊಳ್ಳುವುದು ಗ್ಯಾರಂಟಿ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ಫೈಟ್
ದೈನಿಕ್ ಭಾಸ್ಕರ್ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 95ರಿಂದ 115 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್‌ಗೆ 105ರಿಂದ 120 ದೊರೆಯಲಿವೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 102ರಿಂದ 125 ಮತ್ತು ಬಿಜೆಪಿ100ರಿಂದ 123 ಹಾಗೂ ರಿಪಬ್ಲಿಕ್ ಟಿವಿಯ ಪ್ರಕಾರ, ಕಾಂಗ್ರೆಸ್ 97ರಿಂದ 107 ಮತ್ತು ಬಿಜೆಪಿ 118ರಿಂದ 130 ಸ್ಥಾನಗಳನ್ನು ಗೆಲ್ಲಲಿದೆ. ಟಿವಿ9 ಭರತವರ್ಷದ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ 106ರಿಂದ 116 ಮತ್ತು ಕಾಂಗ್ರೆಸ್ 111ರಿಂದ 117ಕ್ಷೇತ್ರಗಳನ್ನು ಗೆಲ್ಲಲಿದೆ.
ಈವರೆಗೆ ಪ್ರಕಟವಾಗಿರುವ ಎಕ್ಸಿಟ್ ಪೋಲ್ಸ್, ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸಿವೆ. 15 ವರ್ಷಕ್ಕೂ ಹೆಚ್ಚು ಅವಧಿಗೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ತಟ್ಟಿರುವ ಸಂಗತಿ ವ್ಯಕ್ತವಾಗಿದೆ. ಹಾಗಂತ, ಬಿಜೆಪಿಯ ವಿರುದ್ಧ ಮತದಾರರು ಸಂಪೂರ್ಣ ತಿರಾಸ್ಕಾರವನ್ನು ತೋರಿಲ್ಲ ಎಂಬುದು ಗೊತ್ತಾಗುತ್ತದೆ. ಮತದಾರರು ಗೊಂದಲದಲ್ಲಿರುವುದು ಪಕ್ಕಾ ಆಗಿದೆ. ಹಾಗಾಗಿ, ಭಾನುವಾರ ಫಲಿತಾಂಶದ ದಿನ ಒಂಚೂರು ಅಚ್ಚರಿಯನ್ನು ನಿರೀಕ್ಷಿಸಬಹುದಾಗಿದೆ.
ಈ ಎರಡೂ ರಾಜ್ಯಗಳ ಫಲಿತಾಂಶ ಅತಂತ್ರವಾಗುವ ಸಾಧ್ಯತೆಯೂ ಇರುವುದರಿಂದ ಅಲ್ಲಿನ ಶಾಸಕರನ್ನು ಬೇರೆ ಕಡೆಗೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಈ ಬಗ್ಗೆ ಯಾರೂ ಜವಾಬ್ದಾರಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೂ ಕೊಟ್ಟರೆ ವಹಿಸಿಕೊಳ್ಳುವುದಾಗಿ ನುಡಿದಿದ್ದಾರೆ.
ಇದನ್ನೂ ಓದಿ: CM Siddaramaiah : ಪ್ಯಾಲೆಸ್ತೀನ್ ಪರ ನಾಟಕ ತಡೆದ ಪೊಲೀಸರು; ಸಿಎಂ ಸಿದ್ದರಾಮಯ್ಯ ಗರಂ!
ʻʻನನಗೆ ಇನ್ನೂ ಯಾರೂ ಜವಾಬ್ದಾರಿ ಕೊಟ್ಟಿಲ್ಲ. ನನಗೆ ಯಾರೂ ಕರೆ ಮಾಡಿಲ್ಲ. ಈಗ ಎಕ್ಸಿಟ್ ಪೋಲ್ ರಿಸಲ್ಟ್ ಬರ್ತಾ ಇದೆ. ನನಗೆ ನನ್ನದೇ ಆದಂತ ಅಭಿಪ್ರಾಯ ಇದೆ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೇನೆ ವಿಶ್ವಾಸ ಇದೆ. ಯಾವ ಶಾಸಕರು ಎಲ್ಲೂ ಹೋಗಲ್ಲ, ಅದರ ಅವಶ್ಯಕತೆ ಇಲ್ಲ. ಕೆಲವರು ಟ್ರೈ ಮಾಡ್ತಿದ್ದಾರೆ ಅಂತ ಗೊತ್ತಿದೆ. ತೆಲಂಗಾಣದಲ್ಲೂ ಕೂಡ ನಮ್ಮ ಅಭ್ಯರ್ಥಿಗಳನ್ನು ಫೋನ್ ಮಾಡಿ ಟಚ್ ಮಾಡ್ತಿದ್ದಾರೆ ಅಂತ ಮಾಹಿತಿ ಬಂದಿದೆ. ಇದನ್ನೆಲ್ಲ ಅಲ್ಲೇ ಲೋಕಲ್‌ನಲ್ಲೇ ಮ್ಯಾನೇಜ್ ಮಾಡ್ತಾರೆ/ ಆದರೆ, ಪಕ್ಷ ಏನು ಹೇಳುತ್ತದೋ ಆ ಕೆಲಸ ಮಾಡುತ್ತೇನೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.